ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಖಚಿತ : ವಾಟಾಳ್ ನಾಗರಾಜ್

ಹಾಸನ : ಮರಾಠ ಅಭಿವೃದ್ದಿ ಪ್ರಾಧಿಖಾರ ರಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಿ ಡಿಸೆಂಬರ್ 5ರಂದು ಕರೆ ನೀಡಿರುವ ಕರ್ನಾಟಕ ಬಂದ್ ನೂರಕ್ಕೆ ನೂರರಷ್ಟು ನಡೆಯುವುದು ಖಚಿತ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಹಳ ಗಂಭೀರವಾದ ವಿಚಾರದಲ್ಲಿ ಕರ್ನಾಟಕ ಬಂದ್ ಕರೆದಿದ್ದೇವೆ. 5ನೇ ತಾರೀಖು ಬೆಳಿಗ್ಗೆ 6 ಗಂಟೆ ಸಮಯದಿಂದ ಸಂಜೆ 5 ಗಂಟೆವರೆಗೆ ಬಂದ್ ನಡೆಯಲಿದೆ. ಇದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಕನ್ನಡಿಗರ ನಡುವಿನ ಹೋರಾಟವಾಗಿದೆ. ಯಡಿಯೂರಪ್ಪರವರ ಸಚಿವ ಸಂಪುಟದ ಸದಸ್ಯರು, ಶಾಸಕರು ಬಂದ್ ವಿರೋಧಿಸಿ ಮಾತನಾಡಿಲ್ಲ. ಆದರೆ, ಸಿಎಂ ಯಡಿಯೂರಪ್ಪ ಅವರು ಯಾವ ರೀತಿ ಬಂದ್ ನಡೆಸುತ್ತಾರೆ ನಾನು ನೋಡುತ್ತೆನೆ ಎಂದು ಹೇಳಿದ್ದಾರೆ. ಅವರಿಗೆ ಅಂದೇ ನಾವು ಉತ್ತರ ನೀಡುತ್ತೇವೆ ಎಂದು ಸವಾಲು ಹಾಕಿದರು.

ಚುನಾವಣೆ ಅಧಿಕಾರಕ್ಕೋಸ್ಕರ ವಿರೋಧ ಪಕ್ಷದವರು ಈ ಬಗ್ಗೆ​ ಏನು ಮಾತನಾಡುತ್ತಿಲ್ಲ. ಯಡಿಯೂರಪ್ಪ ಬಹಳ ದ್ವೇಷಿಯಾಗಿದ್ದು, ಅಧಿಕಾರಕ್ಕಾಗಿ ಯಾರ ಜೊತೆ ಬೇಕಾದರೂ ಮೈತ್ರಿ ಮಾಡಿಕೊಳ್ಳುತ್ತಾರೆ. ಯಾರನ್ನು ಮಂತ್ರಿ ಮಾಡಬೇಕು ಎಂಬುದರ ಬಗ್ಗೆ ಯೊಜನೆ ಮಾಡುತ್ತಾರೆ. ಮಾಜಿ ಮುಖ್ಯಮಂತ್ರಿ ದಿವಂಗತ ಬಂಗಾರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕಾವೇರಿ ನದಿ ನೀರಿನ ಹೋರಾಟದಲ್ಲಿ ಸುಗ್ರಿವಾಜ್ಞೆ ಹೊರಡಿಸಿದರು. ಕರ್ನಾಟಕದಲ್ಲಿ ಅಂತಹ ಸಜ್ಜನ ರಾಜಕಾರಣಿಗಳು ಇದ್ದರು ಎಂದು ನೆನಪಿಸಿದರು.

