ಕೋಟತಟ್ಟು ಗ್ರಾಮ ಪಂ. ಸಂಪೂರ್ಣ ಲಾಕ್ ಡೌನ್ : ಅಗತ್ಯ ವಸ್ತು ಖರೀದಿಗೂ ಇಲ್ಲ ಅವಕಾಶ

ಕೋಟ : ಕೊರೊನಾ ವೈರಸ್ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿ ಮಾಡಲಾಗಿದೆ. ಜೂನ್ 10ರಂದು ಮಧ್ಯಾಹ್ನ 12 ಗಂಟೆಯಿಂದ ಈ ಆದೇಶ ಜಾರಿಗೆ ಬರಲಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50ಕ್ಕೂ ಅಧಿಕ ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿಂದು ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆ ನಡೆಯಿತು. ಸಭೆಯಲ್ಲಿ ಕೊರೊನಾ ಸೋಂಕನ್ನು ನಿಯಂತ್ರಣ ಮಾಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿಗೆ ತರಲು ನಿರ್ಣಯಿಸಲಾಯಿತು.

ಜೂನ್ 10ರಂದು ಮಧ್ಯಾಹ್ನ 12 ಗಂಟೆಯಿಂದ ಸಂಪೂರ್ಣ ಲಾಕ್ ಡೌನ್ ಆದೇಶ ಜಾರಿಗೆ ಬರಲಿದ್ದು, ಜೂನ್ 14ರಂದು ಪೂರ್ವಾಹ್ನ 6 ಗಂಟೆಯ ವರೆಗೆ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವೈದ್ಯಕೀಯ ಕಾರಣ, ಮನೆ ಮನೆಗೆ ಹಾಲು ವಿತರಣೆ, ಡೈರಿಗೆ ಹಾಲು ಹಾಕುವುದು, ಮಲ್ಲಿಗೆ ಕೃಷಿ ಚಟುವಟಿಕೆಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ.

ಬ್ಯಾಂಕ್, ಪಡಿತರ ವಿತರಣೆ, ವ್ಯಾಪಾರ ವಹಿವಾಟು ಸೇರಿದಂತೆ ಎಲ್ಲಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧ ಹೇರಲಾಗಿದೆ. ಗ್ರಾಮಸ್ಥರು ಲಾಕ್ ಡೌನ್ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮನೆಯಿಂದ ಹೊರಗೆ ಬರುವಂತಿಲ್ಲ. ಒಂದೊಮ್ಮೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ರೆ ಅಂತವರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆಯಡಿ ಹಾಗೂ ಸೋಂಕು ತಡೆಗಟ್ಟು ನಿಟ್ಟಿನಲ್ಲಿ ಕಾನೂನು ಕ್ರಮಕೈಗೊಳ್ಳುವುದಾಗಿಯೂ ಗ್ರಾಮ ಪಂಚಾಯತ್ ಎಚ್ಚರಿಕೆಯನ್ನು ನೀಡಿದೆ.

Comments are closed.