ಕರ್ನಾಟಕ ಬಂದ್ ಗೂ ಕೊರೋನಾ ಮಾರ್ಗಸೂಚಿ ಕಡ್ಡಾಯ…! ವಾಟಾಳಗೆ ಹೈಕೋರ್ಟ್ ಚಾಟಿ…!!

ಬೆಂಗಳೂರು: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ನಿರ್ಧಾರವನ್ನು ಹಿಂಪಡೆಯುವಂತೆ ಒತ್ತಾಯಿಸಿ ಡಿ.5 ರಂದು ಬಂದ್ ಗೆ ಕರೆ ನೀಡಿರುವ ಕನ್ನಡ ಪರ ಸಂಘಟನೆಗಳಿಗೆ ಹೈಕೋರ್ಟ್ ಶಾಕ್ ನೀಡಿದ್ದು, ಬಂದ್ ವೇಳೆ  ಕೋವಿಡ್ ಮಾರ್ಗಸೂಚಿ ಪಾಲನೆ ಮಾಡಲು ಕೈಗೊಂಡಿರುವ ಕ್ರಮಗಳ ಕುರಿತು ವಿವರಣೆ ನೀಡುವಂತೆ ವಾಟಾಳ್ ನಾಗರಾಜ್ ಪಕ್ಷಕ್ಕೆ ನ್ಯಾಯಾಲಯ ಸೂಚನೆ ನೀಡಿದೆ.

ಸಂಘಟನೆಗಳು,ರಾಜಕೀಯ ಪಕ್ಷಗಳು ನಡೆಸುವ ಜಾಥಾ,ಪ್ರತಿಭಟನೆ,ಸಭೆ,ಸಮಾರಂಭಗಳ ಸಂದರ್ಭದಲ್ಲಿ ಕೋವಿಡ್ ನಿಯಮ ಹಾಗೂ ಮಾರ್ಗಸೂಚಿಗಳ ಉಲ್ಲಂಘನೆಯಾಗುತ್ತದೆ ಎಂದು ಆರೋಪಿಸಿ ಹೈಕೋರ್ಟ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಉಚ್ಛ ನ್ಯಾಯಾಲಯ ಕನ್ನಡ ಚಳುವಳಿ ವಾಟಾಳ್ ಪಕ್ಷವನ್ನು ಪ್ರತಿವಾದಿಯನ್ನಾಗಿಸಿ ನೋಟಿಸ್ ನೀಡಿದೆ.

ಈ ಪ್ರಮುಖ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ವೇಳೆ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ,ಕಾಂಗ್ರೆಸ್,ಜೆಡಿಎಸ್,ಆಪ್ ಹಾಗೂ ಸಿಪಿಐಯನ್ನು ಪ್ರತಿವಾದಿಯನ್ನಾಗಿಸಿದ್ದು, ಈ ಹಿಂದೆ ನಡೆದ ಹಲವು ಜಾಥಾ ಹಾಗೂ ಪ್ರತಿಭಟನೆಯ ವೇಳೆ ಕೋವಿಡ್ ನಿಯಮಗಳನ್ನು ಪಾಲಿಸಲಾಗಿಲ್ಲ.

ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲೂ ತಪ್ಪಿತಸ್ಥರ ಮೇಲೆ ಸರ್ಕಾರ ಕ್ರಮಕೈಗೊಳ್ಳುವಲ್ಲಿ ವಿಫಲವಾಗಿದ್ದು, ಕೆಲವು ಸಂದರ್ಭದಲ್ಲಿ ಕ್ರಮಕೈಗೊಳ್ಳಲು ವಿಳಂಬವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಿಸಿದೆ.  ಪ್ರತಿಭಟನೆ ಅಥವಾ ಸಭೆ ವೇಳೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ. ಪಕ್ಷಗಳು ಈ ಜವಾಬ್ದಾರಿಯನ್ನು ಹೊರಲು ಸಿದ್ಧವಿದೆಯೇ , ಕಾರ್ಯಕರ್ತರಿಗೆ ಈ ಕುರಿತು ಸೂಚನೆ ನೀಡಲು ಪಕ್ಷದ ಮುಖಂಡರು ಸಿದ್ಧವಾಗಿದ್ದಾರಾ ಎಂಬುದರ ಬಗ್ಗೆ ವಿವರಣೆ ಸಲ್ಲಿಸುವಂತೆ ಪಕ್ಷಕ್ಕೆ ನ್ಯಾಯಾಲಯ ಸೂಚಿಸಿದೆ.

ಡಿಸೆಂಬರ್ 5 ರಂದು ನಡೆಯಲಿರುವ ಪ್ರತಿಭಟನೆ ಹಾಗೂ ಬಂದ್ ವೇಳೆಯೂ ಕೋವಿಡ್-19 ಮಾರ್ಗಸೂಚಿ ಉಲ್ಲಂಘನೆಯಾಗೋ ಸಾಧ್ಯತೆ ಇದೆ ಎಂದು ಅರ್ಜಿದಾರರು ಕಳವಳ ವ್ಯಕ್ತಪಡಿಸಿರೋದರಿಂದ ವಾಟಾಳ್ ಪಕ್ಷಕ್ಕೂ ಸೂಚನೆ ನೀಡಲಾಗಿದ್ದು, ಉತ್ತರಿಸುವಂತೆ ನ್ಯಾಯಾಲಯ ಆದೇಶ ಹೊರಡಿಸಿದೆ.

Comments are closed.