Offline Digital Transactions: ಇಂಟರ್‌ನೆಟ್ ಇಲ್ಲದೆಯೂ ಗೂಗಲ್‌ ಪೇ, ಫೋನ್‌ಪೇ, ಪೇಟಿಎಮ್ ಬಳಸಬಹುದು! ಹೇಗೆಂಬ ವಿವರ ಇಲ್ಲಿದೆ

ನೋಟು ಅಮಾನ್ಯೀಕರಣದ ನಂತರ ನಗದು ವ್ಯವಹಾರಗಳು ಕಡಿಮೆಯಾಗಿದ್ದು ಆನ್‌ಲೈನ್‌ ಡಿಜಿಟಲ್ ಪಾವತಿ (Digital Payment)ವಿಧಾನಗಳು ಜನಪ್ರಿಯವಾಗಿವೆ ಹಾಗೂ ಹೆಚ್ಚಿನ ಜನ ಅದನ್ನೇ ಬಳಸುತ್ತಿದ್ದಾರೆ. ಪೇಟಿಎಮ್ (Paytm), ಫೋನ್‌ಪೇ (Phone Pay), ಗೂಗಲ್‌ ಪೇ (Google Pay) ಮುಂತಾದ ಡಿಜಿಟಲ್ ವ್ಯವಹಾರ ನಡೆಸುವ ವಿಧಾನ ನಮ್ಮಲ್ಲಿ ಬಹುತೇಕ ಜನರಿಗೆ ಈಗಾಗಲೇ ತಿಳಿದಿದ್ದು ಹೆಚ್ಚು ವಿದ್ಯಾವಂತರಲ್ಲದವರೂ ಸಹ ಇದನ್ನು ಸರಾಗವಾಗಿ ಬಳಸುವುದನ್ನು ಕಲಿತಿದ್ದಾರೆ. ಇಂತಹ ವ್ಯವಹಾರಗಳಿಗೆ ಸ್ಥಿರವಾದ ಉತ್ತಮ ವೇಗ ಹಾಗೂ ಗುಣಮಟ್ಟದ ಅಂತರ್ಜಾಲ (internet) ವ್ಯವಸ್ಥೆಯ ಅವಶ್ಯಕತೆಯಿರುತ್ತದೆ. ಇಲ್ಲವಾದರೆ ವ್ಯವಹಾರಗಳನ್ನು ನಿರ್ವಹಿಸುವಲ್ಲಿ ವಿಳಂಬ-ವಿಫಲತೆ ಉಂಟಾಗುತ್ತದೆ. ಆದರೆ, ಇನ್ನು ಮುಂದೆ ಅಂತರ್ಜಾಲದ (internet) ಅವಶ್ಯಕತೆಯೇ ಇಲ್ಲದೇ ಡಿಜಿಟಲ್‌ ವ್ಯವಹಾರಗಳನ್ನು ನಡೆಸಬಹುದಾದ ವಿಧಾನವೊಂದನ್ನು ರೂಪಿಸಲಾಗಿದೆ. ಅಷ್ಟು ಮಾತ್ರವಲ್ಲ, ಇನ್ನು ಮುಂದೆ ಇಂತಹ ವ್ಯವಹಾರಗಳಿಗೆ ಸ್ಮಾರ್ಟ್‌ಫೋನ್‌ಗಳ (smart phone) ಅವ‍‍ಶ್ಯಕತೆಯೂ ಇರದು.

ಹಾಗಾದರೆ, ಅಂತರ್ಜಾಲ ಮತ್ತು ಸ್ಮಾರ್ಟ್‌ಫೋನ್ ಬಳಸದೇ ಗೂಗಲ್‌ ಪೇ, ಫೋನ್‌ಪೇ, ಪೇಟಿಎಮ್‌, ಏರ್‌ಟೆಲ್‌ ಪೇಮೆಂಟ್ಸ್‌ ಬ್ಯಾಂಕ್‌, ಹಾಗೂ ಅಮೆಜಾನ್‌ ಮುಂತಾದ ಪ್ಲಾಟ್‌ಫಾರ್ಮ್‌ಗಳ ಮುಖಾಂತರ ಡಿಜಿಟಲ್ ವ್ಯವಹಾರಗಳನ್ನು ಮಾಡುವುದು ಹೇಗೆ? ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. 

ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಫೋನ್‌ನಿಂದ *99# ಸಂಖ್ಯೆಗೆ ಡಯಲ್‌ ಮಾಡಿ ಇಂತಹ ವ್ಯವಹಾರಗಳನ್ನು ಮಾಡಬೇಕಾಗುತ್ತದೆ. ಇದಕ್ಕೆ ವಿನ್ಯಾಸರಹಿತ ಪೂರಕ ಸೇವಾ ಮಾಹಿತಿ (USSD-unstructured supplementary service data) ಎಂದು ಕರೆಯಲಾಗುತ್ತದೆ. ಭಾರತದ ರಾಷ್ಟ್ರೀಯ ಪಾವತಿಗಳ ನಿಗಮವು (National Payments Corporation of India-NPCI) ನವೆಂಬರ್‌ 2012ರಿಂದಲೇ. ಅಂದರೆ, ಯುಪಿಐ (UPI) ಜಾಲವನ್ನು ಪ್ರಾರಂಭಿಸುವ ಸುಮಾರು 4 ವರ್ಷಗಳಿಗೂ ಮೊದಲೇ, ಯುಎಸ್‌ಎಸ್‌ಡಿ ಸೇವಾಸೌಲಭ್ಯವನ್ನು ಪ್ರಾರಂಭಿಸಿತು. ಈ ಎರಡೂ ಡಿಜಿಟಲ್‌ ಪಾವತಿ ವಿಧಾನಗಳನ್ನು ಈಗ ಏಕೀಕೃತಗೊಳಿಸಲಾಗಿದ್ದು ಅಂತರ್ಜಾಲದ ಅಥವಾ ಸ್ಮಾರ್ಟ್‌ಫೋನ್‌ಗಳ ಅವಶ್ಯಕತೆಯಿಲ್ಲದೇ ಇಂತಹ ವ್ಯವಹಾರಗಳನ್ನು ಮಾಡಬಹುದಾಗಿದೆ.

ಬಳಕೆದಾರರ ಉಪಯೋಗಕ್ಕಾಗಿ ಈ ಪ್ರಕ್ರಿಯೆಯನ್ನು ವಿವಿಧ ಹಂತಗಳಲ್ಲಿ ವಿಂಗಡಿಸಿ ನೀಡಲಾಗಿದೆ.

ಹಂತ 1: ಬಳಕೆದಾರರು ಮೊದಲಿಗೆ ಭೀಮ್‌ ಆಪ್‌ನಲ್ಲಿ ನೋಂದಾಯಿಸಿಕೊಂಡು ಒಂದು ಯುಪಿಐ (UPI) ಖಾತೆಯನ್ನು ತೆರೆಯಬೇಕಾಗುತ್ತದೆ. ಇದಕ್ಕಾಗಿ ಬಳಕೆದಾರರು ಬಹಳ ಎಚ್ಚರಿಕೆಯಿಂದ ನಿಮ್ಮ ಬ್ಯಾಂಕ್‌ ಖಾತೆಗೆ ನೀಡಲಾಗಿರುವ ದೂರವಾಣಿ ಸಂಖ್ಯೆಯನ್ನು ಸರಿಯಾಗಿ ನಮೂದಿಸಬೇಕಾಗುತ್ತದೆ.

ಹಂತ 2: ನಂತರ *99# ಸಂಖ್ಯೆಗೆ ಡಯಲ್‌ ಮಾಡಿದಾಗ ನಿಮ್ಮ ಕರೆಯು ಸೆಂಡ್‌ ಮನಿ (Send Money), ರಿಸೀವ್‌ ಮನಿ (Receive Money), ಚೆಕ್‌ ಬ್ಯಾಲೆನ್ಸ್‌ (Check Balance), ಮೈ ಪ್ರೊಫೈಲ್‌ (My Profile), ಪೆಂಡಿಂಗ್‌ ರಿಕ್ವೆಸ್ಟ್ಸ್‌ (Pending Requests), ಟ್ರ್ಯಾನ್ಸ್ಯಾಕ್ಷನ್ಸ್‌ (Transactions) ಮತ್ತು ಯುಪಿಐ ಪಿನ್‌ (UPI PIN) ಸೇರಿದಂತೆ 7 ಆಯ್ಕೆಗಳಿರುವ ಸೇವಾ ಪಟ್ಟಿಗೆ ಪುನರ್‌ನಿರ್ದೇಶಿತವಾಗುತ್ತದೆ (Redirected).

ಹಂತ 3: ಹಣವನ್ನು ಬೇರೊಬ್ಬರಿಗೆ ಕಳುಹಿಸಲು ಸಂದೇಶ ಕಳುಹಿಸುವ ಸ್ಥಳದಲ್ಲಿ 1 ಎಂದು ಟೈಪ್‌ ಮಾಡಿ. ಇದು ನಿಮಗೆ ನಿಮ್ಮ ಯುಪಿಐ ಗುರುತಿನ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ, ಮತ್ತು ಐಎಫ್‌ಎಸ್‌ಸಿ ಕೋಡ್‌ಗಳನ್ನು ಉಪಯೋಗಿಸಿ ಅಥವಾ ನಿಮ್ಮ ದೂರವಾಣಿ ಸಂಖ್ಯೆಯನ್ನು ಉಪಯೋಗಿಸುವ ವಿಧಾನಗಳಲ್ಲಿ ನಿಮಗೆ ಯಾವುದುಇಷ್ಟವೋ ಆ ವಿಧಾನವನ್ನು ಬಳಸಿ ವ್ಯವಹರಿಸಲು ಅವಕಾಶ ಮಾಡಿಕೊಡುತ್ತದೆ.

