ರಾಜ್ಯ ಸಚಿವ ಸಂಪುಟ ವಿಸ್ತರಣೆ…! ಮತ್ತೆ ಹೈಕಮಾಂಡ್ ಅಂಗಳಕ್ಕೆ ಚೆಂಡು ದಾಟಿಸಿದ ಸಚಿವ ಆರ್.ಅಶೋಕ್…!!

ಬೆಂಗಳೂರು: ದಸರಾ,ದೀಪಾವಳಿ ಕಳೆದು ಸಂಕ್ರಾಂತಿ ಹತ್ತಿರಕ್ಕೆ ಬಂದಿದ್ದರೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೇವಲ ಕಸರತ್ತಾಗಿಯೇ ಉಳಿದುಕೊಂಡಿದ್ದು, ಮತ್ತೊಮ್ಮೆ ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಗೆ ಕಾದಿದ್ದೇವೆ ಎಂಬ ಹೇಳಿಕೆ ಮೂಲಕ ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವ ಆರ್.ಅಶೋಕ್ ಚೆಂಡನ್ನು ದೆಹಲಿಯ ವರಿಷ್ಠರ ಅಂಗಳಕ್ಕೆ ಚೆಂಡು ದಾಟಿಸಿದ್ದಾರೆ.

ರಾಜ್ಯದಲ್ಲಿ ಇಂದು ಬಿಜೆಪಿ ಪಾಳಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ರಾಜ್ಯ ಭೇಟಿಯಲ್ಲಿರುವ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಗೆ ಸಿಎಂ ಬಿಎಸ್ವೈ ಔತಣಕೂಟವೊಂದನ್ನು ಆಯೋಜಿಸಿದ್ದಾರೆ. ಈ ಔತಣಕೂಟಕ್ಕೆ ಅರುಣ ಸಿಂಗ್ ಗಮನ ಸೆಳೆಯಲು ಸಚಿವ ಸ್ಥಾನಾಂಕಾಂಕ್ಷಿಗಳ ಪರೇಡ್ ನಡೆದಿದೆ.

ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಹಿರಿಯ ಸಚಿವ ಆರ್.ಅಶೋಕ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಸಮ್ಮುಖದಲ್ಲಿ ಸಂಪುಟ ವಿಸ್ತರಣೆ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಹೈಕಮಾಂಡ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ನಾವು ಎಲ್ಲವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇವೆ. ಅವರು ಹೇಳಿದಂತೆ ಎಲ್ಲವೂ ನಿರ್ಧಾರವಾಗಲಿದೆ ಎಂದಿದ್ದಾರೆ.

ಆರ್.ಅಶೋಕ್ ಈ ಹೇಳಿಕೆಯಿಂದ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಧ್ಯ ನಡೆಯೋದು ಅನುಮಾನ ಎಂಬ ಸ್ಪಷ್ಟ ಸಂದೇಶ ಸಚಿವ ಸ್ಥಾನ ಆಕಾಂಕ್ಷಿಗಳಿಗೆ ರವಾನೆಯಾದಂತಾಗಿದೆ. ಅಲ್ಲದೇ ಸಧ್ಯ ಸಚಿವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳಬೇಕಿದ್ದು, ಸಿಎಂ ಮಾತೇ ಅಂತಿಮ ಅಲ್ಲ ಎಂಬುದನ್ನು ಮನವರಿಕೆ ಮಾಡಿಸಲು ಅಶೋಕ್ ಮುಂದಾದಂತಿದೆ.

ಇನ್ನೊಂದೆಡೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವ ಬೆನ್ನಲ್ಲೇ, ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದ ಶಾಸಕರ ಅಸಮಧಾನ ಹೆಚ್ಚುತ್ತಿದ್ದು, ಸಿಎಂ ಬಿಎಸ್ವೈ ವಿರುದ್ಧ ಬಂಡಾಯ ಏಳುವ ಸಿದ್ಧತೆ ತೆರೆಮರೆಯಲ್ಲೇ ನಡೆದಂತಿದೆ. ಇನ್ನೊಂದೆಡೆ ಹೈಕಮಾಂಡ್ ಕೂಡ ಕೆಲ ವಿಚಾರದಲ್ಲಿ ಸಿಎಂ ವಿರುದ್ಧ ಸಿಟ್ಟಾಗಿದ್ದು, ರಾಜ್ಯ ಉಸ್ತುವಾರಿ ಅರುಣ ಸಿಂಗ್ ಮಾತನಾಡಿ, ಮಹತ್ವದ ತೀರ್ಮಾನಗಳನ್ನು ಕೈಗೊಳ್ಳುವ ವೇಳೆ ಸಿಎಂ ಸಂಪುಟದ ಹಿರಿಯ ಸಚಿವರನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುವ ಮೂಲಕ ಬಿಎಸ್ವೈ ಸರ್ವಾಧಿಕಾರಿಯಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ‘

ಒಟ್ಟಿನಲ್ಲಿ ಹೈಕಮಾಂಡ್, ರಾಜ್ಯ ಉಸ್ತುವಾರಿ ಹಾಗೂ ಸಚಿವ ಸ್ಥಾನ ಆಕಾಂಕ್ಷಿಗಳ ನಡುವೆ ಸಿಎಂ ಬಿಎಸ್ವೈ ಏಕಾಂಗಿಯಾಗಿದ್ದು, ಅನಿಷ್ಟಕ್ಕೆಲ್ಲ ಶನಿಶ್ವರನೇ ಕಾರಣ ಅನ್ನೋ ಹಾಗೇ ಎಲ್ಲರ ಅಸಮಧಾನದ ಹೊಣೆ ಸಿಎಂ ಬೆನ್ನೇರುತ್ತಿದೆ.

Comments are closed.