ಒಂದೇ ದಿನ ಶಿಕ್ಷಕರು, ವಿದ್ಯಾರ್ಥಿಗಳು ಸೇರಿ 25 ಮಂದಿಗೆ ಕೊರೊನಾ ಸೋಂಕು ಪತ್ತೆ !

ಬೆಂಗಳೂರು : ಶಾಲೆ ಕಾಲೇಜುಗಳು ಪುನರಾರಂಭದ ಬೆನ್ನಲ್ಲೇ ರಾಜ್ಯದಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಹೆಚ್ಚುತ್ತಿದೆ. ಒಂದೇ ದಿನ ರಾಜ್ಯದಲ್ಲಿ 25 ಮಂದಿ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

ಶಾಲಾರಂಭಗೊಂಡು ಮೂರು ದಿನ ಕಳೆಯುಷ್ಟರಲ್ಲಿಯೇ ಒಟ್ಟು 35ಕ್ಕೂ ಅಧಿಕ ಮಂದಿಗೆ ಸೋಂಕು ಒಕ್ಕರಿಸಿದೆ. ಸೋಮವಾರ ಒಂದೇ ದಿನ ರಾಜ್ಯದಲ್ಲಿ ಮತ್ತೆ 21 ಶಿಕ್ಷಕರು, 4 ವಿದ್ಯಾರ್ಥಿಗಳು, ಇಬ್ಬರು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ. ಚಿತ್ರದುರ್ಗ 7, ಚಿಕ್ಕಮಗಳೂರು 5, ಶಿವಮೊಗ್ಗ 4, ಉತ್ತರ ಕನ್ನಡ, ಹಾವೇರಿ ತಲಾ 2, ಬಳ್ಳಾರಿ, ಕೊಪ್ಪಳದಲ್ಲಿ ತಲಾ ಓರ್ವ ಶಿಕ್ಷಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದರೆ, ಯಾದಗಿರಿಯ ಇಬ್ಬರು ಉಪನ್ಯಾಸಕರಲ್ಲಿ ಕೋವಿಡ್ ಪತ್ತೆಯಾಗಿದೆ. ಈ ಪೈಕಿ ಕೊಪ್ಪಳ ಮತ್ತು ಹಾವೇರಿಯ ಒಬ್ಬರು ಶಿಕ್ಷಕರು ಮೊದಲ ದಿನ ಶಾಲೆಗೆ ಹಾಜರಾಗಿರುವುದು ತೀವ್ರ ಆತಂಕ ಸೃಷ್ಟಿಸಿದೆ.

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ 5 ಮಂದಿ ಶಿಕ್ಷಕರ ಜೊತೆಗೆ 4 ಮಂದಿ ವಿದ್ಯಾರ್ಥಿಗಳಲ್ಲಿಯೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಯಾವುದೇ ರೋಗ ಲಕ್ಷಣವಿಲ್ಲದ ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿರುವುದು ಶಿಕ್ಷಣ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ. ಕೊಪ್ಪಳ ಹಾಗೂ ರಾಣಿಬೆನ್ನೂರು ತಾಲೂಕಿನ ಶಿಕ್ಷಕರು ಕಳೆದ ಮೂರು ದಿನಗಳಿಂದಲೂ ಶಾಲೆಗೆ ಹಾಜರಾಗಿದ್ದರು. ಕೊರೊನಾ ಸ್ಯ್ವಾಬ್ ನೀಡಿದ ನಂತರವೂ ಶಿಕ್ಷಕರಿಗೆ ಶಾಲೆಗಳಿಗೆ ಜನವರಿ 1ರಿಂದಲೇ ಬರಬೇಕೆಂಬ ಕಡ್ಡಾಯ ಸೂಚನೆ ನೀಡಲಾಗಿತ್ತು. ಇದೀಗ ಮಕ್ಕಳಿಗೆ ಮಾರ್ಗದರ್ಶನ ಮಾಡಿದ ಇಬ್ಬರು ಶಿಕ್ಷಕರಲ್ಲಿ ಕೊರೊನಾ ಸೋಂಕು ಪತ್ತೆಯಾಗಿರೋದು ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಹಲವು ಶಿಕ್ಷಕರ ಕೊರೊನಾ ವರದಿ ಇನ್ನೂ ಕೈ ಸೇರಿಲ್ಲ. ಆದರೆ ಶಿಕ್ಷಕರು ಶಾಲೆಗಳಿಗೆ ಹಾಜರಾಗುತ್ತಿದ್ದಾರೆ. ಶಿಕ್ಷಣ ಇಲಾಖೆ ಕೊರೊನಾ ತಪಾಸಣಾ ವರದಿ ಕೈ ಸೇರುವ ಮೊದಲೇ ಶಾಲಾರಂಭ ಮಾಡಿ ಎಡವಟ್ಟು ಮಾಡಿಕೊಂಡಿದೆ. ಆದಷ್ಟು ಶೀಘ್ರದಲ್ಲಿಯೇ ಶಿಕ್ಷಕರ ಕೊರೊನಾ ತಪಾಸಣಾ ವರದಿಯನ್ನು ನೀಡುವುದು ಒಳಿತು, ಇಲ್ಲವಾದ್ರೆ ಕೊರೊನಾ ಸೋಂಕನ್ನು ಶಿಕ್ಷಣ ಇಲಾಖೆಯೇ ಹರಡಿದಂತಾಗೋದ್ರಲ್ಲಿ ಅನುಮಾನವೇ ಇಲ್ಲಾ.

Comments are closed.