BJP Rebellion:ಕೊರೋನಾ ನಡುವೆ ಬಿಜೆಪಿ ಬಂಡಾಯದ ಬಿಸಿ….! ರಾಜ್ಯ ಉಸ್ತುವಾರಿ ವಿರುದ್ಧ ಸಿಎಂ ಪರ-ವಿರೋಧಿಗಳ ಪರೇಡ್…!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಪ್ರಭಾವ ತಗ್ಗುತ್ತಿದ್ದಂತೆ ಬಿಜೆಪಿಯಲ್ಲಿ ಬಂಡಾಯದ ಬಿಸಿ ತೀವ್ರಗೊಂಡಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ.

ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಸಿಎಂ ಬಿಎಸ್ವೈ ವಿರೋಧಿ ಬಣ ಸರ್ಕಸ್ ನಡೆಸಿದ್ದರೇ, ಇನ್ನೊಂದು ಬಣ ಸಿಎಂ ಸ್ಥಾನದಲ್ಲಿ ಬಿಎಸ್ವೈ ಉಳಿಸಿಕೊಳ್ಳಲು ಪ್ರಯತ್ನ ನಡೆಸಿದೆ. ಒಟ್ಟಿನಲ್ಲಿ ಬಿಜೆಪಿ ಅಂಗಳ ಚಟುವಟಿಕೆಯ ಗೂಡಾಗಿದ್ದು, ಎಲ್ಲರೂ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಎದುರು ಪರೇಡ್ ನಡೆಸಲು ಸಿದ್ಧರಾಗಿದ್ದಾರೆ.

ಸಿಎಂ ಬದಲಾವಣೆಯ ನಾಯಕತ್ವ ವಹಿಸಿರುವ ಸಿಪಿವೈ ಸಂಜೆ ಅರುಣ ಸಿಂಗ್ ಭೇಟಿ ಮಾಡಲಿದ್ದು, ಸಿಎಂ ವಿರುದ್ಧ ಆರೋಪಗಳ ಪಟ್ಟಿಯನ್ನು ಸಲ್ಲಿಸಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೊಂದೆಡೆ ಸಿಎಂ ಆಪ್ತ ಶಾಸಕ ಹಾಗೂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಕೂಡ ಅರುಣ ಸಿಂಗ್ ಭೇಟಿಗೆ ಸಮಯಾವಕಾಶ ಕೋರಿದ್ದು, ಭೇಟಿ ಮಾಡಿ ವಾಸ್ತವದ ವಿಚಾರಗಳನ್ನು ತಿಳಿಸಲಿದ್ದಾರೆ .

ಈ ಮಧ್ಯೆ ಆರಂಭದಿಂದಲೂ ಸಿಎಂ ವಿರುದ್ಧ ಅಪಪ್ರಚಾರ ಮಾಡುತ್ತಲೇ ಬಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಶಾಕ್ ಎದುರಾಗಿದ್ದು, ಯತ್ನಾಳ್ ಗೆ ಅರುಣ ಸಿಂಗ್ ಭೇಟಿಗೆ ಕಾಲಾವಕಾಶ ನೀಡಿಲ್ಲ ಎನ್ನಲಾಗಿದೆ.

ಪ್ರತಿಯೊಂದು ಇಲಾಖಾವಾರು ಸಚಿವರೊಂದಿಗೆ ಹಾಗೂ ಶಾಸಕರೊಂದಿಗೆ ಅರುಣ ಸಿಂಗ್ ಸಭೆ ನಡೆಸಲಿದ್ದು, ಮೌಲ್ಯಮಾಪನ ಮಾಡಲಿದ್ದಾರೆ. ಅಲ್ಲದೇ ಯಾವುದೇ ಶಾಸಕರು ತಮ್ಮನ್ನು ಭೇಟಿ ಮಾಡುವುದಾದರೂ ರಾಜ್ಯಾಧ್ಯಕ್ಷ ಸಮ್ಮುಖದಲ್ಲೇ ಭೇಟಿ ಮಾಡಬೇಕೆಂದು ಅರುಣ ಸಿಂಗ್ ತಾಕೀತು ಮಾಡಿದ್ದಾರಂತೆ.

ಈಗಾಗಲೇ ಸಚಿವೆ ಶಶಿಕಲಾ ಜೊಲ್ಲೆ ಸೇರಿದಂತೆ ಹಲವು ಸಚಿವರು, ಶಾಸಕರು ಅರುಣ ಸಿಂಗ್ ಜೊತೆ ಮಾತುಕತೆ ನಡೆಸಿ ಬಂದಿದ್ದಾರೆ. ಇನ್ನೊಂದೆಡೆ ಸಿಎಂ ವಿರುದ್ಧ ಶಾಸಕರ ಸಹಿಸಂಗ್ರಹ ಹಾಗೂ ಅರುಣ ಸಿಂಗ್ ಎದುರು ಪರೇಡ್ ಗೂ ಬಿಎಸ್ವೈ ವಿರೋಧಿ ಬಣ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.

ಬಂಡಾಯದ ಬಿಸಿಯಿಂದಾಗಿ ಬಿಜೆಪಿಯ ಮಲ್ಲೇಶ್ವರಂ ಕೇಂದ್ರ ಕಚೇರಿ ಚಟುವಟಿಕೆಗಳ ಗೂಡಾಗಿದ್ದು, ಬಿಜೆಪಿಯ ಶಾಸಕರು, ಪರಿಷತ್ ಸದಸ್ಯರು,ಕಾರ್ಯಕರ್ತರು ಮುಂದೇನು ಎಂಬ ಪ್ರಶ್ನೆಯೊಂದಿಗೆ ಕೇಂದ್ರ ಕಚೇರಿಯತ್ತ ಮುಖಮಾಡುತ್ತಿದ್ದಾರೆ.

Comments are closed.