ಕೋವಿಶೀಲ್ಡ್ ಸುರಕ್ಷಿತ…! ಸ್ವತಃ ಲಸಿಕೆ ಪಡೆದು ಗ್ಯಾರಂಟಿ ನೀಡಿದ ಸೀರಮ್ ಸಿಇಓ…!!

ಪುಣೆ: ಭಾರತದಾದ್ಯಂತ‌ ಇನ್ನಿಲ್ಲದ ಸಂಕಷ್ಟ ಸೃಷ್ಟಿಸಿದ್ದ ಕೊರೋನಾ ವೈರಸ್ ಗೆ ಇಂದಿನಿಂದ ಕೋವಿಶೀಲ್ಡ್ ಲಸಿಕೆ ವಿತರಣೆ ಆರಂಭವಾಗಿದ್ದು, ಲಸಿಕೆ ಬಗೆಗಿನ ಆತಂಕಗಳನ್ನು ದೂರ ಮಾಡುವ ನಿಟ್ಟಿನಲ್ಲಿ ಕೋವಿಶೀಲ್ಡ್ ಉತ್ಪಾದಿಸಿದ ಸೀರಮ್ ಕಂಪನಿ ಸಿಇಓ ಸ್ವತಃ ಲಸಿಕೆ ಪಡೆದಿದ್ದಾರೆ.

ಭಾರತದ ಎಲ್ಲ ರಾಜ್ಯಗಳಲ್ಲಿ ಇಂದಿನಿಂದ‌ ಮೊದಲ ಆದ್ಯತೆಯಾಗಿ ಆರೋಗ್ಯ ಕಾರ್ಯಕರ್ತೆಯರಿಗೆ ಕೋವಿಶೀಲ್ಡ್ ವಾಕ್ಸಿನೇಶನ್ ನೀಡಲಾಗುತ್ತಿದೆ. ಈ ಮಹಾ ಅಭಿಯಾನಕ್ಕೆ ಪ್ರಧಾನಿ‌ಮೋದಿ ಚಾಲನೆ ನೀಡಿದ್ದಾರೆ.

ಇನ್ನು ಭಾರತದಲ್ಲೇ ವಾಕ್ಸಿನೇಶನ್ ಉತ್ಪಾದನೆ ಮಾಡಿರೋ ದೇಶದ ಅತಿದೊಡ್ಡ ಫಾರ್ಮಾಸ್ಯೂಟಿಕಲ್ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಓ ಆದಾರ್ ಪೂನಾವಾಲಾ ಕೂಡ ಇಂದು ಲಸಿಕೆ ಪಡೆದಿದ್ದಾರೆ.

ಪೂನಾವಾಲಾಗೆ ಇಂದು ಅವರದ್ದೇ ಕಂಪನಿಯ ಕೋವಿಶೀಲ್ಡ್ ಲಸಿಕೆ ನೀಡಲಾಗಿದೆ. ಲಸಿಕೆ ಪಡೆಯುತ್ತಿರುವ ವಿಡಿಯೋವನ್ನು ಪೂನಾ ವಾಲಾ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೋ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿರೋ ಪೂನಾವಾಲಾ, ಅತಿದೊಡ್ಡ ವಾಕ್ಸಿನೇಶನ್ ಅಭಿಯಾನ ಆರಂಭಿಸಿರೋ ಭಾರತ ಹಾಗೂ ಪ್ರಧಾನಿಯವರನ್ನು ನಾನು ಅಭಿನಂದಿಸುತ್ತೇನೆ. ಇಂಥಹದೊಂದು ಐತಿಹಾಸಿಕ ಕಾರ್ಯದಲ್ಲಿ ಕೋವಿಶೀಲ್ಡ್ ಕೂಡ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆಇದೆ.


ಲಸಿಕೆಯ ಗುಣಮಟ್ಟ ಹಾಗೂ ಪರಿಣಾಮದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಾನು ಕೂಡ ಸಿಬ್ಬಂದಿಗಳ ಜೊತೆ ಲಸಿಕೆ ಪಡೆದಿದ್ದೇನೆ ಎಂದಿದ್ದಾರೆ.

ಭಾರತದಲ್ಲಿ ಪ್ರಸ್ತುತ ಸೀರಮ್ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್ ಹಾಗೂ ಭಾರತ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಕೋವ್ಯಾಕ್ಸಿನ್ ಬಳಕೆಗೆ ಅನುಮತಿ ನೀಡಲಾಗಿದ್ದು, ಇಂದಿನಿಂದ ಲಸಿಕೆ ವಿತರಣೆ ಆರಂಭವಾಗಿದೆ.

ಭಾರತದಲ್ಲಿ ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ವಿತರಿಸುವ ಗುರಿ ಹೊಂದಲಾಗಿದೆ.

Comments are closed.