ಉಡುಪಿಯಲ್ಲಿ ಲಾಕ್ ಡೌನ್ ಇಲ್ಲ : 14 ದಿನಗಳ ಕಾಲ ಸೀಲ್ ಡೌನ್ !

0

ಉಡುಪಿ : ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಬದಲು ಜಿಲ್ಲೆಯ ಗಡಿಗಳನ್ನು ಸೀಲ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ಜನಪ್ರತಿನಿಧಿಗಳ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲೆಯ ಗಡಿಗಳನ್ನು 14 ದಿನಗಳ ಕಾಲ ಸಂಪೂರ್ಣವಾಗಿ ಸೀಲ್ ಮಾಡಲು ನಿರ್ಧರಿಸಲಾಗಿದೆ.

ಉಡುಪಿ ಜಿಲ್ಲಾ ಗಡಿಭಾಗದಿಂದ ಹೊರಗೆ ಹೋಗುವವರಿಗೆ ಮತ್ತು ಒಳಗೆ ಬರುವವರಿಗೆ ನಾಳೆ ರಾತ್ರಿ 8:00 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಯಾರಿಗೂ ಕೂಡ ಜಿಲ್ಲೆಯೊಳಗೆ ಪ್ರವೇಶಕ್ಕೆ ಅವಕಾಶವನ್ನು ನೀಡುವುದಿಲ್ಲ. ಭಾನುವಾರದಂದು ಎಂದಿನಂತೆಯೇ ಜಿಲ್ಲೆಯಲ್ಲಿ ಲಾಕ್ ಡೌನ್ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕಾರ್ಕಳ ಶಾಸಕರಾದ ಸುನೀಲ್ ಕುಮಾರ್, ಬೈಂದೂರು ಶಾಸಕರಾದ ಸುಕುಮಾರ್ ಶೆಟ್ಟಿ, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ಕುಂದಾಪುರ ಶಾಸಕರಾದ ಶ್ರೀನಿವಾಸ್ ಶೆಟ್ಟಿ ಮತ್ತು ಜಿಲ್ಲಾಧಿಕಾರಿಗಳ ಜಿ ಜಗದೀಶ್, ಜಿಲ್ಲಾ ಪಂಚಾಯಿತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೀತಿ ಗೆಲ್ಹೋತ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಸಹಾಯಕ ಆಯುಕ್ತರಾದ ಕೆ.ರಾಜು, ಜಿಲ್ಲಾ ಆರೋಗ್ಯ ಅಧಿಕಾರಿ ಸುಧೀರ್ ಚಂದ್ರ ಸೂಡ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಶಾಂತ್ ಭಟ್, ಜಿಲ್ಲಾ ಸರ್ಜನ್ ಮಧುಸೂದನ್ ಮುಂತಾದವರು ಉಪಸ್ಥಿತರಿದ್ದರು.

Leave A Reply

Your email address will not be published.