ಹೈಕಮಾಂಡ್ ಕೊಡ್ತಿಲ್ಲ…! ಶಾಸಕರು ಬಿಡ್ತಿಲ್ಲ…!! ಇದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಕತೆ…!!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಇನ್ನೂ ಮುಂದುವರಿದಿದ್ದು, ನೀ ಕೊಡೆ ನಾ ಬಿಡೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಈ ಮಧ್ಯೆ ಸಿಎಂ ಬಿಎಸ್ವೈ ಎರಡು ದಿನಗಳ ಜಿಲ್ಲಾ ಪ್ರವಾಸ ಇಂದು ಅಂತ್ಯಗೊಳ್ಳಲಿರುವ ಹಿನ್ನೆಲೆ ಸಚಿವ ಸ್ಥಾನ ಆಕಾಂಕ್ಷಿಗಳು ರಾಜಧಾನಿಯತ್ತ ಮುಖ ಮಾಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಇನ್ನೂ ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿಲ್ಲ. ಹೀಗಾಗಿ ಸಚಿವ ಸ್ಥಾನ ಆಕಾಂಕ್ಷಿಗಳಲ್ಲಿ ನಿಧಾನಕ್ಕೆ ಅಸಮಧಾನ ಭುಗಿಲೇಳಲು ಆರಂಭಿಸಿದೆ . ಮೊನ್ನೆಯಷ್ಟೇ ಹೈಕಮಾಂಡ್ ಭೇಟಿಗೆ ತೆರಳಿದ್ದ ಸಿಎಂ ಬಿಎಸ್ವೈ ಸಚಿವರ ಲಿಸ್ಟ್ ನೊಂದಿಗೆ ಹಿಂತಿರುಗುವ ಭರವಸೆ ಇತ್ತಾದರೂ ಖಾಲಿ ಕೈಯಲ್ಲಿ ನಗರಕ್ಕೆ ಮರಳಿದ್ದರು. ಇದು ಸಚಿವರಾಗೋ ಕನಸಿನಲ್ಲಿರೋ ಶಾಸಕರ ನಿದ್ದೆಗೆಡಿಸಿದೆ.

ದೆಹಲಿಯಿಂದ ವಾಪಸ್ಸಾದ ಸಿಎಂ ತರಾತುರಿಯಲ್ಲಿ ಜಿಲ್ಲಾ ಪ್ರವಾಸ ಆರಂಭಿಸಿದ್ದು, ಸಚಿವ ಸ್ಥಾನಕ್ಕೆ ದುಂಬಾಲು ಬಿದ್ದಿರೋ ಶಾಸಕರಿಂದ ದೂರ ಉಳಿಯೋ ಸರ್ಕಸ್ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಚಾಮರಾಜನಗರ ಪ್ರವಾಸದಲ್ಲಿದ್ದ ಸಿಎಂ ಬಿಎಸ್ವೈ ಇಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳು ಸಿಎಂ ಭೇಟಿಗಾಗಿ ಬೆಂಗಳೂರಿನತ್ತ ಮುಖಮಾಡುತ್ತಿದ್ದಾರೆ.

ಎಂಟಿಬಿ ನಾಗರಾಜ್, ನೂತನ ಶಾಸಕ ಮುನಿರತ್ನ, ಸಿ.ಪಿ.ಯೊಗೇಶ್ವರ್, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಸೇರಿದಂತೆ ಹಲವು ಶಾಸಕರು ವಿಧಾನಸೌಧದತ್ತ ಮುಖ ಮಾಡಿದ್ದು, ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಲಾಭಿ ನಡೆಸೋ ಪ್ರಯತ್ನದಲ್ಲಿದ್ದಾರೆ.ಈ ಮಧ್ಯೆ ಮೂಲಗಳ ಮಾಹಿತಿ ಪ್ರಕಾರ ಸಿಎಂ ಮೇಲೆ ಅಸಮಧಾನಗೊಂಡಿರುವ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಓವರ್ ಟೇಕ್ ಮಾಡಿ ಹೈಕಮಾಂಡ್ ಜೊತೆ ನಿಕಟ ಸಂಪರ್ಕ ಹೊಂದಿದ್ದು ಲಾಭಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.

ಆದರೇ ಎಲ್ಲವೂ ಕೇವಲ ಲೆಕ್ಕಾಚಾರವಾಗಿಯೇ ಉಳಿದು ಹೋಗುತ್ತಿದ್ದು, ನಿಗಮ ಮಂಡಳಿ ನೇಮಕ ಮುಗಿದರೂ ಸಚಿವ ಸ್ಥಾನ ಆಕಾಂಕ್ಷಿಗಳ ಆಸೆ ಈಡೇರದೇ ಇರೋದು ಪಕ್ಷದಲ್ಲಿ ಆಂತರಿಕವಾಗಿ ಎಲ್ಲವೂ ಸರಿಯಿಲ್ಲ ಎಂಬ ಭಾವನೆ ಮೂಡಿಸಿದೆ.

Comments are closed.