ಇಂಧನ ಕೊರತೆ ಭೀತಿ.. ಕೇಂದ್ರ ಅಲರ್ಟ್! ಜನರು ಪೆಟ್ರೋಲ್ ಬಂಕ್‌ಗಳತ್ತ ದೌಡು
ಪಶ್ಚಿಮ ಏಷ್ಯಾದ ಉದ್ವಿಗ್ನತೆ ಹಿನ್ನೆಲೆ ದೇಶದಲ್ಲಿ ಇಂಧನ ಕೊರತೆ ಭೀತಿ ಹೆಚ್ಚಾಗಿದ್ದು, ಕೆಲವು ರಾಜ್ಯಗಳಲ್ಲಿ ಜನರು ಪೆಟ್ರೋಲ್ ಬಂಕ್‌ಗಳತ್ತ ದೌಡಾಯಿಸಿದ್ದಾರೆ. ಆದರೆ ಸಾಕಷ್ಟು ಇಂಧನ ಸಂಗ್ರಹ ಇದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿರುವ ಹಿನ್ನೆಲೆ ಭಾರತದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಗುಜರಾತ್, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಇಂಧನ ಕೊರತೆ ಉಂಟಾಗಬಹುದು ಎಂಬ ಭೀತಿಯಿಂದ ಜನರು ಪೆಟ್ರೋಲ್ ಬಂಕ್‌ಗಳಿಗೆ ಮುಗಿಬಿದ್ದಿರುವ ವರದಿಗಳು ಹೊರಬಿದ್ದಿವೆ.
ಈ ಹಿನ್ನೆಲೆ ಕೇಂದ್ರ ಸರ್ಕಾರ ಮಹತ್ವದ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಪೆಟ್ರೋಲ್, ಡೀಸೆಲ್ ಹಾಗೂ LPG ಸಂಗ್ರಹ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಭರವಸೆ ನೀಡಿದೆ.
ಏಕೆ ಉಂಟಾಯಿತು ಆತಂಕ?
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಯಿಂದ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಭಾರತದ ಕಚ್ಚಾ ತೈಲ, LPG ಹಾಗೂ ನೈಸರ್ಗಿಕ ಅನಿಲ ಆಮದು ಮೇಲೂ ಇದರ ಪರಿಣಾಮ ಕಂಡುಬಂದಿದೆ.
ಆದರೆ ದೇಶೀಯ ಸರಬರಾಜಿಗೆ ಯಾವುದೇ ದೊಡ್ಡ ಸಮಸ್ಯೆ ಎದುರಾಗದಂತೆ ಪರ್ಯಾಯ ಮೂಲಗಳಿಂದ ತೈಲ ಖರೀದಿ ಮಾಡಲಾಗುತ್ತಿದೆ ಎಂದು ಕೇಂದ್ರ ತಿಳಿಸಿದೆ.
ಪೆಟ್ರೋಲ್ ಬಂಕ್‌ಗಳಲ್ಲಿ ಏಕೆ ಸ್ಟಾಕ್ ಖಾಲಿ?
ಕೆಲವು ಪೆಟ್ರೋಲ್ ಬಂಕ್‌ಗಳಲ್ಲಿ ತಾತ್ಕಾಲಿಕವಾಗಿ ಸ್ಟಾಕ್ ಕಡಿಮೆಯಾಗಲು ಹಲವು ಕಾರಣಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೃಷಿ ಚಟುವಟಿಕೆ ಹೆಚ್ಚಾಗಿರುವುದರಿಂದ ಇಂಧನ ಬಳಕೆ ಏರಿಕೆಯಾಗಿದೆ.