ಕಾರವಾರ ನಿಪ್ಪಾಣಿ ಗಡಿ ಭಾಗದ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿದೆ. ಮರಾಠರು ಬಹುಸಂಖ್ಯಾತ ಜನಾಂಗ ಎಂದು ಪ್ರಾಧಿಕಾರ ರಚನೆ ಮಾಡಿದ್ದಾರೆ. ಸೊಲ್ಲಾಪುರದಲ್ಲಿ 1 ಲಕ್ಷ ಕನ್ನಡಿಗರಿದ್ದಾರೆ. ಅವರಿಗೆ ನೀವು ಯಾವುದೇ ಸಹಾಯ ಮಾಡಿಲ್ಲ. ಪ್ರಾಧಿಕಾರ ರಚನೆ ಹಿಂದೆ ಬಹಳ ಸಂಚಿದೆ. ಮರಾಠಿಗರ ಮತ ಪಡೆಯಲು ಪ್ರಧಾನಿಯವರು ಇದರ ಹಿಂದೆ ಇದ್ದಾರೆ. ನಾಳೆ ತಮಿಳು, ಕೇರಳ, ತೆಲುಗರು ಕೂಡ ಪ್ರಾಧಿಕಾರ ರಚನೆಗೆ ಕೇಳುತ್ತಾರೆ. ಕೊಡದಿದ್ದರೆ ನ್ಯಾಯಲಯಕ್ಕೆ ಹೋಗುತ್ತಾರೆ. ಗಡಿ ಭಾಗಗಳಲ್ಲಿ ಕನ್ನಡ ಶಾಲೆ ಮುಚ್ಚಿವೆ. ಅದಕ್ಕೆ ತೆಗೆದುಕೊಂಡ ಕ್ರಮವೇನು? ಪ್ರಾಧಿಕಾರ ರಚನೆ ಅಕ್ಷಮ್ಯ ಅಪರಾಧ. ನಾವು ಈ ಬಗ್ಗೆ ಜೈಲಿಗೆ ಹೋಗುತ್ತೇವೆ. ನಮ್ಮನ್ನು ಬಂಧಿಸಿ, ಜೈಲಿನಲ್ಲಿ ಇಡಿ. ಬೇಕಾದರೆ ಗುಂಡು ಹಾರಿಸಿ ಎಂದು ಆಕ್ರೋಶದಿಂದ ಹೇಳಿದರು.

ರಾಜ್ಯದಲ್ಲಿ ಸುಮಾರು 1600 ಸಂಘಟನೆಗಳು ಬಂದ್ ಗೆ​ ಬಹಿರಂಗ ಬೆಂಬಲ ಕೊಟ್ಟಿವೆ. ಬಸ್ ನಿಲ್ದಾಣಗಳಿಗೆ ಸಾರ್ವಜನಿಕರು ಬರುವುದು ಬೇಡ. ಬಸ್ ಸೌಲಭ್ಯ ಇರುವುದಿಲ್ಲ. ಟ್ಯಾಕ್ಸಿ ಆಟೋ ಚಾಲಕ ಸಂಘಟನೆಗಳು ನಮ್ಮ ಬಂದ್ ಗೆ​ ಬೆಂಬಲ ನೀಡಿವೆ. ವಕೀಲರ ಸಂಘ ಸಂಪೂರ್ಣ ಬೆಂಬಲ ನೀಡಿದೆ. ಅಂದು ನ್ಯಾಯಾಲಗಳು ಬಂದ್ ಆಗುತ್ತವೆ. ಸರ್ಕಾರಿ ನೌಕರರು ಕೆಲಸಕ್ಕೆ ಬರಬೇಡಿ, ರೈಲು ಸಂಚಾರ ಇರುವುದಿಲ್ಲ. ಏನಾದರೂ ರೈಲು ಹೊರಟರೆ ರೈಲ್ವೆ ಹಳಿಗಳ ಮೇಲೆ ಜನ ಕುಳಿತು ಪ್ರತಿಭಟನೆ ನಡೆಸಲಿದ್ದಾರೆ. ಜನರಿಗೆ ತೊಂದರೆಯಾದರೆ ಕರ್ನಾಟಕಕ್ಕೆ ಬೆಂಕಿ ಬೀಳಲಿದೆ ಎಂದು ಎಚ್ಚರಿಸಿದರು.

Comments are closed.