ಕೋಟದಲ್ಲಿ ಲತಾ ಹೋಟೆಲ್ ಹಾಗೂ ಮಾಲೀಕರ ಮನೆ ಸೀಲ್ ಡೌನ್

0

ಬ್ರಹ್ಮಾವರ : ಕರಾವಳಿಯಲ್ಲಿ ಕೊರೊನಾ ಆರ್ಭಟ ಜೋರಾಗಿದೆ. ಕೋಟದಲ್ಲಿ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಟೆಲ್ ಹಾಗೂ ಮಾಲೀಕರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗ್ರಾಹಕರು ಹೆಚ್ಚಾಗಿ ಕಾಣಿಸಿಕೊಳ್ಳುವ ಹೋಟೆಲ್ ಹಾಗೂ ಅಂಗಡಿಗಳ ಮಾಲೀಕರು ಹಾಗೂ ಸಿಬ್ಬಂದಿಗಳನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಂತೆಯೇ ಕೋಟದಲ್ಲಿರುವ ಲತಾ ಹೋಟೆಲ್ ಮಾಲೀಕರನ್ನೂ ನಿನ್ನೆ ಕೊರೊನಾ ತಪಾಸಣೆಗೆ ಒಳಪಡಿಸಲಾಗಿತ್ತು.

ಆದ್ರಿಂದು ಬಂದ ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಲತಾ ಹೋಟೆಲ್ ಹಾಗೂ ಹಳೆ ಸಂತೆ ಮಾರುಕಟ್ಟೆಯಲ್ಲಿರುವ ಮಾಲೀಕರ ಮನೆಯನ್ನು ಕೋಟ ಕಂದಾಯ ನಿರೀಕ್ಷಕರಾದ ರಾಜು ಅವರ ನೇತೃತ್ವದಲ್ಲಿ ಸೀಲ್ ಡೌನ್ ಮಾಡಲಾಗಿದೆ.

ಹೋಟೆಲ್ ಮಾಲೀಕರಿಗೆ ಯಾವುದೇ ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿರಲಿಲ್ಲ. ಅಲ್ಲದೇ ಯಾವುದೇ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲದಿರುವುದು ಆತಂಕವನ್ನು ಮೂಡಿಸಿದೆ. ಲಾಕ್ ಡೌನ್ ವೇಳೆಯಲ್ಲಿಯೂ ಗ್ರಾಹಕರಿಗೆ ಸೇವೆಯನ್ನು ಒದಗಿಸುತ್ತಾ ಬಂದಿದ್ದಾರೆ. ಅಲ್ಲದೇ ಕೋಟ ಪರಿಸರದಲ್ಲಿ ಅತೀ ಹೆಚ್ಚು ಗ್ರಾಹಕರು ಹೋಟೆಲ್ ಗೆ ಭೇಟಿಯನ್ನು ಕೊಟ್ಟಿದ್ದಾರೆ. ಇದೀಗ ಗ್ರಾಹಕರಿಂದಲೇ ಹೋಟೆಲ್ ಮಾಲೀಕರಿಗೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆಯಿದ್ದು, ಆರೋಗ್ಯ ಸಿಬ್ಬಂದಿ ಕೊರೊನಾ ಸೋಂಕಿನ ಮೂಲವನ್ನು ಪತ್ತೆ ಹಚ್ಚುತ್ತಿದ್ದಾರೆ.

ಇನ್ನು ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಹೋಟೆಲ್ ಸಿಬ್ಬಂದಿ ಹಾಗೂ ಮನೆಯವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಮಾಲೀಕರೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿರುವವರನ್ನು ನಾಳೆ ಕೊರೊನಾ ತಪಾಸಣೆಗೆ ಒಳಪಡಿಸುವ ಸಾಧ್ಯತೆಯಿದೆ.

Leave A Reply

Your email address will not be published.