ಕೊರೋನಾ ಅಬ್ಬರಕ್ಕೆ ನಲುಗಿದ ಮಹಾರಾಷ್ಟ್ರ…! ನಾಳೆಯಿಂದ ನೈಟ್ ಕರ್ಪ್ಯೂ ಜಾರಿ…!!

ಮಹಾರಾಷ್ಟ್ರ: ಕೊರೋನಾ ಎರಡನೇ ಅಲೆಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹಾಟ್ ಸ್ಪಾಟ್ ಎನ್ನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ನಾಳೆಯಿಂದ ನೈಟ್ ಕರ್ಪ್ಯೂ ಜಾರಿಯಾಗಲಿದೆ. ಪರಿಸ್ಥಿತಿ ನಿಯಂತ್ರಣಕ್ಕೆ  ಕರ್ಪ್ಯೂ ಅನಿವಾರ್ಯ ಎಂದಿರುವ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ 7 ಗಂಟೆಯವರೆಗೆ ಕರ್ಪ್ಯೂ ಜಾರಿಗೊಳಿಸಿದೆ.

ಮಾರ್ಚ್ 28 ರಿಂದ  ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಮಾಲ್ ಸೇರಿದಂತೆ ಎಲ್ಲ ವ್ಯಾಪಾರ ವಹಿವಾಟುಗಳು ಸ್ಥಗಿತವಾಗಲಿದ್ದು, ನಿಯಮವನ್ನು ಕಠಿಣವಾಗಿ ಜಾರಿಗೊಳಿಸಲು ಸಿಎಂ ಉದ್ಧವ್ ಠಾಕ್ರೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನೈಟ್ ಕರ್ಪ್ಯೂ ಮೂಲಕ ಪರಿಸ್ಥಿತಿ ನಿಯಂತ್ರಿಸುವ ಪ್ರಯತ್ನ ನಡೆದಿದ್ದು, ಪ್ರಯತ್ನ ಸಫಲವಾಗದೇ ಹೋದಲ್ಲಿ ಮತ್ತೆ ಮಹಾರಾಷ್ಟ್ರ ಲಾಕ್ ಡೌನ್ ಆಗಲಿದೆ.

ಶುಕ್ರವಾರ ಒಂದೇ ದಿನ ಮಹಾರಾಷ್ಟ್ರದಲ್ಲಿ 36 ಸಾವಿರದ 902 ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಕೊರೋನಾ ಅಲೆ ಕಾಣಿಸಿಕೊಂಡ ಬಳಿಕ ದಾಖಲಾದ ಅತ್ಯಧಿಕ ಪ್ರಕರಣ ಇದಾಗಿದೆ. 112 ಜನರು ಶುಕ್ರವಾರ ಸಾವನ್ನಪ್ಪಿದ್ದು, ಕಳೆದ ಐದು ದಿನಗಳಲ್ಲಿ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 1.3 ಲಕ್ಷದಷ್ಟಿದೆ.

ಮುಂಬೈ ಮಹಾನಗರ ಒಂದರಲ್ಲೇ ಶುಕ್ರವಾರ 5,513 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 9 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಮುಂಬೈನಲ್ಲಿ ಸೆಲಿಬ್ರೆಟಿಗಳು ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅಮೀರ್ ಖಾನ್, ಮಾಧವನ್ ಬಳಿಕ ಸಚಿನ್ ತೆಂಡೂಲ್ಕರ್ ಕೂಡ ಸೋಂಕಿಗೆ ತುತ್ತಾಗಿದ್ದಾರೆ.

ಕೊರೋನಾ ಎರಡನೇ ಅಲೆ ಆರಂಭವಾದಾಗಿನಿಂದಲೂ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಈಗಾಗಲೇ ಥಾನೆ, ನಾಗ್ಪುರ ಸೇರಿದಂತೆ ಹಲವೆಡೆ ಸೀಲ್ ಡೌನ್ ಸೇರಿದಂತೆ ಹಲವು ನಿಯಮ ಅನುಸರಿಸಲಾಗಿತ್ತು. ಆದರೂ ಸೋಂಕು ನಿಯಂತ್ರಣದಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಸಧ್ಯ ಕರ್ಪ್ಯೂ ಜಾರಿಯಾಗಿದ್ದು,ಲಾಕ್ ಡೌನ್ ಜಾರಿಯಾದರೂ ಅಚ್ಚರಿ ಇಲ್ಲ ಎಂಬ ಸ್ಥಿತಿ ಇದೆ.

Comments are closed.