ಮನೆಕಟ್ಟೋ ಜಾಗದಲ್ಲಿ ಬದುಕು ಕಟ್ಟೋ ಪೋಸು…! ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾದ ಫ್ರೀ ವೆಡ್ಡಿಂಗ್ ಪೋಟೋಶೂಟ್…!!

ಮದುವೆಗಳು ಸುದ್ದಿಯಾಗೋ ಬದಲು ಪೋಟೋಶೂಟ್ ಗಳು ಸದ್ದು ಮಾಡ್ತಿರೋ ಕಾಲದಲ್ಲಿ  ಇಲ್ಲೊಂದು ವಿಭಿನ್ನ ಪೋಟೋಶೂಟ್  ಎಲ್ಲರ ಮನಸೆಳೆಯುತ್ತಿದೆ. ಇಷ್ಟಕ್ಕೂ ಈ ಪೋಟೋಶೂಟ್ ಮಾಡಿಸಿಕೊಂಡಿರೋ ಜೋಡಿ ಬೆಲೆಬಾಳುವ ಬಟ್ಟೆ, ಅದ್ದೂರಿ ಅಲಂಕಾರ ಅಥವಾ ಕಾರ್,ಬೈಕ್ ಮೇಲೆ ಪೋಟೋ ತೆಗೆಸಿಕೊಂಡಿಲ್ಲ. ಬದಲಾಗಿ ಬದುಕು ಕಟ್ಟುವ ಹೊತ್ತಿನಲ್ಲೇ ಪೋಸು ಕೊಟ್ಟಿದ್ದಾರೆ.

ಮದುವೆ ಅನ್ನೋದು ಒಂಥರಾ ಮನೆ ಕಟ್ಟಿದಂತೆ ಪ್ರಯಾಸದಾಯಕವೇ. ಹೀಗಾಗಿ ಹೊಸಬಾಳಿಗೆ ಕಾಲಿಡುತ್ತಿರೋ ಜೋಡಿಯೊಂದು ಇಟ್ಟಿಗೆ ಜೋಡಿಸಿ,ಸಿಮೆಂಟ್ ಬಳಿದು, ಭಾರ ಹೊತ್ತು ಮನೆ ಕಟ್ಟುವ  ಬ್ಯಾಕ್ ಗ್ರೌಂಡ್ ನಲ್ಲಿ ಪಕ್ಕಾ ಕೂಲಿ ಕಾರ್ಮಿಕರಂತೆ ಪೋಸುಕೊಟ್ಟು ಮದುವೆ ಪೋಟೋಶೂಟ್ ಮಾಡಿಸಿಕೊಂಡಿದ್ದಾರೆ.

ತಲೆಗೊಂದು ಬಟ್ಟೆಕಟ್ಟಿಕೊಂಡು, ಬಟ್ಟೆ ಮೇಲೊಂದು ಹಳೆ ಶರ್ಟ್ ಹಾಕಿಕೊಂಡು ಕಟ್ಟಡ ಕಟ್ಟೋ  ತಾಪಿ,ಸಿಮೆಂಟ್, ಕಲ್ಲು,ಇಟ್ಟಿಗೆ,ಜಲ್ಲಿ ಜೊತೆಯೇ ಕಣ್ಣು-ಕಣ್ಣು ಸೇರಿಸಿ ರೋಮ್ಯಾಂಟಿಕ್ ಪೋಸು ಕೊಟ್ಟಿದ್ದಾರೆ.  ಅಷ್ಟೇ ಅಲ್ಲ  ಕೆಲಸದ ನಡುವೆ ನಾನು ಬಡವ…ನೀನು ಬಡವಿ ಒಲವೆ ನಮ್ಮ ಬದುಕು ಎಂಬಂತೆ ಬಾಳೆ ಎಲೆಯಲ್ಲಿ ಒಬ್ಬರಿಗೊಬ್ಬರು ತುತ್ತು ತಿನ್ನಿಸುತ್ತ ಪೋಟೋಗ್ರಾಫರ್ ಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ನವೆಂಬರ್ 20 ರಂದು ನಡೆಯೋ ಮದುವೆಗಾಗಿ ಇಂತಹದೊಂದು ವಿಭಿನ್ನ ಪೋಟೋಶೂಟ್ ಮಾಡಿಸಿಕೊಂಡಿರುವ ಜೋಡಿಯ ಹೆಸರು ಅಭಯ ಹಾಗೂ ಜೆಸ್ಟಿನಾ. ಕೇರಳ ಮೂಲದ ಜೋಡಿಯಾಗಿದ್ದು, ವಿವಾಹದ ಸ್ಥಳದ ಮಾಹಿತಿ ಲಭ್ಯವಾಗಿಲ್ಲ. ಆದರೇ ಅಪ್ಪಟ ಗ್ರಾಮೀಣ ಸೊಗಡಿನ ಛಾಯೆ ಇರೋ ಈ ಪೋಟೋ ಶೂಟ್ ನೆಟ್ಟಿಗರ ಶ್ಲಾಘನೆಗೆ ಪಾತ್ರವಾಗಿದೆ.

ಪೋಟೋಶೂಟ್ ಅನ್ನೋದು ಇತ್ತೀಚಿನ ವರ್ಷಗಳಲ್ಲಿ ಜನಜನಿತವಾದ ಸಂಗತಿ. ಆದರೆ ಇದು ನಮ್ಮ ಸಂಸ್ಕೃತಿ,ಸಂಸ್ಕಾರಗಳ ಚೌಕಟ್ಟಿನಲ್ಲಿ ನಡೆದರೇ ಮಾತ್ರ ಚೆಂದ. ಆದರೆ ಇತ್ತೀಚಿಗೆ ಕೇರಳದ ಜೋಡಿಯೊಂದು ಅರೆಬರೆ ಬಟ್ಟೆಯಲ್ಲಿ ಪೋಟೋಶೂಟ್ ಮಾಡಿಸಿಕೊಂಡು ನೆಟ್ಟಿಗರ ಟೀಕೆಗೆ ಪಾತ್ರವಾಗಿತ್ತು. ಈಗ  ಈ ವಿಭಿನ್ನ ಪೋಟೋಶೂಟ್ ನೋಡಿದ ಸೋಷಿಯಲ್ ಮೀಡಿಯಾ ಮಂದಿ ಇದಪ್ಪಾ ಪೋಟೋಶೂಟ್ ಅಂದ್ರೇ ಅಂತ ಮೆಚ್ಚುಗೆ ವ್ಯಕ್ತಪಡಿಸ್ತಿದ್ದಾರೆ.

Comments are closed.