ಇದೇ ವೇಳೆ ಖಾಸಗಿ ಕಂಪನಿಗಳಿಗಿಂತ ಸರ್ಕಾರಿ ತೈಲ ಕಂಪನಿಗಳ ಬಂಕ್‌ಗಳಲ್ಲಿ ಕಡಿಮೆ ದರ ಇರುವ ಕಾರಣ ಹೆಚ್ಚಿನ ಜನರು ಅತ್ತ ಮುಖ ಮಾಡಿದ್ದಾರೆ. ಇದರ ಪರಿಣಾಮ ಕೆಲವು ಪ್ರದೇಶಗಳಲ್ಲಿ ಬೇಡಿಕೆ ಏಕಾಏಕಿ 20 ರಿಂದ 30 ಶೇಕಡಾವರೆಗೆ ಹೆಚ್ಚಾಗಿದೆ.
ಸಾರಿಗೆ ವಿಳಂಬವೂ ಕಾರಣ
ಸಾಮಾನ್ಯವಾಗಿ ಪೆಟ್ರೋಲ್ ಬಂಕ್‌ಗಳು 2-3 ದಿನಗಳಿಗೆ ಬೇಕಾದಷ್ಟು ಮಾತ್ರ ಸಂಗ್ರಹ ಇಟ್ಟುಕೊಳ್ಳುತ್ತವೆ. ಬೇಡಿಕೆ ಹಠಾತ್ ಹೆಚ್ಚಾದಾಗ ಡಿಪೋಗಳಿಂದ ಬಂಕ್‌ಗಳಿಗೆ ಇಂಧನ ಸಾಗಿಸಲು ಸಮಯ ಬೇಕಾಗುತ್ತದೆ.
ಡಿಪೋ ಮತ್ತು ಟರ್ಮಿನಲ್‌ಗಳಲ್ಲಿ ಯಾವುದೇ ಕೊರತೆ ಇಲ್ಲ, ಕೇವಲ ಸಾರಿಗೆ ವಿಳಂಬದಿಂದ ಕೆಲ ಬಂಕ್‌ಗಳಲ್ಲಿ ತಾತ್ಕಾಲಿಕ ಸಮಸ್ಯೆ ಉಂಟಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ರಾಜ್ಯಗಳಿಗೆ ಕೇಂದ್ರದ ಸೂಚನೆ
ಇಂಧನ ಕೊರತೆ ಭೀತಿಯಿಂದ ಕೆಲವರು ಅಕ್ರಮ ಸಂಗ್ರಹ ಅಥವಾ ಬ್ಲಾಕ್ ಮಾರ್ಕೆಟಿಂಗ್‌ಗೆ ಮುಂದಾಗುವ ಸಾಧ್ಯತೆ ಇರುವ ಕಾರಣ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಕೇಂದ್ರ, ಸ್ಥಳೀಯ ಮಟ್ಟದಲ್ಲಿ ಸರಬರಾಜು ಪರಿಸ್ಥಿತಿಯನ್ನು ನಿರಂತರವಾಗಿ ಪರಿಶೀಲಿಸುವಂತೆ ಸೂಚಿಸಿದೆ.
ಜನರಿಗೆ ಮನವಿ
ಕೇಂದ್ರ ಸರ್ಕಾರ ಜನರಲ್ಲಿ ಅನಗತ್ಯ ಆತಂಕ ಬೇಡ ಎಂದು ಮನವಿ ಮಾಡಿದೆ. ಅಗತ್ಯಕ್ಕಿಂತ ಹೆಚ್ಚು ಇಂಧನ ಖರೀದಿ ಮಾಡಬಾರದು ಹಾಗೂ ಇಂಧನವನ್ನು ಮಿತವಾಗಿ ಬಳಸಬೇಕು ಎಂದು ತಿಳಿಸಿದೆ.
ಸಾಧ್ಯವಾದಲ್ಲಿ ಇಂಡಕ್ಷನ್ ಕುಕ್ಕರ್, ಪೈಪ್ ನೈಸರ್ಗಿಕ ಅನಿಲದಂತಹ ಪರ್ಯಾಯ ವ್ಯವಸ್ಥೆಗಳನ್ನು ಬಳಸುವಂತೆ ಸಲಹೆ ನೀಡಲಾಗಿದೆ.



