ತಮ್ಮನ ಹಾದಿಯಲ್ಲಿ ಅಕ್ಕ…! ಕಾಂಗ್ರೆಸ್ ಸೇರ್ತಾರಂತೆ ಹ್ಯಾಟ್ರಿಕ್ ಶಿವಣ್ಣ ಪತ್ನಿ ಗೀತಾ ಶಿವರಾಜ್ ಕುಮಾರ್…!!

ಬೆಂಗಳೂರು: ಕಳೆದೆರಡು ದಿನಗಳಿಂದ ರಾಜಕೀಯ ವಲಯದಲ್ಲಿ ಚರ್ಚೆಯಲ್ಲಿರೋ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರ ಮತ್ತೊಂದು ಸ್ವರೂಪ ಪಡೆದುಕೊಂಡಿದ್ದು, ಮಧು ಬಂಗಾರಪ್ಪ ಅವರ ಜೊತೆ ಸಹೋದರಿ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ತೆಕ್ಕೆಗೆ ಜಾರಲಿದ್ದಾರೆ ಎನ್ನಲಾಗುತ್ತಿದೆ.

ಕಳೆದ ಹಲವು ವರ್ಷಗಳಿಂದ ಜೆಡಿಎಸ್ ನಲ್ಲಿದ್ದು,ಲೋಕಸಭಾ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸೋತ ಮಧು ಬಂಗಾರಪ್ಪ, ಒಮ್ಮೆ ಜೆಡಿಎಸ್ ನಿಂದ ಲೋಕಸಭಾ ಚುನಾವಣೆ ಕಣಕ್ಕಿಳಿದು ಸೋತ ಗೀತಾ ಶಿವರಾಜ್ ಕುಮಾರ್ ಜೊತೆಯಲ್ಲೇ  ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಮಧು ಬಂಗಾರಪ್ಪ ಮಾಜಿಸಿಎಂ ಸಿದ್ಧರಾಮಯ್ಯನವರನ್ನು ಗುರುವಾರ ಭೇಟಿ ಮಾಡಿದ್ದು, ಏಪ್ರಿಲ್ ನಲ್ಲಿ  ಬೃಹತ್ ಸಮಾವೇಶ ನಡೆಸಿ ಕಾಂಗ್ರೆಸ್ ಸೇರ್ಪಡೆಯಾಗುವುದಾಗಿ ಹೇಳಿದ್ದರು. ಅದರ ಬೆನ್ನಲ್ಲೇ ಶುಕ್ರವಾರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಭೇಟಿ ಮಾಡಿದ ಮಧು ಬಂಗಾರಪ್ಪ ಪಕ್ಷ ಸೇರ್ಪಡೆ ವಿಚಾರ ಚರ್ಚಿಸಿದರು.

ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಮಧು ಬಂಗಾರಪ್ಪ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರಿದ್ರು ಅಂತಾನೇ ಇಟ್ಕೊಳ್ಳಿ ಎನ್ನುವ ಮೂಲಕ ಗೀತಾ ಶಿವರಾಜ್ ಕುಮಾರ್ ತಮ್ಮ ಜೊತೆಯೇ ಕಾಂಗ್ರೆಸ್ ಸೇರ್ಪಡೆಗೊಳ್ಳಲಿದ್ದಾರೆ ಎಂಬ ಗುಟ್ಟು ಬಿಟ್ಟುಕೊಟ್ಟಿದ್ದಾರೆ,  ಹೀಗಾಗಿ ಮುಂದಿನ ದಿನದಲ್ಲಿ ಗೀತಾ ಶಿವರಾಜ್ ಕುಮಾರ್ ಕೂಡ ಕಾಂಗ್ರೆಸ್ ಸೇರೋದು ಬಹುತೇಕ ಖಚಿತವಾಗಿದೆ.

ಮಾಜಿ ಸಿಎಂ ಬಂಗಾರಪ್ಪನವರ ಮಕ್ಕಳ ಪೈಕಿ ಹಿರಿಯ ಪುತ್ರ ಕುಮಾರ್ ಬಂಗಾರಪ್ಪ ಬಿಜೆಪಿ ಸೇರಿ ಸೊರಬ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದಾರೆ. ಇನ್ನು ಮಧು ಬಂಗಾರಪ್ಪ ಜೆಡಿಎಸ್ ನಲ್ಲಿದ್ದು, ರಾಜಕೀಯದಲ್ಲಿ ಸದಾ ತಮ್ಮನ ಜೊತೆಗೆ ಇದ್ದ ಗೀತಾ ಶಿವರಾಜ್ ಕುಮಾರ್ 2014 ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು.

2014 ರಲ್ಲಿ ಜೆಡಿಎಸ್ ನಿಂದ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಿದ್ದ ಗೀತಾ ಶಿವರಾಜ್ ಕುಮಾರ್ ಬಿ.ಎಸ್.ಯಡಿಯೂರಪ್ಪ ವಿರುದ್ಧ 4 ಲಕ್ಷ ಮತಗಳಅಂತರದಿಂದ ಸೋಲನ್ನಪ್ಪಿದ್ದರು. ಬಳಿಕ ರಾಜಕೀಯದಿಂದ ದೂರ ಉಳಿದ ಗೀತಾ, ಕಳೆದ ವಿಧಾನಸಭಾ ಚುನಾವಣೆ ವೇಳೆ ಮಧು ಪರ ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

ಇದೀಗ ರಾಜಕೀಯವಾಗಿ ಪುನಶ್ಚೇತನ ಪಡೆಯಲು ಕಾಂಗ್ರೆಸ್ ಆಶ್ರಯಕ್ಕೆ ಹೊರಟಿರುವ ಮಧು ಬಂಗಾರಪ್ಪ ತನ್ನೊಂದಿಗೆ ಅಕ್ಕ ಗೀತಾ ಶಿವರಾಜ್ ಕುಮಾರ್ ರನ್ನು ಕರೆದೊಯ್ಯುತ್ತಿದ್ದು, ಮುಂದಿನ ದಿನದಲ್ಲಾದರೂ ಕಾಂಗ್ರೆಸ್ ಮಧು ಅದೃಷ್ಟ ಬದಲಾಯಿಸುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

Comments are closed.