ಕೋಟ ಪೊಲೀಸರ ದೌರ್ಜನ್ಯ ಪ್ರಕರಣ : ಬೃಹತ್ ಪ್ರತಿಭಟನೆ ಸಜ್ಜಾದ ಸಾರ್ವಜನಿಕರು

news next kannada

ಕೋಟ : ವಾಹನ ತಪಾಸಣೆಯ ನೆಪದಲ್ಲಿ ತಾಯಿ ಮಗನ ಮೇಲೆ ಹಲ್ಲೆ ನಡೆಸಿ ಮಗನ ವಿರುದ್ದ ಪ್ರಕರಣ ದಾಖಲಿಸಿ ಜೈಲಿಗಟ್ಟಿದ್ದ ಕೋಟ ಪೊಲೀಸರ ದೌರ್ಜನ್ಯವನ್ನು ಖಂಡಿಸಿ ಸಾರ್ವಜನಿಕರು ಪ್ರತಿಭಟನೆ ಸಜ್ಜಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ಕರೆ ನೀಡಿದ್ದಾರೆ.

ಪ್ರಶಾಂತ್ ಎಂಬಾತ ತನ್ನ ತಾಯಿ ಶಾರದಾ ಅವರಿಗೆ ಔಷಧ ಕೊಡಿಸಿ ತನ್ನ ಬೈಕಿನಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಿಂದ ಮನೆಗೆ ತೆರಳುತ್ತಿದ್ದ ವೇಳೆಯಲ್ಲಿ ಕೋಟ ಠಾಣೆಯ ಪಿಎಸ್ ಐ ಸಂತೋಷ್ ಬಿ.ಪಿ, ಎಸ್ ಬಿ ರಾಜು ಹಾಗೂ ಡ್ರೈವರ್ ಮಂಜು ವಾಹನ ತಪಾಸಣೆ ನಡೆಸೋದಕ್ಕೆ ಬೈಕ್ ಅಡ್ಡಗಟ್ಟಿದ್ದರು. ಡಿಎಲ್ ಜೆರಾಕ್ಸ್ ನೀಡಿದ ಕಾರಣಕ್ಕೆ ಪೊಲೀಸರು ಪ್ರಶಾಂತ್ ಮೇಲೆ ಹಲ್ಲೆ ನಡೆಸಿದ್ದರು. ಪೊಲೀಸರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಪ್ರಶಾಂತ್ ವಿರುದ್ದ ಕರ್ತವ್ಯಕ್ಕೆ ಅಡ್ಡಿ ಕೇಸ್ ದಾಖಲಿಸಿ ಜೈಲಿಗಟ್ಟಿದ್ದರು.

ಅಲ್ಲದೇ ತಾಯಿ ಶಾರದಾ ಮೇಲೆಯೂ ಎಸ್ ಬಿ ರಾಜು ಹಾಗೂ ಡ್ರೈವರ್ ಮಂಜು ದೈಹಿಕ ಹಲ್ಲೆ ನಡೆಸಿದ್ದರು. ಘಟನೆಯ ಕುರಿತು ನ್ಯೂಸ್ ನೆಕ್ಸ್ಟ್ ವರದಿ ಬಿತ್ತರ ಮಾಡುತ್ತಿದ್ದಂತೆಯೇ ಸಾರ್ವಜನಿಕರು ಪೊಲೀಸರ ಕೃತ್ಯವನ್ನು ಖಂಡಿಸಿದ್ದರು. ಇದೀಗ ಮಾನವೀಯತೆಯನ್ನೇ ಮರೆತು ವರ್ತಿಸಿರುವ ಪೊಲೀಸರ ವಿರುದ್ದ ಸಾರ್ವಜನಿಕರು ಸಿಡಿದೆದ್ದಿದ್ದಾರೆ. ಫೆಬ್ರವರಿ 1ರಂದು ಬೃಹತ್ ಪ್ರತಿಭಟನೆಗೆ ಸಾರ್ವಜನಿಕರು ಕರೆ ನೀಡಿದ್ದಾರೆ.

ಫೆಬ್ರವರಿ 1 ರಂದು ಸಂಜೆ 4 ಗಂಟೆಗೆ ಸಾಲಿಗ್ರಾಮದಿಂದ ಕೋಟದ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಕೋಟ ಪೊಲೀಸ್ ಠಾಣೆಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಸುಮಾರು 30 ಕ್ಕೂ ಅಧಿಕ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ಸೂಚಿಸಿವೆ ಎಂದು ತಿಳಿದುಬಂದಿದೆ.

ಇದನ್ನು ಓದಿ :

https://kannada.newsnext.live/violence-by-police-during-vehicle-inspection-son-arrest-mother-hospitalize/

ದೈಹಿಕ ಹಲ್ಲೆಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಶಾರದಾ ಅವರು ನೀಡಿರುವ ದೂರಿನ ಕುರಿತು ಕೋಟ ಠಾಣೆಯ ಪೊಲೀಸರು ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಕೂಡಲೇ ಘಟನೆಗೆ ಕಾರಣರಾದ ಎಸ್ ಐ ಸಂತೋಷ್ ಪಿ.ಬಿ, ಎಸ್ ಬಿ ರಾಜು ಹಾಗೂ ಡ್ರೈವರ್ ಮಂಜು ಅವರನ್ನು ಕೂಡಲೇ ಅಮಾನತ್ತು ಮಾಡಬೇಕು. ಕೋಟ ಠಾಣಾ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಈ ಕುರಿತು ಕ್ರಮಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ

Comments are closed.