ಹೊಸ ವರ್ಷಾಚರಣೆ : ಕರಾವಳಿಯಲ್ಲಿ ಬೀಚ್ ಗಳಿಗೆ ನಿಷೇಧ : ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು : ಯುಕೆ ವೈರಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಲರ್ಟ್ ಆಗಿದೆ. ಒಂದೆಡೆ ಜಿಲ್ಲೆಯ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ರೆ, ಇನ್ನೊಂದೆಡೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮಂಗಳೂರಲ್ಲಿ ಹೊಸ ವರ್ಷಾಚರಣೆಯ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಮಂಗಳೂರು ನಗರದಲ್ಲಿ ಡಿ.31 ರ ಸಂಜೆ 6 ಗಂಟೆಯಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ಮಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ, ಪಾರ್ಟಿ ಆಯೋಜನೆಗೆ ನಿಷೇಧ ಹೇರಲಾಗಿದೆ. ಅಲ್ಲದೇ ನಿಯಮ ಮೀರಿ ವಾಹನ ಸಂಚಾರ ನಡೆಸಿದ್ರೆ ಅಂತಹ ವಾಹನಗಳನ್ನು ಸೀಜ್ ಮಾಡುವುದಾಗಿ ಮಂಗಳೂರು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಹೊಸ ಕೊರೊನಾ ವೈರಸ್ ಸೋಂಕು ಹರಡದಂತೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ವರ್ಷಾಚರಣೆಯ ಸಂಭ್ರಮದಲ್ಲಿ ಪ್ರವಾಸಿಗರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಬೀಚ್ ಗಳಿಗೆ ಆಗಮಿಸುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮಂಗಳೂರಿನ ಉಲ್ಲಾಳ, ಸೋಮೇಶ್ವರ, ಮೊಗವೀರ ಪಟ್ಟಣ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು ಮತ್ತು ಸೂರತ್ಕಲ್‍ ಬೀಚ್ ಸೇರಿದಂತೆ ಕಡಲತೀರಗಳಿಗೆ ಡಿಸೆಂಬರ್ 31ರ ಮಧ್ಯಾಹ್ನದಿಂದ ಜನವರಿ 2ರ ಮಧ್ಯಾಹ್ನದವರೆಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶವನ್ನು ಜಿಲ್ಲಾಡಳಿತ ನಿಷೇಧಿಸಿದೆ.

Comments are closed.