ಬೆಳ್ಳಿತೆರೆಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕಹಾನಿ….! ಭಾರತ ಸಿಂಧೂರಿ ಸಿನಿಮಾ ಸೆಟ್ಟೇರಲು ಸಿದ್ಧ…!!

ಮಂಡ್ಯ: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೊರೋನಾಕ್ಕಿಂತ ಹೆಚ್ಚು ಸದ್ದು ಮಾಡಿದ ಸಂಗತಿ ಐಎಎಸ್ ಅಧಿಕಾರಿಗಳಿಬ್ಬರ ಜಡೆಜಗಳ. ಮೈಸೂರು ಡಿಸಿ ರೋಹಿಣಿ ಸಿಂಧೂರಿ ಹಾಗೂ ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ನಡುವೆ ಕಲಹ ತಣ್ಣಗಾಗುತ್ತಿದ್ದಂತೆ ರೋಹಿಣಿ ಸಿಂಧೂರಿ ಸಾಹಸಗಾಥೆ ಸಿನಿಮಾ ರೂಪದಲ್ಲಿ ಬರಲಿದೆ ಎಂದ ಸುದ್ದಿ ಹೊರಬಿದ್ದಿದೆ.

ಮಂಡ್ಯದ ನಾಲ್ವಡಿ ಕೃಷ್ಣರಾಜ್ ಒಡೆಯರ್ ಫಿಲ್ಮ್ಸ ಸಂಸ್ಥೆಯು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಕತೆಯನ್ನಾಧರಿಸಿ ಭಾರತ ಸಿಂಧೂರಿ ಟೈಟಲ್ ನಲ್ಲಿ ಸಿನಿಮಾ ನಿರ್ಮಿಸಲು ಮುಂದಾಗಿದೆ. ಇದಕ್ಕೆ ಸ್ವತಃ ರೋಹಿಣಿ ಸಿಂಧೂರಿ ಸಹ ಒಪ್ಪಿಗೆ ಸೂಚಿಸಿದ್ದಾರಂತೆ.

ಆದರೆ ನೀವಂದುಕೊಂಡಂತೆ ಈ ಸಿನಿಮಾ ರೋಹಿಣಿ ಇದುವರೆಗೂ ಎದುರಿಸಿದ ವಿವಾದಗಳನ್ನು ಆಧರಿಸಿ ನಿರ್ಮಾಣವಾಗುತ್ತಿಲ್ಲ. ಬದಲಾಗಿ ರೋಹಿಣಿ ಸಿಂಧೂರಿ ಮಂಡ್ಯದಲ್ಲಿ ಜಿಲ್ಲಾಪಂಚಾಯತ್ ಸಿಇಓ ಆಗಿದ್ದಾಗ ಮಾಡಿರುವ ಸಾಧನೆಗಳನ್ನು ಆಧರಿಸಿ ನಿರ್ಮಾಣವಾಗಲಿದೆ.

ರೋಹಿಣಿ ಮಂಡ್ಯ ಜಿ.ಪಂ ಸಿಇಓ ಆಗಿದ್ದಾಗ ಒಂದು ವರ್ಷದಲ್ಲೇ ಮಂಡ್ಯ ಜಿಲ್ಲೆಯನ್ನು ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿ ಮಾಡಿದ್ದರು. 1 ವರ್ಷದಲ್ಲಿ 1 ಲಕ್ಷ ಕ್ಕೂ ಅಧಿಕ ಶೌಚಾಲಯಗಳನ್ನು ನಿರ್ಮಿಸಿ ಪ್ರಧಾನಮಂತ್ರಿಗಳಿಂದ ಶ್ಲಾಘನೆ ಪಡೆದುಕೊಂಡಿದ್ದರು.

ಇದಲ್ಲದೇ ಮಂಡ್ಯದಲ್ಲಿ ಅವ್ಯಾಹತವಾಗಿ ನಡೆಯುತ್ತಿದ್ದ ಹೆಣ್ಣುಭ್ರೂಣ ಹತ್ಯೆ ಹಾಗೂ ಬಾಲ್ಯವಿವಾಹ ತಡೆಯಲು ಪ್ರಯತ್ನಿಸಿ ಯಶಸ್ವಿಯಾಗಿದ್ದರು. ಅಲ್ಲದೇ ರೋಹಿಣಿ ಜಿ.ಪಂ ಸಿಇಓ ಆಗಿದ್ದಾಗ ಮಂಡ್ಯ ಜಿಲ್ಲಾಪಂಚಾಯತ್ ರಾಜಕೀಯವಾಗಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದು, 7 ಅಧ್ಯಕ್ಷರು ಬದಲಾಗಿದ್ದರು.

ಈ ಅಂಶಗಳನ್ನು ಇಟ್ಟುಕೊಂಡು ರೋಹಿಣಿ ಮೇಲೆ ಸಿನಿಮಾ ನಿರ್ಮಾಣವಾಗಲಿದೆ. ಅಲ್ಲದೇ ರೋಹಿಣಿಯವರನ್ನು ಮೆಚ್ಚಿದ್ದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಅಂಬರೀಶ್, ನೀವು ಸುಂದರವಾಗಿದ್ದೀರಾ ಹಾಗೂ ದಕ್ಷತೆಯಿಂದ ಕೆಲಸ ಮಾಡುತ್ತೀರಾ ಎಂದು ಮೆಚ್ಚಿಕೊಂಡಿದ್ದರಂತೆ.

ಹೀಗಾಗಿ ರೋಹಿಣಿ ಸಿನಿಮಾದಲ್ಲಿ ಇವೆಲ್ಲವೂ ಇರಲಿದೆ ಎನ್ನಲಾಗುತ್ತಿದೆ. ಇನ್ನು ರೋಹಿಣಿ ಸಿಂಧೂರಿ ಪಾತ್ರಕ್ಕಾಗಿ ನಟಿ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ ಎಂದು ನಿರ್ದೇಶಕ ಕೃಷ್ಣಸ್ವರ್ಣಸಂದ್ರ ಮಾಹಿತಿ ನೀಡಿದ್ದಾರೆ.

ರೋಹಿಣಿ ಹುಟ್ಟುಬೆಳೆದ ಆಂಧ್ರಪ್ರದೇಶ, ಮಂಡ್ಯ,ಹಾಸನ,ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯಲಿದ್ದು, ಲಾಕ್ ಡೌನ್ ತೆರವಾದ ಬಳಿಕ ಸಿನಿಮಾ ನಿರ್ಮಾಣ ಆರಂಭವಾಗಲಿದೆ.

Comments are closed.