ಪೋಷಕರು- ಖಾಸಗಿ ಶಿಕ್ಷಣ ಸಂಸ್ಥೆ ನಡವೆ ಮುಗಿಯದ ಹಗ್ಗಜಗ್ಗಾಟ…! ಅಡಕತ್ತರಿಯಲ್ಲಿ ಸಿಲುಕಿದ ಶಿಕ್ಷಣ ಸಚಿವ ಸುರೇಶ್ ಕುಮಾರ್…!!

ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿದೆ. ಆದರೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ  ನಡುವಿನ ಸಂಘರ್ಷ ಮಾತ್ರ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಹೀಗಾಗಿ ಎರಡು ಕಡೆಯಿಂದ ಒತ್ತಡಕ್ಕೆ ತುತ್ತಾಗಿರುವ ಶಿಕ್ಷಣ ಸಚಿವರ ಪಾಡು ಹೇಳತೀರದಂತಾಗಿದೆ.

ಶಿಕ್ಷಣ ಸಂಸ್ಥೆಗಳಿಗೆ  ಶುಲ್ಕ ಕಡಿತಕ್ಕೆ ಆದೇಶ ನೀಡದಿದ್ದರೇ ಪ್ರತಿಭಟನೆ ಮೊರೆ ಹೋಗುವುದಾಗಿ ಬೆದರಿಸಿದ ಪೋಷಕರ ಪರವಾಗಿ ತೀರ್ಮಾನಕೈಗೊಂಡಿರುವ ರಾಜ್ಯ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳ ಶೇಕಡಾ 30 ರಷ್ಟು ಬೋಧನಾ ಶುಲ್ಕ ಸೇರಿ ವಿವಿಧ ಶುಲ್ಕ ಕಡಿತ ಗೊಳಿಸಿ ಆದೇಶ ಹೊರಡಿಸಿದೆ.

ಓರ್ವ ವಿದ್ಯಾರ್ಥಿಯಿಂದ ಕೇವಲ 70 ರಷ್ಟು ಶುಲ್ಕ ಮಾತ್ರ ಪಡೆಯುವಂತೆ ರಾಜ್ಯ ಸರ್ಕಾರ ಸೂಚಿಸಿದೆ. ಇದರಿಂದ ಮಕ್ಕಳ ಸ್ಕೂಲ್ ಫೀಸ್ ಕಟ್ಟಿ, ಮತ್ತೆ ಆನ್ಲೈನ್ ಶಿಕ್ಷಣಕ್ಕೂ ಹಣ ವ್ಯಯಿಸಿ ಕಂಗಾಲಾದ ಪೋಷಕರಿಗೆ ಕೊಂಚ ರಿಲ್ಯಾಕ್ಸ್ ಸಿಕ್ಕದಂತಾಗಿದೆ. ಆದರೆ ಸರ್ಕಾರದ ಈ ಆದೇಶದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ತಿರುಗಿ ಬಿದ್ದಿದೆ.

ಸರ್ಕಾರ ಏಕರೂಪದಲ್ಲಿ ಶುಲ್ಕ ಕಡಿತ ಆದೇಶ ನೀಡಿದ್ದು ಸರಿಯಲ್ಲ. ಕೊರೋನಾದಿಂದ ವರ್ಷವಿಡಿ ಶಾಲೆಗಳು ಮುಚ್ಚಿವೆ. ಆದರೂ ನಾವು ಶಿಕ್ಷಕರಿಗೆ, ಬೋಧಕೇತರ ಸಿಬ್ಬಂದಿಗೆ ಹಾಗೂ ಇತರ ಸಿಬ್ಬಂದಿಗಳಿಗೆ ಸಂಬಳ ಕೊಡಬೇಕಾಗಿದೆ. ಸರ್ಕಾರ ಏಕಾಏಕಿ ಶುಲ್ಕ ಕಡಿತ ಮಾಡಿದ್ದು, ಸರಿಯಲ್ಲ ಎಂದು ಶಿಕ್ಷಣ ಸಂಸ್ಥೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಸರ್ಕಾರ ಶಿಕ್ಷಣ ಸಂಸ್ಥೆಗಳ ಗಾತ್ರ ಹಾಗೂ ಬಜೆಟ್ ಅನುಗುಣವಾಗಿ ಶುಲ್ಕ ಕಡಿತ ಘೋಷಿಸಬೇಕಿತ್ತು ಅನ್ನೋದು ಒಕ್ಕೂಟದ ಆಗ್ರಹ. ಈ ಗಂಡ-ಹೆಂಡತಿಯಂತಿರೋ ಶಿಕ್ಷಣ ಸಂಸ್ಥೆ ಹಾಗೂ ಪೋಷಕರ ನಡುವಿನ ಹಗ್ಗಜಗ್ಗಾಟದಿಂದ ಶಿಕ್ಷಣ ಸಚಿವರು ಸಂಕಷ್ಟಕ್ಕೆ ಸಿಲುಕಿದ್ದು, ಎರಡು ಕಡೆಯಿಂದಲೂ ವ್ಯಕ್ತವಾಗುತ್ತಿರುವ ಒತ್ತಡ, ಪ್ರತಿಭಟನೆಯ ಎಚ್ಚರಿಕೆ ಹಾಗೂ ಮೂಡದ ಒಮ್ಮತದಿಂದ ಮುಜುಗರಕ್ಕೊಳಗಾಗಿದ್ದಾರೆ.

