ವ್ಯರ್ಥವಾಯ್ತು ಹಳ್ಳಿಹಕ್ಕಿ ಕಸರತ್ತು…ಸಚಿವ ಸ್ಥಾನದ ಕನಸು ಭಗ್ನವಾಯ್ತು…! ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂ ಕೋರ್ಟ್…!!

ಸಚಿವರಾಗುವ ಕನಸಿನಲ್ಲಿದ್ದ ಮಾಜಿ ಸಚಿವ ಎಚ್.ವಿಶ್ವನಾಥ್  ಗೆ ಸುಪ್ರೀಂ ಕೋರ್ಟ್ ತೀರ್ಪು ನಿರಾಸೆ ತಂದಿದ್ದು, ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಹಳ್ಳಿಹಕ್ಕಿಗೆ ಶಾಕ್ ನೀಡಿದೆ.  ಸುಪ್ರೀಂ ಕೋರ್ಟ್ ನ  ಈ ಆದೇಶದೊಂದಿಗೆ ಎಚ್.ವಿಶ್ವನಾಥ್ ಸಂಪುಟ ಸೇರುವ ಕೊನೆಯ ಅವಕಾಶಕ್ಕೂ ತೆರೆ ಎಳೆದಂತಾಗಿದೆ.

ಮೈತ್ರಿ ಸರ್ಕಾರ ಉರುಳಿಸಿದ 17 ಶಾಸಕರ ಪೈಕಿ ಒಬ್ಬರಾದ ಎಚ್.ವಿಶ್ವನಾಥ್,  ಬಿಎಸ್ವೈ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾಗಿದ್ದರು. ನಂತರ ಎಚ್.ವಿಶ್ವನಾಥ್ ಸೇರಿದಂತೆ ಬಹುತೇಕ ಶಾಸಕರನ್ನು ಪಕ್ಷಾಂತರ ಕಾಯಿದೆ ಅಡಿಯಲ್ಲಿ ಸ್ಪೀಕರ್ ಅನರ್ಹಗೊಳಿಸಿದ್ದರು.  ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರೂ ಸ್ಪೀಕರ್ ಆದೇಶ ಎತ್ತಹಿಡಿದಿದ್ದ ನ್ಯಾಯಾಲಯ, ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಯಾಗುವ ತನಕ ಅನರ್ಹತೆ ಮುಂದುವರೆಯಲಿದೆ ಎಂದಿತ್ತು.

ಬಳಿಕ ಹುಣಸೂರು ಕ್ಷೇತ್ರದ ಬೈ ಎಲೆಕ್ಷನ್ ನಲ್ಲಿ ಸ್ಪರ್ಧಿಸಿದ್ದ ಎಚ್.ವಿಶ್ವನಾಥ್ ಸೋಲು ಕಂಡಿದ್ದರು. ಬಳಿಕ ಅವರನ್ನು ಬಿಜೆಪಿ ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಿತ್ತು. ಆದರೆ ಅವರಿಗೆ ಸಚಿವ ಸ್ಥಾನ ನೀಡಲು ಕಾನೂನು ಅಡ್ಡಿಯಾಗಿತ್ತು.  ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾದ ಬಹುತೇಕ ಶಾಸಕರು ಈಗ ಸಚಿವರಾಗಿದ್ದಾರೆ. ಆದರೆ ಹಳ್ಳಿಹಕ್ಕಿ ಮಾತ್ರ ಒಂಟಿಯಾದಂತಾಗಿದೆ.

ಈ ಮಧ್ಯೆ ವಿಶ್ವನಾಥ್ ಗೆ ಮಂತ್ರಿ ಸ್ಥಾನ ನೀಡುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಖಾಸಗಿ ದೂರು ದಾಖಲಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ನಾಮನಿರ್ದೇಶನಗೊಂಡರೇ ಮಂತ್ರಿಯಾಗಲು ಸಾಧ್ಯವಿಲ್ಲ. ಚುನಾವಣೆಯಲ್ಲಿ ಗೆದ್ದು ಶಾಸಕರಾದರೇ ಮಾತ್ರ ಮಂತ್ರಿ ಸ್ಥಾನ ಎಂದು ತೀರ್ಪು ನೀಡಿತ್ತು.

ಈ ತೀರ್ಪು ಪ್ರಶ್ನಿಸಿದ್ದ ಎಚ್.ವಿಶ್ವನಾಥ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಈಗ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್ ಸಚಿವರಾಗಲು ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು ಎಂಬ ಸ್ಪಷ್ಟ ಆದೇಶ ನೀಡಿದೆ. ಇದರಿಂದ ವಿಶ್ವನಾಥ್ ಸಮ್ಮಿಶ್ರ ಸರ್ಕಾರ ಉರುಳಿಸಲು ನಡೆಸಿದ ಸರ್ಕಸ್ ವ್ಯರ್ಥವಾದಂತಾಗಿದ್ದು, ನನ್ನನ್ನು ರಾಜಕೀಯವಾಗಿ ಶೂಟ್ ಮಾಡಲಾಗಿದೆ ಎಂದು ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.