ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಸಾವನ್ನಪ್ಪಿದ ಯಕ್ಷಗಾನ ಕಲಾವಿದ ಸಾಧುಕೊಠಾರಿ

ಬ್ರಹ್ಮಾವರ : ಬಡಗುತಿಟ್ಟಿನ ಖ್ಯಾತ ಯಕ್ಷಗಾನ ಕಲಾವಿದ ಸಾಧು ಕೊಠಾರಿ ( 58 ವರ್ಷ) ಅವರು ರಂಗಸ್ಥಳದಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯ ಕೋಟ ಸಮೀಪದ ಕಾಜ್ರಳ್ಳಿಯ ಕಲ್ಬೆಟ್ಟು ಎಂಬಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನದ ವೇಳೆಯಲ್ಲಿ ಈ ಘಟನೆ ನಡೆದಿದೆ.

ಸಾಧು ಕೊಠಾರಿ ಅವರು ಮಂದಾರ್ತಿ ಮೇಳದ ಪ್ರಧಾನ ವೇಷಧಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಲ್ಬೆಟ್ಟುವಿನಲ್ಲಿ ಮಹಾಕಲಿ ಮಗದೇಂದ್ರ ಯಕ್ಷಗಾನ ಪ್ರಸಂಗ ಪ್ರದರ್ಶನಗೊಳ್ಳುತ್ತಿತ್ತು. ಬೆಳಗಿನ ಜಾವ 3 ಗಂಟೆಯ ಸುಮಾರಿಗೆ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ರಂಗಸ್ಥಳದಲ್ಲಿಯೇ ಅಸ್ವಸ್ಥಗೊಂಡಿದ್ದ ಅವರನ್ನು ನೋಡಿದ ಪ್ರಧಾನ ಭಾಗವತ ಸದಾಶಿವ ಅಮೀನ್ ಹಾಗೂ ಇತರ ಕಲಾವಿದರು ಕೂಡಲೇ ಚೌಕಿಗೆ ಕರೆದೊಯ್ದು ವೇಷ ತೆಗೆಸಿ, ಕೂಡಲೇ ಅವರನ್ನು ಬ್ರಹ್ಮಾವರದ ಆಸ್ಪತ್ರೆಗೆ ಕರೆದೊಯ್ಯುವ ವೇಳೆಯಲ್ಲಿ ಸಾವನ್ನಪ್ಪಿದ್ದಾರೆ.

ಕಳೆದ 40 ವರ್ಷಗಳಿಂದಲೂ ಯಕ್ಷಗಾನ ಕಲಾವಿದರಾಗಿ ಗುರುತಿಸಿಕೊಂಡಿದ್ದರು. ಕಳೆದ ಕೆಲ ವರ್ಷಗಳಿಂದಲೂ ಮಂದಾರ್ತಿ ಮೇಳದಲ್ಲಿ ಕಲಾವಿದರಾಗಿ ಗುರುತಿಸಿಕೊಂಡಿದ್ದ ಸಾಧು ಕೊಠಾರಿ ಬಡಗುತಿಟ್ಟಿನ ಯಕ್ಷಗಾನ ಸಾಕಷ್ಟು ಹೆಸರು ಮಾಡಿದ್ದರು. ಬಾರಕೂರಿನಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು.

Comments are closed.