ನರಸೀಪುರದ ಆರ್ಯುವೇದ ವೈದ್ಯ ನಾರಾಯಣ ಮೂರ್ತಿ ವಿಧಿವಶ

0

ಸಾಗರ : ದೇಶ, ವಿದೇಶಗಳಲ್ಲಿಯೂ ಪ್ರಖ್ಯಾತಿಯನ್ನು ಪಡೆದಿದ್ದ ನರಸೀಪುರದ ಆಯುರ್ವೇದ ವೈದ್ಯ ನಾರಾಯಣ ಮೂರ್ತಿ (80 ವರ್ಷ) ಅವರು ವಿಧಿವಶರಾಗಿದ್ದಾರೆ. ಕ್ಯಾನ್ಸರ್ ಗೆ ಪರಿಣಾಮಕಾರಿ ಔಷಧವನ್ನು ನೀಡುವ ಮೂಲಕ ಜನಪ್ರಿಯತೆಯನ್ನು ಗಳಿಸಿದ್ದ ನಾರಾಯಣ ಮೂರ್ತಿ ಅವರು ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಾಗಿರುವ ನಾರಾಯಣ ಮೂರ್ತಿ ಅವರು, ಸಾಗರ ತಾಲೂಕಿನ ನರಸೀಪುರದಲ್ಲಿ ನೆಲೆಸಿದ್ದಾರೆ. ನರಸೀಪುರದ ನಾರಾಯಣ ಮೂರ್ತಿ ಅವರು ಕ್ಯಾನ್ಸರ್ ಔಷಧಿಯ ಮಾಂತ್ರಿಕ ಎಂದು ಖ್ಯಾತಿಯನ್ನು ಪಡೆದಿದ್ದರು. ತನ್ನ ಮನೆಯಲ್ಲಿಯೇ ಕಳೆದ 25 ವರ್ಷಗಳಿಂದಲೂ ಕ್ಯಾನ್ಸರ್ ಮಾತ್ರವಲ್ಲದೇ ಕೀಲು ಮತ್ತು ಮೂಳೆ ಸಮಸ್ಯೆ, ಮಧುಮೇಹ, ಅಲರ್ಜಿ, ಚರ್ಮರೋಗ ಸೇರಿದಂತೆ ಹಲವು ಕಾಯಿಲೆಗಳಿಗೆ ನಾರಾಯಣ ಮೂರ್ತಿ ಅವರು ಔಷಧವನ್ನು ನೀಡುತ್ತಿದ್ದರು.

ಪ್ರತೀ ಗುರುವಾರ ಹಾಗೂ ಭಾನುವಾರದಂದು ಔಷಧವನ್ನು ಪಡೆಯಲು ಸಾವಿರಾರು ಮಂದಿ ಇವರ ಮನೆ ಮುಂದೆ ಜಮಾಯಿಸುತ್ತಿದ್ದರು. ನಾರಾಯಣ ಮೂರ್ತಿ ಅವರು ದೇಶ ವಿದೇಶದಲ್ಲಿಯೂ ಪ್ರಖ್ಯಾತಿಯನ್ನು ಪಡೆದುಕೊಂಡಿದ್ದರು. ನ್ಯಾಷನಲ್ ಜಿಯೋಗ್ರಾಫಿ ಚಾನೆಲ್ ನಾರಾಯಣ ಮೂರ್ತಿ ಅವರ ಕುರಿತು ವಿಶೇಷ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು.

ನಾರಾಯಣ ಮೂರ್ತಿ ಅವರು ಕಾಡಿನಿಂದ ಗಿಡಮೂಲಿಕೆಗಳನ್ನು ತಂದು ತಾವೇ ಖುದ್ದು ಔಷಧವನ್ನು ಸಿದ್ದಪಡಿಸುತ್ತಿದ್ದರು. ಕ್ಯಾನ್ಸರ್ ಔಷಧಕ್ಕೆ ಆಸ್ಪತ್ರೆಗಳಲ್ಲಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಪಡೆಯುತ್ತಿದ್ರೆ, ನಾರಾಯಣ ಮೂರ್ತಿ ಅವರು ಕೇವಲ 100 ರೂಪಾಯಿ ಔಷಧವನ್ನು ವಿತರಿಸುತ್ತಿದ್ದು, ಹೀಗಾಗಿಯೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಔಷಧ ಪಡೆಯಲು ಜನರು ಆಗಮಿಸುತ್ತಿದ್ದರು.

ಆದರೆ ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಹೇರಿಕೆಯಾಗುತ್ತಿದ್ದಂತೆಯೇ ನಾರಾಯಣ ಮೂರ್ತಿ ಅವರಿಗೆ ಔಷಧಿ ವಿತರಣೆ ಮಾಡುವುದನ್ನು ನಿಲ್ಲಿಸುವಂತೆ ಜಿಲ್ಲಾ ಆರೋಗ್ಯ ಇಲಾಖೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಔಷಧ ನೀಡುವುದನ್ನು ನಿಲ್ಲಿಸಿದ್ದರು.

Leave A Reply

Your email address will not be published.