ಸಧ್ಯಕ್ಕೆ ಸಿಎಂ ಬಿಎಸ್ವೈ ಸೇಫ್….! ನಾಯಕತ್ವ ಬದಲಾವಣೆ ಗೆ ಬ್ರೇಕ್ ಹಾಕಿದ ಹೈಕಮಾಂಡ್…!!

ಬೆಂಗಳೂರು: ಇನ್ನೇನು ಸಿಎಂ ಬಿಎಸ್ವೈ ಸ್ಥಾನ ಅದುರಿ ಅಲ್ಲಾಡಿ ಉದುರಿ ಹೋಯ್ತು ಅನ್ನೋ ಸಂಭ್ರಮದಲ್ಲಿದ್ದ ಬಿಎಸ್ವೈ ಎದುರಾಳಿ ಪಾಳಯಕ್ಕೆ ನಿರಾಸೆ ಎದುರಾಗಿದ್ದು, ಸಧ್ಯಕ್ಕೆ‌ಸಿಎಂ ಬಿಎಸ್ವೈ ಹಾಗೂ ಅವರ ಸ್ಥಾನ ಸೇಫ್ ಎಂಬ ಸ್ಪಷ್ಟ ಸಂದೇಶ ಸಿಕ್ಕಿದೆ.


ಪುತ್ರನ ಅಂಧಾದರ್ಬಾರ್, ಸಮಸ್ಯೆಗಳ ನಿರ್ವಹಣೆಯಲ್ಲಿ ವಿಫಲ ಹಾಗೂ ಸ್ವಜನ ಪಕ್ಷಪಾತದ ಕಾರಣ ಮುಂದಿಟ್ಟು ಸಿಎಂ ಬಿಎಸ್ವೈ ಅಧಿಕಾರದಿಂದ ಕೆಳಕ್ಕೆ ಇಳಿಯುತ್ತಾರೆ ಎಂಬ ವಿಚಾರ ಚರ್ಚೆಗೆ ಗ್ರಾಸವಾಗಿತ್ತು.‌ ಹತ್ತಾರು ಭಾರಿ ದೆಹಲಿಗೆ ಎಡತಾಕಿದರೂ ವಿಸ್ತರಣೆಯಾಗದ ಸಂಪುಟ, ಸಿಎಂ ಬಿಎಸ್ವೈ ಮಾತಿಗೆ ದೆಹಲಿಯಲ್ಲಿ ಸಿಗದ ಕಿಮ್ಮತ್ತು ಯಡಿಯೂರಪ್ಪನವರನ್ನು ಬಿಜೆಪಿ ಹೈಕಮಾಂಡ್ ಕಡೆಗಣಿಸುತ್ತಿದೆ.‌ಸಿಎಂ ಸ್ಥಾನದಿಂದ ಇಳಿಸಲು ಚಿಂತನೆ ನಡೆಸಿದೆ ಎಂಬ ಮಾತುಗಳಿಗೆ ಇಂಬುಕೊಟ್ಟಿತ್ತು.

ಆದರೇ ಇದೀಗ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿಗೆ ಸ್ಪಷ್ಟ ಸಂದೇಶ ರವಾನಿಸಿದ್ದು, ಸಿಎಂ ಬಿಎಸ್ವೈ ಬದಲಾಯಿಸುವ ಅಥವಾ ನಾಯಕತ್ವ ಬದಲಾವಣೆಯ ಯಾವುದೇ ಸಾಧ್ಯತೆ, ಪ್ರಸ್ತಾಪ ನಮ್ಮ ಮುಂದಿಲ್ಲ.ಸಂಪೂರ್ಣ ಅಧಿಕಾರಾವಧಿಯನ್ನು ಸಿಎಂ ಬಿಎಸ್ವೈ ನಾಯಕತ್ವದಲ್ಲೇ ಮುಗಿಸುತ್ತೇವೆ. ಮುಂದಿನ ಚುನಾವಣೆ ಗೂ ಅವರ ನಾಯಕತ್ವದಲ್ಲೇ ಹೋಗುತ್ತೇವೆ. ಇದರ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಹೇಳಿದೆ ಎನ್ನಲಾಗಿದೆ.

ಇತ್ತೀಚಿಗೆ ಬೆಳಗಾವಿಗೆ ಆಗಮಿಸಿದ್ದ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಎಲ್ಲ ಸೂಕ್ಷ್ಮವಾಗಿ ಗಮನಿಸಿ ಹೈಕಮಾಂಡ್ ಗೆ ವರದಿ ನೀಡಿದ್ದು, ಅದನ್ನು ಆಧರಿಸಿ ಬಿಜೆಪಿ ಹೈಕಮಾಂಡ್ ಸಿಎಂ ಬಿಎಸ್ವೈ ಸಮರ್ಥವಾಗಿ ಆಡಳಿತ ನಡೆಸಿಕೊಂಡು ಹೋಗುತ್ತಿದ್ದಾರೆ ಎನ್ನುವ ಮೂಲಕ ರಾಜಾಹುಲಿಗೆ ಫುಲ್ ಮಾರ್ಕ್ಸ್ ನೀಡಿದೆ.


ಅಷ್ಟೇ ಅಲ್ಲ ಸಿಎಂ ಬಿಎಸ್ವೈ ನಾಯಕತ್ವದ ಬಗ್ಗೆ ಚಕಾರ ಎತ್ತದಂತೆ ಹಾಗೂ ನಾಯಕತ್ವ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ-ಮಾತುಕತೆ ನಡೆಸದಂತೆಯೂ ರಾಜ್ಯ ಬಿಜೆಪಿಗರಿಗೆ ಖಡಕ್ ವಾರ್ನಿಂಗ್ ನೀಡಿದೆ.

ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಬಿಎಸ್ವೈ ಗೆ ಸಪೋರ್ಟ್ ಮಾಡಿ. ಯಾವುದೇ ಧರಣಿ, ಮುಷ್ಕರ,ಗೊಂದಲ, ಸವಾಲುಗಳು ಎದುರಾಗದಂತೆ ನೋಡಿ ಕೊಂಡು ಸಹಕರಿಸಿ ಎಂದು ಬಿಜೆಪಿ ಶಾಸಕರು ಹಾಗೂ ಸಚಿವರಿಗೆ ಬಿಸಿ ಮುಟ್ಟಿಸಿದೆ.ಇದರಿಂದ ಸಧ್ಯಕ್ಕೆ ಸಿಎಂ ಬಿಎಸ್ವೈ ನಿರಾಳವಾಗಿದ್ದು ನಾಯಕತ್ವ ಬದಲಾವಣೆ ಎಂಬ ತೂಗು ಕತ್ತಿಯಿಂದ ಸಧ್ಯಕ್ಕೆ ಬಚಾವ್ ಆಗಿದ್ದಾರೆ.

Comments are closed.