ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ ಮಹಾನಾಯಕ…! ಡಿಕೆಶಿ ರಾಜೀನಾಮೆ ಆಗ್ರಹಿಸಿ ಬಿಜೆಪಿ ಟ್ವೀಟ್ ವಾರ್…!!

 ರಾಜ್ಯದಲ್ಲಿ ಸಿಡಿದ ಸಿಡಿ ಪ್ರಕರಣದ ಆರಂಭದಿಂದಲೂ ಕೇಳಿಬಂದ ಮಹಾನಾಯಕ ಶಬ್ದಕ್ಕೆ ಕೊನೆಗೂ ಆಧಿಪತಿ ಸಿಕ್ಕಂತಾಗಿದೆ. ಯುವತಿ ಸಿಡಿ ಆಧರಿಸಿ ಆ ಮಹಾನಾಯಕ ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ನಿರ್ಧರಿಸಿದ್ದು, ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ ಡಿಕೆಶಿ ರಾಜೀನಾಮೆ ಪಡೆಯಬೇಕೆಂದು ಕಾಂಗ್ರೆಸ್ ಅಧಿನಾಯಕಿಗೆ ಕಮಲ ಪಾಳಯ ಆಗ್ರಹಿಸಿದೆ.

ಸಿಡಿ ಲೇಡಿಯ ಆಡಿಯೋದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಹೈಅಲರ್ಟ್ ಆಗಿರುವ ಬಿಜೆಪಿ ತಕ್ಷಣ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಆಗ್ರಹಿಸುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, ಸಿಡಿ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪವಾಗಿದೆ . ಅನೈತಿಕ ಹಾಗೂ ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ  ಆ ಮಹಾನಾಯಕನ ರಾಜೀನಾಮೆಯನ್ನು ತಕ್ಷಣವೇ ಪಡೆಯಬೇಕೆಂದು  ಬಿಜೆಪಿ ಟ್ವೀಟ್ ನಲ್ಲಿ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದೆ.

ಸದನದ ಸದಸ್ಯ ಹೆಸರು ಬಂದಿದೆ ಎಂಬ ಕಾರಣ ಮುಂದಿಟ್ಟುಕೊಂಡು ಬಜೆಟ್ ಚರ್ಚೆಗೂ ಅವಕಾಶ ನೀಡದ ನೀವು, ಈಗ ಮಹಾನಾಯಕನ ಹೆಸರು ಪ್ರಸ್ತಾಪವಾಗಿದೆ. ವಿಶೇಷ ಅಧಿವೇಶನ ಕರೆದು ಚರ್ಚಿಸುವಷ್ಟು ವಿಷಯಗಳಿವೆ. ಈಗ ಹೇಳಿ ಮಹಾನಾಯಕನ ರಾಜೀನಾಮೆ ಪಡೆದು ಸದನದಲ್ಲಿ ಈ ಬಗ್ಗೆ ಯಾವಾಗ ಚರ್ಚಿಸುತ್ತೀರಿ ಎಂದು ಬಿಜೆಪಿ ಟ್ವೀಟ್ನ ಲ್ಲಿ ಪ್ರಶ್ನಿಸಿದೆ.

ಸಿಡಿ ಸಂತ್ರಸ್ಥೆ ನೇರವಾಗಿ ಡಿಕೆಶಿ ಹೆಸರು ಹೇಳಿದ್ದಾಳೆ, ಅವರ ಭೇಟಿಗೆ ಬಂದಿದ್ದೇನೆ ಎಂದಿದ್ದಾಳೆ. ಮಹಾನಾಯಕ ಡಿಕೆಶಿ ನಮ್ಮ ಜೊತೆ ಇದ್ದಾರೆ ಎಂದಿದ್ದಾಳೆ. ಹೀಗಾಗಿ ಈ ಸಂಚು ಕೆಪಿಸಿಸಿ ಕಚೇರಿಯಲ್ಲೇ ನಡೆದಿರಬಹುದೇ ಎಂಬ ಸಂಶಯ ಮೂಡುತ್ತಿದೆ. ಈಗಲಾದರೂ ಡಿಕೆಶಿ ಮಾಸ್ಟರ್ ಮೈಂಡ್ ಗೂ ತಮಗೂ ಇರುವ ನಂಟನ್ನು ಬಹಿರಂಗಪಡಿಸಬೇಕೆಂದು ಟ್ವೀಟ್ ಮೂಲಕ ಬಿಜೆಪಿ ಆಗ್ರಹಿಸಿದೆ.

ಹೆಣ್ಣನ್ನು ಬಳಸಿಕೊಂಡು ಕೀಳುಕುತಂತ್ರದಿಂದ ದ್ವೇಷ ರಾಜಕಾರಣ ಮಾಡಿದ ಕಾಂಗ್ರೆಸ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದ್ದು, ಸಿಡಿ ಲೇಡಿ ಡಿಕೆಶಿ ಹೆಸರು ಹೇಳುತ್ತಿದ್ದಂತೆ ಸರಣಿ ಟ್ವೀಟ್ ಗಳ ಮೂಲಕ ಡಿಕೆಶಿ ವಿರುದ್ಧ ತಿರುಗಿ ಬಿದ್ದಿದೆ.

ಅಷ್ಟೇ ಅಲ್ಲ ಡಿಕೆಶಿ ತಿಹಾರ್ ಜೈಲಿನಲ್ಲಿ ಕಳೆದ ದಿನಗಳನ್ನು ನೆನಪಿಸಿ ಟಾಂಗ್ ನೀಡಿದೆ.

Comments are closed.