ಸಿಡಿ ರಿಲೀಸ್ ಗೆಲ್ಲ ರಾಜೀನಾಮೆ ಕೊಟ್ರೆ ವಿಧಾನಸೌಧ ಖಾಲಿಯಾಗುತ್ತೆ…! ಬಿಜೆಪಿ ಎಂಎಲ್ಎ ಬಾಲಚಂದ್ರ ಜಾರಕಿಹೊಳಿ ವಿವಾದಾತ್ಮಕ ಹೇಳಿಕೆ…!!

ರಾಜ್ಯ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ಪಾಲ್ಗೊಂಡಿದ್ದಾರೆ ಎನ್ನಲಾದ ರಾಸಲೀಲೆ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಸಚಿವರ ಸಹೋದರ ಹಾಗೂ ಕೆಎಂಎಫ್ ಅಧ್ಯಕ್ಷ , ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೀಡಿರುವ ಹೇಳಿಕೆಯೊಂದು ಹೊಸ ವಿವಾದ ಸೃಷ್ಟಿಸಿದೆ. ರಮೇಶ್ ಜಾರಕಿಹೊಳಿ ಸಿಡಿ ಕುರಿತು ಮಾತನಾಡಿದ ಬಾಲಚಂದ್ರ  ಈ ಬಗ್ಗೆ ತನಿಖೆಗೆ ಆಗ್ರಹಿಸುತ್ತೇವೆ. ಆದರೆ ವಿಡಿಯೋ ರಿಲೀಸ್ ಆಗಿದ್ದಕ್ಕೆಲ್ಲ ರಾಜೀನಾಮೆ ಕೊಡೋಕೆ ಹೋದ್ರೆ ವಿಧಾನಸೌಧ ಖಾಲಿಯಾಗುತ್ತೆ ಎನ್ನೋ ಲಘುವಾದ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಶಾಸಕರ ಈ ಲಘುವಾದ ಹೇಳಿಕೆ ಇದೀಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ  ಸಹಾಯ ಕೋರಿ ಬಂದ ಯುವತಿಯನ್ನು ಸಚಿವ ರಮೇಶ್ ಜಾರಕಿಹೊಳಿ ದೆಹಲಿಯ ಕರ್ನಾಟಕ ಭವನದಲ್ಲೇ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೀಗಿರುವಾಗಲೇ ಶಾಸಕ ಬಾಲಚಂದ್ರ ಜಾರಕಿಹೊಳಿ ಇದೇನು ದೊಡ್ಡ ಅಪರಾಧವಲ್ಲ. ಇದಕ್ಕೆಲ್ಲ ರಾಜೀನಾಮೆ ಕೊಡೋ ಅಗತ್ಯವಿಲ್ಲ ಎಂಬಂತೆ ಮಾತನಾಡಿದ್ದು ವಿರೋಧ ಪಕ್ಷದವರನ್ನು ಕೆರಳಿಸಿದೆ.

ಅಣ್ಣನ ತಪ್ಪನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ  ಎಲ್ಲ ಸಚಿವ-ಶಾಸಕರದ್ದೂ ಇಂತಹ ವ್ಯವಹಾರಗಳು ಇರುತ್ತವೇ ಎಂಬ ಅರ್ಥ ಬರುವಂತೆ ಬಾಲಚಂದ್ರ ಜಾರಕಿಹೊಳಿ ಮಾತನಾಡಿದ್ದು, ಇಷ್ಟಕ್ಕೆಲ್ಲ ರಾಜೀನಾಮೆ ಕೊಡುತ್ತ ಹೋದರೇ ವಿಧಾನಸೌಧವೇ ಖಾಲಿಯಾಗುತ್ತೆ ಎಂದಿದ್ದಾರೆ.ಇದಕ್ಕೂ ಮುನ್ನ ಸಿಎಂ ಬಿಎಸ್ವೈರನ್ನು ಭೇಟಿ ಮಾಡಿದ ಬಾಲಚಂದ್ರ ಜಾರಕಿಹೊಳಿ ವಿಡಿಯೋದ ಸತ್ಯಾಸತ್ಯತೇ ಅರಿಯಲು  ಸಿಬಿಐ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ಈ ವಿಡಿಯೋದಲ್ಲಿರುವ ಹುಡುಗಿ ಯಾರು? ಆಕೆಯ ಕುಟುಂಬ ಎಲ್ಲಿದೆ? ಅವರ ಸಪೋರ್ಟ್ ಗೆ ನಿಂತ ಪ್ರಭಾವಿ ನಾಯಕರು ಯಾರು? ಇದರ ಹಿಂದಿನ ಉದ್ದೇಶವೇನು ಎಂಬುದರ ಕುರಿತು ಸ್ಪಷ್ಟ ತನಿಖೆಯಾಗಬೇಕು. ವಿದೇಶದಿಂದ ವಿಡಿಯೋ ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗಿದೆ ಎನ್ನುತ್ತಿದ್ದಾರೆ. ಹೀಗಾಗಿ ಸಿಬಿಐ ತನಿಖೆಯಾಗಬೇಕೆಂದು ಒತ್ತಾಯಿಸಿದ್ದೇನೆ ಎಂದಿದ್ದಾರೆ.

ಅಲ್ಲದೇ ರಮೇಶ್ ಜಾರಕಿಹೊಳಿ ಯಾವ ತಪ್ಪು ಮಾಡಿಲ್ಲ. ತಪ್ಪು ಮಾಡಿದ್ದು ಸಾಬೀತಾದರೇ ರಾಜ್ಯದ ಜನತೆಗೆ ಕೈಮುಗಿದು ಕ್ಷಮೆ ಕೇಳಿ ಮನೆಗೆ ಹೋಗುತ್ತಾರೆ. ಆದರೆ ಇದು ಸತ್ಯವಲ್ಲ. ವಿಡಿಯೋ  ಹಿಂದೆ ರಾಜಕೀಯ ಪಿತೂರಿ ಇದೆ. 100 ಕೋಟಿ ಮಾನನಷ್ಟ ಮೊಕದ್ದಮೆ ಹೂಡಲು ಸಿದ್ಧತೆ ನಡೆದಿದೆ ಎಂದಿದ್ದಾರೆ. ಒಟ್ಟಿನಲ್ಲಿ ರಮೇಶ್ ಬೆನ್ನಿಗೆ ನಿಂತ ಬಾಲಚಂದ್ರ ಜಾರಕಿಹೊಳಿ ಹೇಳಿಕೆ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ.

Comments are closed.