14 ಗ್ರಾಮಗಳ ಒಡೆಯನಿಗಿಲ್ಲ ನೆಲೆ : ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳೇ ಅಡ್ಡಿ…!!!

ಕೋಟ : ಅಲ್ಲಿನ ಜನರು ಅನಾದಿ ಕಾಲದಿಂದಲೂ ಬಬ್ಬುಸ್ವಾಮಿಯನ್ನು ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದ್ರೀಗ ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಅಡೆತಡೆ ಎದುರಾಗಿದೆ. ದೇಗುಲ ನಿರ್ಮಾಣಕ್ಕೆ ಜಾಗ ನೀಡಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಡ್ಡಿಯಾಗಿದೆ ಅನ್ನೋ ಆರೋಪ ಕೇಳಿಬಂದಿದೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ – ಗುಂಡ್ಮಿಯಲ್ಲಿರುವ ಬಬ್ಬುಸ್ವಾಮಿ ದೇಗುಲ ಪ್ರಮುಖ ಧಾರ್ಮಿಕ ಕೇಂದ್ರ. ಕೋಟ ಹೋಬಳಿಯ 14 ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿಯವರು ಹಾಗೂ ಸ್ಥಳೀಯರು ಹಲವು ದಶಕಗಳಿಂದಲೂ ಬಬ್ಬುಸ್ವಾಮಿಯನ್ನು ಆರಾಧಿಸಿಕೊಂಡು ಬಂದಿದ್ದಾರೆ. ಆದ್ರೆ ದೇಗುಲವನ್ನು ಜೀರ್ಣೋದ್ದಾರಗೊಳಿಸಿ ಗುಡಿ ಕಟ್ಟಬೇಕು ಅನ್ನೋ ಭಕ್ತರ ಕನಸು ಇಂದಿಗೂ ಈಡೇರಿಲ್ಲ.

ಕಳೆದ ಹಲವು ತಲೆಮಾರುಗಳಿಂದಲೂ ಇಲ್ಲಿನ ಜನರು ಬಬ್ಬುಸ್ವಾಮಿಯನ್ನು ಆರಾಧಿಸಿಕೊಂಡು ಬರುತ್ತಿದ್ದು, ಗುಡಿ ನಿರ್ಮಾಣಕ್ಕೆ ಕೇವಲ 5 ಸೆಂಟ್ಸ್ ಜಾಗ ನೀಡಿ ಅಂತಾ ಕೇಳಿದ್ರೂ ಕೂಡ ಜಿಲ್ಲಾಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ಮನಸ್ಸು ಮಾಡುತ್ತಿಲ್ಲ. ಗುಂಡ್ಮಿಯಲ್ಲಿನ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡು ಬಬ್ಬುಸ್ವಾಮಿಯ ಗುಡಿಯಿರೋ ಬಗ್ಗೆ 1966ರಿಂದಲೂ ಸರಕಾರಿ ದಾಖಲೆಗಳಲ್ಲಿಯೇ ಉಲ್ಲೇಖವಿದೆ. ಇನ್ನು ಮುಜರಾಯಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಅವರು ಬಿಜೆಪಿ ಸರಕಾರದ ಅವಧಿಯಲ್ಲಿಯೇ ಬಬ್ಬುಸ್ವಾಮಿ ಗುಡಿ ನಿರ್ಮಾಣಕ್ಕೆ 5 ಲಕ್ಷ ರೂಪಾಯಿಯನ್ನು ಬಿಡುಗಡೆ ಮಾಡಿದ್ದಾರೆ. ಇಷ್ಟೆಲ್ಲಾ ಇದ್ದರೂ ಕೂಡ ಕೇವಲ 5 ಸೆಂಟ್ಸ್ ಜಾಗ ನೀಡಲು ಅಧಿಕಾರಿಗಳು ಮೀನಾಮೇಷ ಎಣಿಸುತ್ತಿದ್ದಾರೆನ್ನುವ ಆರೋಪ ಕೇಳಿಬಂದಿದೆ.

ಬಬ್ಬುಸ್ವಾಮಿ ಗುಡಿಯಿರೋ ಪ್ರದೇಶವೂ ಸೇರಿದಂತೆ ಒಟ್ಟು 4 ಎಕರೆ ಗೋಮಾಳ ಜಮೀನಿದ್ದು, ಈ ಜಮೀನಿನಲ್ಲಿ 2 ಎಕರೆ ಜಾಗವನ್ನು ಶಾಲೆಗೆ ಸರಕಾರ ಮಂಜೂರು ಮಾಡಿದೆ. ಉಳಿದ ಎರಡು ಎಕರೆ ಜಾಗದಲ್ಲಿ ಅಕ್ರಮ ಕಟ್ಟಡ, ಮನೆ ನಿರ್ಮಾಣ, ಮಸೀದಿ ನಿರ್ಮಾಣ ಮಾಡಲಾಗಿದೆ. ಅಷ್ಟೇ ಯಾಕೆ ಶಾಲೆಗೆ ನೀಡಿರುವ ಜಾಗದಲ್ಲಿಯೂ ಒತ್ತುವರಿ ನಡೆಸಲಾಗಿದೆ ಅನ್ನೋ ಆರೋಪ ಕೇಳಿಬಂದಿದೆ. ಹೀಗಿದ್ದರೂ ಮೌನವಹಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರ ಬಬ್ಬುಸ್ವಾಮಿ ಗುಡಿ ನಿರ್ಮಾಣಕ್ಕೆ ಜಾಗ ನೀಡಲು ಹಿಂದೇಟು ಹಾಕುತ್ತಿದ್ದಾರೆ.

