ಇಂದಿನಿಂದ ಮೂಟೆ ಸಿಮೆಂಟ್​ ದರವೂ ದುಬಾರಿ : ರಿಯಲ್​ ಎಸ್ಟೇಟ್​ ವಲಯಕ್ಕೆ ಭಾರೀ ಆಘಾತ..!

ದೇಶಾದ್ಯಂತ ಎಲ್ಲಾ ಪ್ರಮುಖ ಬ್ರ್ಯಾಂಡ್​ಗಳ ಸಿಮೆಂಟ್​ ದರದಲ್ಲಿ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

Cement Price Hike: 2026ರ ವರ್ಷ ಆರಂಭವಾದಾಗಿನಿಂದ ದೇಶದ ಜನತೆ ಬೆಲೆ ಏರಿಕೆ ಸುದ್ದಿಯನ್ನೇ ಕೇಳುತ್ತಾ ಬರುತ್ತಿದ್ದಾರೆ. ಈಗಾಗಲೇ ಗ್ಯಾಸ್​ ಸಿಲಿಂಡರ್​ ದರ ಹಾಗೂ ಟೋಲ್​ ಶುಲ್ಕ ಏರಿಕೆಯಿಂದ ಸುಸ್ತಾಗಿದ್ದ ಜನತೆಗೆ ಇದೀಗ ಮತ್ತೊಂದು ಶಾಕ್​ ಎದುರಾಗಿದೆ. ದೇಶಾದ್ಯಂತ ಎಲ್ಲಾ ಪ್ರಮುಖ ಬ್ರ್ಯಾಂಡ್​ಗಳ ಸಿಮೆಂಟ್​ ದರದಲ್ಲಿ ಏರಿಕೆ ಮಾಡಲಾಗಿದ್ದು, ಇಂದಿನಿಂದಲೇ ಪರಿಷ್ಕೃತ ದರ ಜಾರಿಗೆ ಬರಲಿದೆ.

ನಿನ್ನೆಯವರೆಗೆ ಬುಕ್ಕಿಂಗ್​ ಆಗಿರುವ ಸಿಮೆಂಟ್​ಗಳಿಗೆಯ ಹಳೆಯ ದರಗಳನ್ನೇ ಕಂಪನಿಗಳು ವಿಧಿಸಲಿವೆ. ಆದರೆ ಇಂದಿನಿಂದ ಬುಕ್ಕಿಂಗ್​ ಆಗುವ ಸಿಮೆಂಟ್​ ಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ. ಒಂದು ಮೂಟೆ ಸಿಮೆಂಟ್​ ದರದಲ್ಲಿ 30 ರಿಂದ 50 ರೂಪಾಯಿ ಏರಿಕೆ ಮಾಡಲಾಗಿದೆ. ಈ ಪರಿಷ್ಕೃತ ದರವು ರಿಯಲ್​ ಎಸ್ಟೇಟ್​ ಉದ್ಯಮದ ಮೇಲೆ ಭಾರೀ ಪರಿಣಾಮ ಬೀರಿದೆ. ಈಗಾಗಲೇ ನಿರ್ಮಾಣ ಹಂತದಲ್ಲಿರುವ ಮನೆಗಳ ನಿರ್ಮಾಣಕ್ಕೆ ಅಂದಾಜಿಗಿಂತ ಹೆಚ್ಚು ವೆಚ್ಚ ತಗುಲಲಿದೆ.

ಇನ್ನು ಸಿಮೆಂಟ್​ ದರ ಏರಿಕೆಗೆ ಪೆಟ್ರೋಲ್​ ಹಾಗೂ ಡೀಸೆಲ್​ ಕೊರತೆಯೇ ಪ್ರಮುಖ ಕಾರಣ ಎನ್ನಲಾಗಿದೆ. ಸಾಗಣೆ ವೆಚ್ಚ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಮೆಂಟ್​ ದರದಲ್ಲಿ ಏರಿಕೆ ಮಾಡಲಾಗಿದೆ. ಸಾಗಣೆ ವೆಚ್ಚವನ್ನು ಸಿಮೆಂಟ್​ ಕಂಪನಿಗಳು ಗ್ರಾಹಕರ ಮೇಲೆ ಹೇರಲು ನಿರ್ಧರಿಸಿದ್ದು ಇದರಿಂದ ಮನೆ ಕಟ್ಟಬೇಕು ಎಂದುಕೊಂಡವರಿಗೆಲ್ಲ ಭಾರೀ ಆಘಾತ ಎದುರಾಗಿದೆ. ಮೂಲಗಳ ಪ್ರಕಾರ ಪ್ರೀಮಿಯಂ ಬ್ರ್ಯಾಂಡ್​ ಸಿಮೆಂಟ್​ ದರವು ಮೂಟೆಗೆ 360 ರೂಪಾಯಿಯನ್ನೂ ಮೀರಿಸಲಿದೆ ಎನ್ನಲಾಗಿದೆ.

ಇದನ್ನೂ ಓದಿ: ಡಿಜಿಟಲ್​ ಜಗತ್ತಿಗೆ ಕಾದಿದೆ ಭಾರೀ ಗಂಡಾತರ..! ಇಂಟರ್ನೆಟ್​ ಸೇವೆಗೂ ತಟ್ಟಿದ ಯುದ್ಧದ ಭೀತಿ..!

ರಿಯಲ್​ ಎಸ್ಟೇಟ್​ ಉದ್ಯಮವು ಕಳೆದ ಕೆಲವು ದಿನಗಳಿಂದ ಸಾಲು ಸಾಲು ಬೆಲೆ ಏರಿಕೆಯ ಸುದ್ದಿಯನ್ನೇ ಕೇಳುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕಬ್ಬಿಣ, ಮರಳು ಹಾಗೂ ಜಲ್ಲಿ ಕಲ್ಲುಗಳ ದರದಲ್ಲಿ ಏರಿಕೆಯಾಗಿತ್ತು. ಇದೀಗ ಸಿಮೆಂಟ್​ ಕೂಡ ಈ ಬೆಲೆ ಏರಿಕೆಯ ಪಟ್ಟಿಗೆ ಸೇರಿಕೊಂಡಿದೆ. ಈ ರೀತಿ ಗೃಹ ನಿರ್ಮಾಣ ವಸ್ತುಗಳ ದರ ಏರಿಕೆಯಿಂದಾಗಿ ಭವಿಷ್ಯದಲ್ಲಿ ಅಪಾರ್ಟ್ಮೆಂಟ್​ಗಳ ಖರೀದಿ ದರವೂ ಹೆಚ್ಚಾಗಲಿದೆ ಎಂದು ಅಂದಾಜಿಸಬಹುದಾಗಿದೆ. ಇದು ಮಾತ್ರವಲ್ಲದೇ ಮನೆ ನಿರ್ಮಾಣದ ಅಂದಾಜು ಖರ್ಚಿನಲ್ಲಿಯೂ ಲಕ್ಷಾಂತರ ರೂಪಾಯಿಗಳ ಏರಿಕೆ ಕಂಡುಬರಲಿದೆ. ಇದು ಸಾಮಾನ್ಯ ವರ್ಗಗಳ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »

Related Stories