Sslc exam:ಕೊರೋನಾ ಭೀತಿ ನಡುವೆಯೇ ಪರೀಕ್ಷೆ….! ಇಂದು ನಿರ್ಧಾರವಾಗಲಿದೆ ಎಸ್ಎಸ್ಎಲ್.ಸಿ ಎಕ್ಸಾಂ ಮುಹೂರ್ತ….!!

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಮುಕ್ತಾಯ ಹಾಗೂ ಮೂರನೇ ಅಲೆ ಆರಂಭದ ಆತಂಕದ ನಡುವೆಯೇ ರಾಜ್ಯ  ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ  ಎಸ್ಎಸ್ಎಲ್ ಸಿ ಪರೀಕ್ಷೆಗೆ ಸಜ್ಜಾಗಿದೆ. ಸೋಮವಾರ ಅಥವಾ ಮಂಗಳವಾರ ಪರೀಕ್ಷಾ ದಿನಾಂಕ ಪ್ರಕಟಿಸಲಿದೆ.

ರಾಜ್ಯ ಸರ್ಕಾರ ಪರಿಷ್ಕೃತ ಮಾದರಿಯಲ್ಲಿ ಎಸ್ ಎಸ್ ಎಲ್ ಸಿ  ಪರೀಕ್ಷೆ ನಡೆಸಲು ತೀರ್ಮಾನಿಸಿದ್ದು, ಎರಡು ದಿನಗಳ ಕಾಲ ನಡೆಯಲಿರುವ ಪರೀಕ್ಷೆಗೆ ಶಿಕ್ಷಣ ಇಲಾಖೆ ಸನ್ನದ್ಧವಾಗಿದೆ. ಜುಲೈ 3 ನೇ ವಾರದಲ್ಲಿ ಪರೀಕ್ಷೆ ನಡೆಸಲು ಇಲಾಖೆ ನಿರ್ಧರಿಸಿದೆ.

ಒಂದು ಕೊಠಡಿಯಲ್ಲಿ ಕೇವಲ 12 ವಿದ್ಯಾರ್ಥಿಗಳು, ಒಂದು ಡೆಸ್ಕ್ ಗೆ ಒಂದೇ ವಿದ್ಯಾರ್ಥಿ ಎಂದು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಪರೀಕ್ಷಾ ಕೇಂದ್ರದ ಬಳಿ ಆರೋಗ್ಯ ತಪಾಸಣಾ ಕೇಂದ್ರ ಕೂಡ ಆರಂಭಿಸಲಿದೆ.

ರಾಜ್ಯದಾದ್ಯಂತ 6 ಸಾವಿರಕ್ಕೂ ಅಧಿಕ  ಪರೀಕ್ಷಾ ಕೇಂದ್ರಗಳನ್ನು ಇಲಾಖೆ ತೆರೆಯಲಿದ್ದು, ಲಸಿಕೆ ಪಡೆದ ಸಿಬ್ಬಂದಿಯನ್ನು ಪರೀಕ್ಷಾ ಮೇಲ್ವಿಚಾರಣೆ ಸೇರಿದಂತೆ ವಿವಿಧ ಕಾರ್ಯಗಳಿಗೆ ನೇಮಿಸಲು ಇಲಾಖೆ ನಿರ್ಧರಿಸಿದೆ.

ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಇಂದು ಎಸ್.ಎಸ್.ಎಲ್.ಸಿ ಪರೀಕ್ಷಾ ದಿನಾಂಕ ಪ್ರಕಟಿಸಲಿದ್ದು, ಪೋಷಕರು ಹಾಗೂ ವಿದ್ಯಾರ್ಥಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

ಇನ್ನೊಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆ ಕೈಬಿಟ್ಟು ಎಸ್.ಎಸ್.ಎಲ್.ಸಿ ಗೆ ಪರೀಕ್ಷೆ ನಡೆಸುತ್ತಿರುವ ರಾಜ್ಯ ಸರ್ಕಾರದ ನೀತಿ ಪೋಷಕರ ಆಕ್ರೋಶಕ್ಕೂ ಕಾರಣವಾಗಿದ್ದು, ಕೊರೋನಾ ಸೋಂಕಿನ ಪ್ರಮಾಣ ಮಕ್ಕಳಲ್ಲಿ ಹೆಚ್ಚುತ್ತಿರುವ ಹೊತ್ತಿನಲ್ಲೇ ಸರ್ಕಾರದ ಈ ಕ್ರಮ ಸರಿಯಲ್ಲ ಎಂಬ ಅಭಿಪ್ರಾಯವೂ ಕೇಳಿಬರುತ್ತಿದೆ.

Comments are closed.