ಸಿಎಂ ನಂಬಿಕೊಂಡ್ರೆ ಸಚಿವ ಸ್ಥಾನ ಸಿಕ್ಕಂಗೇ…..! ಸಂತೋಷ್ ಮೊರೆ ಹೋದ ರಮೇಶ್ ಜಾರಕಿಹೊಳಿ..!

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆ ಪ್ರಹಸನ ಗಣೇಶನ ಮದುವೆ ತರ ಮುಂದೇ ಹೋಗುತ್ತಲೇ ಇದೆ. ಹೀಗಾಗಿ ತಮ್ಮನ್ನು ನಂಬಿ ಬಂದವರಿಗೆ ಶತಾಯ-ಗತಾಯ ಸಚಿವ ಸ್ಥಾನ ಕೊಡಿಸಲೇ ಬೇಕೆಂದು ಪಣತೊಟ್ಟಿರುವ ಸಚಿವ ರಮೇಶ್ ಜಾರಕಿಹೊಳಿ ಸಿಎಂ ಬಿಎಸ್ವೈಗಿಂತ ಪವರ್ ಫುಲ್ ವ್ಯಕ್ತಿಯೊಬ್ಬರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ಸಚಿವ ಸಂಪುಟ ವಿಸ್ತರಣೆ ಪಟ್ಟಿ ಹಿಡಿದು ಸಿಎಂ ದೆಹಲಿಗೆ ಸುತ್ತಾಡುತ್ತಲೇ ಇದ್ದಾರೆ. ಆದರೆ ಲಿಸ್ಟ್ ಮಾತ್ರ ಹೊರಬಿದ್ದಿಲ್ಲ. ಇದರಿಂದ ಅಸಮಧಾನಗೊಂಡಿರುವ ಸಚಿವ ಸ್ಥಾನ ಆಕಾಂಕ್ಷಿಗಳು ತಮ್ಮನ್ನು ಪಕ್ಷ ಬಿಡಿಸಿ ಕರೆತಂದ ರಮೇಶ್ ಜಾರಕಿಹೊಳಿ ವಿರುದ್ಧ ಹರಿಹಾಯುತ್ತಿದ್ದಾರೆ ಎನ್ನಲಾಗಿದೆ.

ಹೀಗಾಗಿ ಯಡಿಯೂರಪ್ಪನವರನ್ನು ನಂಬಿಕೊಂಡು ಕೂತರೇ ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನ ಪಡೆಯೋದು ಎರಡು ಸಾಧ್ಯವಿಲ್ಲ ಎಂಬ ಕಾರಣಕ್ಕೆ ರಮೇಶ್ ಜಾರಕಿಹೊಳಿ ಪರ್ಯಾಯ ಮಾರ್ಗವೊಂದನ್ನು ಹುಡುಕಿದಂತಿದೆ.  ಬಿಜೆಪಿಯಲ್ಲಿ  ಸಿಎಂ ಬಿಎಸ್ವೈಗಿಂತ ಸಂಘಟನಾ ಕಾರ್ಯದರ್ಶಿ  ಬಿ.ಎಲ್. ಸಂತೋಷ್ ಪ್ರಭಾವಶಾಲಿ ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಾಗಿ ರಮೇಶ್ ಜಾರಕಿಹೊಳಿ ಬಿ.ಎಲ್.ಸಂತೋಷ್ ಮೊರೆ ಹೋಗಿದ್ದಾರೆ.

ಸಿಎಂ ಬಿಎಸ್ವೈಗಿಂತ ಮೊದಲು ದೆಹಲಿಗೆ ತೆರಳಿದ್ದ ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಹೈಕಮಾಂಡ್ ಸಚಿವ ಸಂಪುಟ ವಿಸ್ತರಣೆಗೆ ನೋ ಎನ್ನುತ್ತಿದ್ದಂತೆ ಬಿ.ಎಲ್.ಸಂತೋಷ್ ಮೊರೆ ಹೋಗಿದ್ದಾರೆ. ದೆಹಲಿಯಿಂದ ಕೋಲ್ಕತ್ತಾಗೆ ತೆರಳಿದ ರಮೇಶ್ ಜಾರಕಿಹೊಳಿ  ಸಂತೋಷ್ ಭೇಟಿ ಮಾಡಿದ್ದು, ತಮ್ಮ ಪರಿಸ್ಥಿತಿ ವಿವರಿಸಿದ್ದಾರಂತೆ.

ತಾವು ಕಾಂಗ್ರೆಸ್ ನಿಂದ ಶಾಸಕರನ್ನು ಕರೆತಂದಿದ್ದು, ಸರ್ಕಾರ ರಚನೆಗೆ ನೆರವಾಗಿದ್ದು, ಈಗ ಮತ್ತೆ ಚುನಾವಣೆಯಲ್ಲಿ ಗೆದ್ದು ಬಂದಿರೋ ಶಾಸಕರು ಸಚಿವ ಸ್ಥಾನಕ್ಕೆ ಕಾದಿದ್ದಾರೆ. ಆದರೆ ಬಿಎಸ್ವೈ ಮತ್ತು ಹೈಕಮಾಂಡ್ ನಡುವೆ ತಾನು ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಇದನ್ನು ಸಂತೋಷ್ ಗೆ ವಿವರಿಸಿದ್ದಾರಂತೆ.

ಬಿ.ಎಲ್.ಸಂತೋಷ್ ಬಿಜೆಪಿ ಹೈಕಮಾಂಡ್ ನಲ್ಲಿ ಹಿಡಿತ ಹೊಂದಿದ್ದು, ರಾಜ್ಯದ ಬಿಜೆಪಿಯ ಪ್ರಮುಖ ನಿರ್ಧಾರಗಳಲ್ಲಿ ಅವರು ಕೈವಾಡವಿದೆ. ಹೀಗಾಗಿ ಅವರನ್ನು ಹಿಡಿದಾದರೂ ಸಚಿವ ಸ್ಥಾನ ಕೊಡಿಸೋದು ರಮೇಶ್ ಪ್ಲ್ಯಾನ್. ಒಟ್ಟಿನಲ್ಲಿ ಸಿಎಂ ಬಿಎಸ್ವೈ ನಾಯಕತ್ವವನ್ನು ನಂಬಿಕೊಂಡ ಶಾಸಕರಿಗೆ ಸಚಿವ ಸ್ಥಾನ ಸಿಗದ ದ್ರಾಕ್ಷಿಯಂತಾಗಿದ್ದು, ಇದೇ ಕಾರಣಕ್ಕೆ ರಮೇಶ್ ಜಾರಕಿಹೊಳಿ  ಸಂತೋಷ್ ಮೊರ ಹೋಗಿದ್ದಾರೆ ಎನ್ನಲಾಗುತ್ತಿದೆ.

Comments are closed.