ಗುಂಡ್ಮಿ ಗ್ರಾಮದಲ್ಲಿರುವ ಶಾಲೆಗೆ ಮಿಸಲಿಸಿದ ಸರಕಾರಿ ಸ್ಥಳದಲ್ಲಿ ಅಕ್ರಮ ಮನೆಗಳಿಗೆ ಇನ್ನಿತರ ಕಟ್ಟಡಗಳಿಗೆ ಅವಕಾಶ ಕಲ್ಪಿಸಲಾಗಿದೆ. ಆದರೆ ಶ್ರೀ ಬಬ್ಬುಸ್ವಾಮಿಯನ್ನು ಅನಾಧಿ ಕಾಲದಿಂದಲೂ ನಮ್ಮ ಹಿರಿಯರು ಅದೇ ಸ್ಥಳದಲ್ಲಿ ಪೂಜಿಸಿ ಪ್ರಾರ್ಥಿಸಿ ಕೊಂಡು ಬಂದರೂ ದೈವಸ್ಥಾನವನ್ನು ಜೀರ್ಣೋದ್ದಾರ ಮಾಡಲು ಸರಕಾರಿ ಭೂಮಿಯಲ್ಲಿ ನಮಗೆ 5 ಸೆಂಟ್ಸ್ ಜಾಗ ಮಂಜೂರು ಮಾಡಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ಕೇಂದ್ರ, ರಾಜ್ಯದಲ್ಲಿ ಹಿಂದೂಪರ ಸರಕಾರ ಇದ್ದರೂ ಕೂಡ ದಲಿತ ಹಿಂದೂಗಳ ಶ್ರದ್ಧಾಕೇಂದ್ರದ ಸಮಸ್ಯೆ ಬಗೆಹರಿಸುವವರಿಲ್ಲದಾಗಿದೆ ಎಂದು ಗುಂಡ್ಮಿ ಬಬ್ಬುಸ್ವಾಮಿ ದೈವಸ್ಥಾನದ ಅಧ್ಯಕ್ಷರಾದ ನಾರಾಯಣ ಅವರು ಅಸಹಾಯಕತೆಯನ್ನು ತೋಡಿಕೊಳ್ಳುತ್ತಾರೆ.

https://kannada.newsnext.live/good-news-milk-producers-2-rupees-hike-per-liter/

ಬಬ್ಬುಸ್ವಾಮಿಗೆ ಗುಡಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಭಕ್ತರು ಹಲವು ವರ್ಷಗಳಿಂದಲೂ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಆದರೆ ಯಾವುದೇ ಪ್ರಯೋಜನವೂ ಆಗಿಲ್ಲ. ಇನ್ನು ಬಬ್ಬುಸ್ವಾಮಿ ಗುಡಿ ನಿರ್ಮಾಣಕ್ಕೆ ಪ್ರಭಾವಿ ರಾಜಕಾರಣಿಯೋರ್ವರು ತಡೆಯೊಡ್ಡಿದ್ದಾರೆನ್ನುವ ಆರೋಪವೂ ಕೇಳಿಬರುತ್ತಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಆರಾಧ್ಯ ದೇವರಾದ ಬಬ್ಬುಸ್ವಾಮಿಗೆ ನೆಲೆ ನೀಡಲು ಹಿಂಜರಿಕೆ ಏಕೆ ಎಂಬ ಪ್ರಶ್ನೆಗಳು ಕೂಡಾ ಸಾರ್ವಜನಿಕ ವಲಯದಲ್ಲಿ ಹುಟ್ಟಿಕೊಂಡಿದೆ.

https://kannada.newsnext.live/covid-today-report-udupi-bangalore-corona-blast/

ಭಕ್ತರು ಈಗಾಗಲೇ ಸ್ಥಳೀಯಾಡಳಿತದಿಂದ ಹಿಡಿದು ಜಿಲ್ಲಾಡಳಿತದ ವರೆಗೂ ಮನವಿ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲಾ ಸ್ಥಳೀಯ ಶಾಸಕರು, ಧಾರ್ಮಿಕ ದತ್ತಿ ಇಲಾಖೆಯ ಸಚಿವರಿಗೂ ಮನವಿ ಸಲ್ಲಿಸಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದ್ರೂ ರಾಜಕಾರಣಿಗಳು ತಮ್ಮ ಪತಿಷ್ಠೆಯನ್ನು ಮರೆತು ಬಬ್ಬುಸ್ವಾಮಿಗೆ ನೆಲೆ ಒದಗಿಸುತ್ತಾರಾ ಅನ್ನೋದನ್ನು ಕಾದುನೋಡಬೇಕಾಗಿದೆ.

https://kannada.newsnext.live/maharashtra-corona-cases-covid-19-night-curfew-shutdown-mumbai/

Comments are closed.