ಈ ಬಗ್ಗೆ ಸ್ವತಃ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಾನು ಡಿಸೆಂಬರ್ 20 ರಂದು ಬರೆದಿದ್ದೇ, ಗಂಡಹೆಂಡತಿಯ ಜಗಳದಲ್ಲಿ ಕೂಸು ಬಡವಾಯಿತು ಎಂದು. ಶಿಕ್ಷಣ ಸಂಸ್ಥೆ ಮತ್ತು ಪೋಷಕರ ನಡುವಿನ ಜಗಳದಲ್ಲಿ ಮಕ್ಕಳು ಬಡವಾಗಬಾರದು. ಈಗಲೂ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ಒಮ್ಮತದ ನಿರ್ಣಯಕ್ಕೆ ಬಂದಿದ್ದರೇ, ಈ ವಿಚಾರದಲ್ಲಿ ಸರ್ಕಾರ ಮಧ್ಯಪ್ರವೇಶಿಸುವ ಅಗತ್ಯವೇ ಇರುತ್ತಿರಲಿಲ್ಲಎಂದಿದ್ದಾರೆ.

ಅಷ್ಟೇ ಅಲ್ಲ, ಪೋಷಕರು ತಾವೇ ಇಷ್ಟಪಟ್ಟು ಆಯ್ಕೆ ಮಾಡಿ ತಮ್ಮ ಮಕ್ಕಳನ್ನು ಕಳುಹಿಸುವ ನಿರ್ಣಯಕೈಗೊಂಡ ಶಾಲೆಯ ವಿರುದ್ಧವೇ ಪ್ರತಿಭಟನೆ ಮಾಡುವಂತ ಸ್ಥಿತಿ ಬಂದಿರುವುದು ಸರಿಯಲ್ಲ. ಈಗಲೂ ಕಾಲಮಿಂಚಿಲ್ಲ. ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳು ಆರೋಗ್ಯಕರ ಚರ್ಚೆ ನಡೆಸಬೇಕು.

ಶಿಕ್ಷಣ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿ, ಪೋಷಕರ ಸ್ಥಿತಿಗತಿ ನೋಡಿ ಸೂಕ್ತ ನಿರ್ಣಯಕೈಗೊಂಡು ಸಂಘರ್ಷದ ಹಾದಿ ತೊರೆದು ಸಮನ್ವಯದ ಹಾದಿ ಹಿಡಿಯಬೇಕೆಂದು ಉಲ್ಲೇಖಿಸಿದ್ದಾರೆ.ಆದರೆ ಈಗ ಪೋಷಕರು ಹಾಗೂ ಶಿಕ್ಷಣ ಸಂಸ್ಥೆಗಳ ನಡುವಿನ ಜಗಳದಲ್ಲಿ ಸರ್ಕಾರ ಬಡವಾಯಿತು ಎಂಬಂತಾಗಿದ್ದು, ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸರ್ಕಾರದ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇದೆ.

Comments are closed.