ದೇಶದ ರಾಜಕಾರಣವೇ ಒಂದು ಬಗೆಯದ್ದಾದರೇ ತಮಿಳುನಾಡಿನ ರಾಜಕಾರಣಕ್ಕೆ ಇನ್ನಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಮೊನ್ನೆಮೊನ್ನೆ ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು ಸುದ್ದಿಯಾದ್ರೆ ಇವತ್ತು ಬಿಜೆಪಿ ಅಭ್ಯರ್ಥಿ ನಟಿ ಖುಷ್ಬೂ ದೋಸೆ ಹಾಕಿ ಮತದಾರರ ಮನಗೆಲ್ಲೋ ಪ್ರಯತ್ನ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಇನ್ನೇನು ಚುನಾವಣಾ ಮತದಾನಕ್ಕೆ ದಿನಗಣನೆ ನಡೆದಿದೆ. ಇದರ ಬೆನ್ನಲ್ಲೇ ಅಧಿಕಾರಕ್ಕೇರೋ ಕನಸಿನಲ್ಲಿರೋ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ನಡೆಸಿವೆ. ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರೋ ಬಿಜೆಪಿಯೂ ಅಧಿಕಾರ ಹಿಡಿಯುವ ಕನಸಿನಲ್ಲಿದೆ.

ಈ ಮಧ್ಯೆ ಬಿಜೆಪಿಯ ಎರಡು ಸ್ಟಾರ್ ಅಭ್ಯರ್ಥಿಗಳು ಎನ್ನಿಸಿಕೊಂಡಿರೋ ಅಣ್ಣಾಮಲೈ ಮತ್ತು ನಟಿ ಖುಷ್ಬೂ ಪೈಕಿ ಇಂದು ನಟಿ ಖುಷ್ಬೂ ಚುನಾವಣಾ ಪ್ರಚಾರದ ವೇಳೆ ದೋಸೆ ಅಂಗಡಿಯಲ್ಲಿ ದೋಸೆ ಹಾಕುವ ಮೂಲಕ ಮತದಾರರ ಮನಗೆಲ್ಲುವ ಸರ್ಕಸ್ ನಡೆಸಿದ್ದಾರೆ.

ಚೈನೈನ ಥಂಡರ್ ಲೈಟ್ಸ್ ಕ್ಷೇತ್ರದಿಂದ ಕಣಕ್ಕಿಳಿದಿರೋ ಖುಷ್ಬೂ ಸುಂದರ್ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿದ್ದಾರೆ. ಅಷ್ಟೇ ಅಲ್ಲ ಪ್ರಚಾರದ ವೇಳೆ ಪುಟ್ಟ ಶಿಶುವೊಂದನ್ನು ಎತ್ತಿ ಮುದ್ದಾಡುವ ಮೂಲಕ ನೆರೆದವರ ಮನಗೆದ್ದಿದ್ದಾರೆ. ಅಷ್ಟೇ ಅಲ್ಲ ಪ್ರಚಾರದ ಮಧ್ಯೆ ದೋಸೆ ಅಂಗಡಿಗೆ ಭೇಟಿ ನೀಡಿ ದೋಸೆ ಹಾಕಿ, ಬಳಿಕ ರಸ್ತೆ ಬದಿಯಲ್ಲೇ ದೋಸೆ ಸವಿದು ಜನರ ಮನಗೆಲ್ಲುವ ಪ್ರಯತ್ನ ಮಾಡಿದ್ದಾರೆ.

ತಮಿಳುನಾಡಿನಲ್ಲಿ ಕಮಲಕ್ಕೆ ನೆಲೆಕಲ್ಪಿಸಲು ಸರ್ಕಸ್ ನಡೆಸುತ್ತಿರುವ ಬಿಜೆಪಿ ಹೈಕಮಾಂಡ್ 2021 ರ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದು, 234 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಎಐಎಡಿಎಂಕೆ ಬಿಜೆಪಿಗೆ ಬಿಟ್ಟುಕೊಂಡಿದೆ.