ಸಪ್ತಸಾಗರದಾಚೆ ಎಲ್ಲೋ ಶೂಟಿಂಗ್ ಸಂಭ್ರಮ…! ಪೋಟೋಸ್ ಜೊತೆ ಖುಷಿ ಹಂಚಿಕೊಂಡ ರಕ್ಷಿತ್ ಶೆಟ್ಟಿ…!!

ನಟ ರಕ್ಷಿತ್ ಶೆಟ್ಟಿ ಸಪ್ತಸಾಗರದಾಚೆ ಎಲ್ಲೋ  ಪ್ರಯಾಣಕ್ಕೆ ಸಿದ್ಧವಾಗಿದ್ದಾರೆ. ಶ್ರೀಮನ್ನಾರಾಯಣ ಬಳಿಕ ರಕ್ಷಿತ್ ನಟಿಸುತ್ತಿರುವ  ಈ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದ್ದು, ಈ ಖುಷಿಯನ್ನು ರಕ್ಷಿತ್ ತಮ್ಮ ಟ್ವೀಟರ್ ನಲ್ಲಿ ಹಾಗೂ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.

ಹೇಮಂತ್ ಎಂ ರಾವ್ ನಿರ್ದೇಶನದ ಈ ಚಿತ್ರ ಮೊದಲ 21 ದಿನಗಳ ಶೂಟಿಂಗ್ ಮುಗಿಸಿದೆ. ಈ ವಿಚಾರವನ್ನು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದು, ಸಪ್ತಸಾಗರದಾಚೆ ಎಲ್ಲೋ ಒಂದು ಅತ್ಯುತ್ತಮ ಚಿತ್ರಕಥೆ. ಅದ್ಭುತ ಚಿತ್ರತಂಡ,ಎಲ್ಲರಲ್ಲೂ ಇಮ್ಮಡಿ ಉತ್ಸಾಹ. ಬೇರೇನು ಬೇಕು. ಮೊದಲ 21 ದಿನದ ಶೂಟಿಂಗ್ ಮುಕ್ತಾಯಗೊಂಡಿದೆ ಎಂದಿದ್ದು ಹಲವು ಪೋಟೋ ಹಂಚಿಕೊಂಡಿದ್ದಾರೆ.

ನಗರದಲ್ಲಿ ಕೊರೋನಾ ಎರಡನೇ ಅಲೆ ಜೋರಾಗಿದ್ದು, ಜೀವನಾವಶ್ಯಕ ವ್ಯವಸ್ಥೆ ಹೊರತುಪಡಿಸಿ ಮತ್ತೆಲ್ಲವೂ ಸ್ತಬ್ಧವಾಗಿದೆ. ಹೀಗಾಗಿ ನಗರದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ 21 ದಿನಕ್ಕೆ ಮೊದಲ ಹಂತದ ಚಿತ್ರೀಕರಣ ನಿಲ್ಲಿಸಿದ್ದೇವೆ.  ಚಿತ್ರೀಕರಣಕ್ಕೆ ಸುರಕ್ಷಿತ ವಾತಾವರಣ ಸೃಷ್ಟಿಯಾದ ಬಳಿಕ ಹಾಗೂ ಚಿತ್ರತಂಡ ಎಲ್ಲ ಸದಸ್ಯರು ಕೊರೋನಾ ಲಸಿಕೆ ಪಡೆದ ಬಳಿಕ ಎರಡನೇ ಹಂತದ ಚಿತ್ರೀಕರಣ ಆರಂಭಿಸುವುದಾಗಿ ನಿರ್ದೇಶಕ ಹೇಮಂತ್ ಹೇಳಿದ್ದಾರೆ.

ಮೇ 15 ರೊಳಗೆ ಒಂದನೇ ಹಂತದ ಚಿತ್ರೀಕರಣ ನಡೆಸಿ, ಜುಲೈ ವೇಳೆಗೆ ಚಿತ್ರೀಕರಣ ಸಂಪೂರ್ಣಗೊಳಿಸಿ, ಡಿಸೆಂಬರ್ ಅಂತ್ಯಕ್ಕೆ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಇತ್ತಂತೆ ಚಿತ್ರತಂಡಕ್ಕೆ. ಆದರೆ ಕೊರೋನಾ ಚಿತ್ರತಂಡ ಲೆಕ್ಕಾಚಾರವನ್ನು ಉಲ್ಟಾ ಮಾಡಿದ್ದು, ಈಗ ಚಿತ್ರೀಕರಣವನ್ನೇ ಮುಂದೂಡುವ ಸ್ಥಿತಿ ಎದುರಾಗಿದೆ.

ಚಿತ್ರಕ್ಕಾಗಿ ಎರಡು ಶೇಡ್ ಪಾತ್ರದಲ್ಲಿ ರಕ್ಷಿತ್ ಶೆಟ್ಟಿ ಕಾಣಿಸಿಕೊಳ್ಳಲಿದ್ದು, ಒಂದರಿಂದ ಒಂದು ಪಾತ್ರಕ್ಕೆ 10-20 ಕೆಜಿ ತೂಕದ ವ್ಯತ್ಯಾಸ ಇರಲಿದೆಯಂತೆ. ಅದಕ್ಕಾಗಿಯೇ ಚಿತ್ರೀಕರಣದಲ್ಲೂ ಒಂದು ತಿಂಗಳ ಬ್ರೇಕ್ ಪಡೆಯಲಾಗಿತ್ತು. ಆದರೆ ಈಗ ಕೊರೋನಾ ಅಡ್ಡಿ ಚಿತ್ರೀಕರಣದ ಮೇಲೆ ಪ್ರಭಾವ ಬೀರಿದೆ.

Comments are closed.