ವಿಮಾನ ಪ್ರಯಾಣಕ್ಕಿನ್ನು ಈ ನಿಯಮಗಳು ಕಡ್ಡಾಯ !

0

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದಾಗಿ ಸ್ಥಗಿತಗೊಂಡಿರುವ ವಿಮಾನಯಾನ ಸೇವೆ ಪುನರಾಂಭಗೊಳ್ಳುವ ಸಾಧ್ಯತೆಯಿದೆ. ಲಾಕ್ ಡೌನ್ ಮುಗಿದ ಬಳಿಕ ಆರಂಭಗೊಳ್ಳುವ ವಿಮಾನ ಸೇವೆಗಳಲ್ಲಿ ಹಲವು ಬದಲಾವಣೆಗಳನ್ನು ತರಲು ಕೇಂದ್ರ ಸರಕಾರ ಮುಂದಾಗಿದೆ. ನಾಗರೀಕ ವಿಮಾನಯಾನ ಸಚಿವಾಲಯ, ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿದೆ. ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಕಾಪಾಡುವ ನಿಟ್ಟಿನಲ್ಲಿ ಕ್ರಮವಹಿಸಲಾಗುತ್ತಿದೆ.

ವಿಮಾನ ನಿಲ್ದಾಣದಲ್ಲಿರುವ ಲಿಫ್ಟ್, ಎಸ್ಕಲೇಟರ್ಸ್, ಕುರ್ಚಿಗಳಲ್ಲಿ ಕುಳಿತುಕೊಳ್ಳುವ ಜಾಗದಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಇನ್ಮುಂದೆ ವಿಮಾನಗಳಲ್ಲಿ ಪ್ರಯಾಣಿಸುವವರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್ ಬಳಸಲೇ ಬೇಕು. ಯಾವುದೇ ಕಾರಣಕ್ಕೂ ಕ್ಯಾಬಿನ್ ಲಗೇಜ್ ಗಳನ್ನು ವಿಮಾನದೊಳಗೆ ಕೊಂಡು ಹೋಗುವಂತಿಲ್ಲ. ವಿಮಾನಗಳು ಟೇಕಾಫ್ ಆಗುವ ಕನಿಷ್ಠ 2 ಗಂಟೆಗಳ ಮುಂಚಿತವಾಗಿ ಚೆಕ್ ಇನ್ ಆಗಿರಲೇ ಬೇಕು.

ಟರ್ಮಿನಲ್​ಗಳಲ್ಲಿ ಹ್ಯಾಂಡ್​ವಾಶ್ ಮತ್ತು ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಇಡಬೇಕು. ಪ್ರಯಾಣದ ವೇಳೆ ಪ್ರಯಾಣಿಕರಲ್ಲಿ ಯಾರಿಗಾದರೂ ಆರೋಗ್ಯ ಸಮಸ್ಯೆಯಾದರೆ ಅವರ ಜಾಗವನ್ನು ಬದಲಿಸಬೇಕು. ಅನಾರೋಗ್ಯ ಪೀಡಿತ ಪ್ರಯಾಣಿಕರಿಗಾಗಿ ವಿಮಾನದಲ್ಲಿ 3 ಸಾಲುಗಳನ್ನು ಮೀಸಲಿಡಬೇಕು ಎಂಬ ನಿಯಮಗಳನ್ನು ಪ್ರಯಾಣಿಕರು ಹಾಗೂ ವಿಮಾನಗಳ ಕಂಪನಿಗಳು ಅನುಸರಿಸಬೇಕು.

ವಿಮಾನಯಾನ ಸಚಿವಾಲಯ ವಿಮಾನ ಸೇವೆ ನೀಡುವ ಕಂಪನಿಗಳು ಮತ್ತು ಕೊರೋನಾ ತಜ್ಞರ ಜೊತೆ ಚರ್ಚೆ ನಡೆಸಿ ಈ ನಿಯಮಗಳನ್ನು ರೂಪಿಸಿದೆ. ವಿಮಾನ ಪ್ರಯಾಣಕ್ಕೂ ಮುನ್ನ ಎಲ್ಲ ಪ್ರಯಾಣಿಕರಿಗೆ ಪ್ರಶ್ನಾವಳಿಯನ್ನು ನೀಡಲಾಗುತ್ತದೆ. ಈ ಪ್ರಶ್ನಾವಳಿಯಲ್ಲಿ ಕೊರೋನಾ ವೈರಸ್, ಕ್ವಾರಂಟೈನ್, ವೈದ್ಯಕೀಯ ತಪಾಸಣೆ ಮುಂತಾದ 1 ತಿಂಗಳ ಹಿಂದಿನ ಮಾಹಿತಿಯನ್ನು ನೀಡಬೇಕಾಗುತ್ತದೆ.

Leave A Reply

Your email address will not be published.