ಶಾಲಾರಂಭಕ್ಕೆ ಕೊನೆಗೂ ಡೇಟ್ ಫಿಕ್ಸ್..! ಸರಕಾರದ ಅಧಿಕೃತ ಅದೇಶವಷ್ಟೇ ಬಾಕಿ..!!!

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳನ್ನು ಆರಂಭಿಸಲು ಕೊನೆಗೂ ದಿನಾಂಕ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದೆ. ಮೊದಲ ಹಂತದಲ್ಲಿ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಡಿ .15ರಿಂದ ಶಾಲೆ- ಕಾಲೇಜು ಆರಂಭಗೊಳ್ಳುವುದು ಬಹುತೇಕ ಖಚಿತವಾಗಿದೆ.

ಈಗಾಗಲೇ ಶಾಲೆ ಆರಂಭಿಸಲು ಖಾಸಗಿ ಶಾಲೆಗಳ ಮುಖ್ಯಸ್ಥರು ಹಾಗೂ ಪಾಲಕರು ಸಮ್ಮತಿ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪಾವಳಿ ಬಳಿಕ ಸರ್ಕಾರ ಈ ಸಂಬಂಧ ಅಂತಿಮ ಆದೇಶ ಹೊರಬೀಳುವ ಸಾಧ್ಯತೆ ಇದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಶಾಲೆಗಳನ್ನು ಪುನರಾರಂಭಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಈಗಾಗಲೇ ಸರಣಿ ಸಭೆಗಳ ಮೂಲಕ ಅಭಿಪ್ರಾಯ ಸಂಗ್ರಹಿಸಿದೆ.

ಅಲ್ಲದೇ ಶಿಕ್ಷಣ ಇಲಾಖೆಯ ಆಯುಕ್ತರು ವರದಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದ್ದಾರೆ. ಅಲ್ಲದೇ ಶಿಕ್ಷಣ ಇಲಾಖೆಯ ನಿರ್ದೇಶಕರು ಆರ್ಟಿಇ ಸ್ಟೂಡೆಂಟ್ಸ್ ಆಂಡ್ ಪೇರೆಂಟ್ಸ್ ಅಸೋಸಿಯೇಷನ್, ಮಾನ್ಯತೆ ಪಡೆದ ಅನುದಾನ ರಹಿತ ಶಾಲೆಗಳ ಸಂಘ (ರುಪ್ಸ) ಜತೆಗೆ ಮತ್ತೊಂದು ಸುತ್ತಿನ ಸಭೆ ಸಹ ನಡೆಸಿದ್ದಾರೆ.

ಇನ್ನು ಪಾಲಕರು ಮತ್ತು ಖಾಸಗಿ ಶಾಲಾ ಸಂಘ ಸಂಸ್ಥೆಗಳ ನಡುವೆ ನಡೆದ ಸಭೆಯಲ್ಲೂ 9ರಿಂದ 12ನೇ ತರಗತಿ ಆರಂಭಿಸಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ರಾಜ್ಯ ಸರಕಾರ ಶಾಲಾರಂಭದಿಂದಾಗುವ ಸಾಧಕ ಬಾಧಕಗಳ ಕುರಿತು ಚರ್ಚಿಸಿ ಅಂತಿಮ ನಿರ್ಧಾರಕೈಗೊಳ್ಳಲಿದೆ ಎನ್ನಲಾಗುತ್ತಿದೆ.

Comments are closed.