ಹಂತ 4: ನೀವು ಯುಪಿಐ ವಿಧಾನವನ್ನು ಬಳಸಲು ಬಯಸಿದರೆ, ನೀವು ಯಾರಿಗೆ ಹಣವನ್ನು ಕಳುಹಿಸಲು ಬಯಸುತ್ತೀರೋ ಅವರ ಯುಪಿಐ ಕೋಡ್‌ ಅನ್ನು ದಾಖಲಿಸಬೇಕು. ಒಂದು ವೇಳೆ, ನೀವು ಬ್ಯಾಂಕ್‌ ಖಾತೆ ಸಂಖ್ಯೆಯನ್ನು ಬಳಸಲು ಬಯಸಿದರೆ ಹಣ ಪಡೆಯುವವರ ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಅವರ ಬ್ಯಾಂಕಿನ ಐಎಫ್‌ಎಸ್‌ಸಿ ಕೋಡ್‌ ಅನ್ನು ಹಾಕಬೇಕಾಗುತ್ತದೆ. ಆದರೆ, ನೀವು ದೂರವಾಣಿ ಸಂಖ್ಯೆಯನ್ನು ಬಳಸುವ ವಿಧಾನವನ್ನು ಆರಿಸಿಕೊಂಡರೆ, ನೀವು ಕೇವಲ ಹಣಪಡೆಯುವವರ ದೂರವಾಣಿ ಸಂಖ್ಯೆಯನ್ನು ನಮೂದಿಸಿದರೆ ಸಾಕಾಗುತ್ತದೆ.

ಹಂತ 5: ಈಗ ನೀವು ವರ್ಗಾಯಿಸಲು ಬಯಸುವ ಹಣದ ಮೊತ್ತವನ್ನು ದಾಖಲಿಸಬೇಕು.

ಹಂತ 6: ಈಗ ನೀವು ಕಡೆಯ ಹಂತದಲ್ಲಿ ನಿಮ್ಮ ಯುಪಿಐ ಪಿನ್‌ ಸಂಖ್ಯೆಯನ್ನು ದಾಖಲಿಸಬೇಕು ಹಾಗೂ ಹಣವನ್ನು ಕಳುಹಿಸಲು ಸೆಂಡ್‌ (Send) ಬಟನ್‌ ಅನ್ನು ಒತ್ತಬೇಕು. ವ್ಯವಹಾರವು ಪೂರ್ಣಗೊಂಡ ನಂತರ ನಿಮಗೆ ಒಂದು ದೃಢೀಕರಣ ಸಂದೇಶವು ಬರುವುದು. ನಂತರ, ಹಣ ಪಡೆದ ವ್ಯಕ್ತಿಯೊಂದಿಗೆ ನೀವು ಮುಂದಯೂ ಅನೇಕ ವ್ಯವಹಾರಗಳನ್ನು ನಡೆಸುವ ಸಾಧ್ಯತೆಯಿದ್ದರೆ ಅವರ ವಿವರಗಳನ್ನು ಉಳಿಸಿಕೊಳ್ಳಲು ನಿಮಗೆ ಅವಕಾಶವಿದೆ. ಆದರೆ, ಇದರಲ್ಲಿ ನಿಮಗೆ ತಿಳಿದಿರಬೇಕಾದ ವಿಷಯವೆಂದರೆ ಈ ಸೇವೆಗೆ ನೀವು 50 ಪೈಸೆಗಳ ಅತ್ಯಲ್ಪ ಶುಲ್ಕವನ್ನು ನೀಡಬೇಕಾಗುತ್ತದೆ.

ಇದು ಹಣ ಪಡೆಯಲು ಹಾಗೂ ಕಳುಹಿಸಲು ನಿಜಕ್ಕೂ ಒಂದು ಅತ್ಯುಪಯುಕ್ತ ವಿಧಾನವಾಗಿದೆ.

ಇದನ್ನೂ ಓದಿ: cVigil App : ಕಣ್ಣೆದುರೇ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತಿದೆಯೇ? ಮೊಬೈಲಲ್ಲೇ ಆಯೋಗಕ್ಕೆ ದೂರು ದಾಖಲಿಸಲು ಈ ಆ್ಯಪ್‌ ಬಳಸಿ

ಇದನ್ನೂ ಓದಿ: 2022 Vastu Tips : ಹೊಸ ವರ್ಷಕ್ಕೆ ಕಾಲಿಡುವ ಮುನ್ನ ಮನೆಯಿಂದ ಈ ವಸ್ತುಗಳನ್ನು ಹೊರಹಾಕಿ

(Digital transactions now possible offline without smartphones)

Comments are closed.