ಸಿಡಿ ಪ್ರಕರಣಕ್ಕೆ ಟ್ವಿಸ್ಟ್ : ಕೊನೆಗೂ ದಾಖಲಾಯ್ತು ಪ್ರಕರಣ…!!!

ಬೆಂಗಳೂರು : ಸಿಡಿ ಪ್ರಕರಣದ ಬೆನ್ನುಬಿದ್ದಿರುವ ಎಸ್ ಐಟಿ ತನಿಖೆ ಚುರುಕುಗೊಂಡ ಬೆನ್ನಲ್ಲೇ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ದೂರು ದಾಖಲಾಗಿದೆ.

ಸಿಡಿ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ವನ್ನುಂಟು ಮಾಡಿತ್ತು. ರಾಜ್ಯ ಸರಕಾರ ಎಸ್ ಐಟಿ ರಚನೆ ಮಾಡಿ ತನಿಖೆಯ ಜವಾಬ್ದಾರಿ ವಹಿಸಿತ್ತು.‌ ಅಲ್ಲದೇ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ 5 ಮಂದಿ ಆರೋಪಿಗಳನ್ನು ಎಸ್ ಐಟಿ ವಶಕ್ಕೆ ಪಡೆದಿದೆ. ಆದರೆ ಎಫ್‍ಐಆರ್ ದಾಖಲಾಗದಿದ್ದರೆ ತನಿಖೆ ಮುಂದುವರಿಯೋದಕ್ಕೆ ಕಾನೂನಿನ ತೊಡಕು ಎದುರಾಗಲಿದೆ. ಹೀಗಾಗಿ ಎಫ್‍ಐಆರ್ ದಾಖಲಿಸಲು ಎಸ್‍ಐಟಿ ತಯಾರಿ ನಡೆಸಿತ್ತು.

ಒಂದೊಮ್ಮೆ ಎಫ್‍ಐಆರ್ ದಾಖಲಾಗದಿದ್ದರೆ, ಕೊರ್ಟ್ ಮೊರೆ ಹೋಗುವ ಸಾಧ್ಯತೆಯಿತ್ತು. ಅಷ್ಟೇ ಅಲ್ಲದೇ ಎಸ್‍ಐಟಿ ತನಿಖೆಯ ಕುರಿತು ಹೈ ಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಲು ತಯಾರಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಚಿವರಿಂದ ದೂರು ಪಡೆದಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ನೀಡಿದ ದೂರನ್ನು ಆಧರಿಸಿ ಪೊಲೀಸರು ಎಫ್‍ಐಆರ್ ದಾಖಲಿಸಿಕೊಳ್ಳಲಿದ್ದಾರೆ. ಜಾರಕಿಹೊಳಿ ಆಪ್ತ ಹಾಗೂ ಮಾಜಿ ಶಾಸಕ ನಾಗರಾಜ್ ಅವರು ರಮೇಶ್ ಜಾರಕಿಹೊಳಿಯವರ ದೂರನ್ನು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಬೆಂಬಲಿಗರ ಮೂಲಕ ರಮೇಶ್ ಜಾರಕಿಹೊಳಿ ದೂರು ದಾಖಲಿಸಿದ್ದು, ದೂರಿನಲ್ಲಿ ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಕೇವಲ ಬ್ಲಾಕ್‍ಮೇಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ನಾಲ್ಕು ತಿಂಗಳ ಹಿಂದಿನ ಷಡ್ಯಂತ್ರವನ್ನು ಸಹ ಉಲ್ಲೇಖಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಒಟ್ಟಿನಲ್ಲಿ ಸಿಡಿ ಪ್ರಕರಣ ತೀವ್ರ ಕುತೂಹಲವನ್ನು ಮೂಡಿಸಿದೆ.

Comments are closed.