ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿದ್ದರೆ 10,000 ದಂಡ! ಆರ್‌ಬಿಐ ಸ್ಪಷ್ಟನೆ

ಒಬ್ಬರ ಬಳಿ ಹಲವು ಬ್ಯಾಂಕ್ ಖಾತೆಗಳಿದ್ದರೆ ₹10 ಸಾವಿರ ದಂಡ ವಿಧಿಸಲಾಗುತ್ತದೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಗೆ ಆರ್‌ಬಿಐ ಸ್ಪಷ್ಟನೆ ನೀಡಿದ್ದು, ಜನರು ಸುಳ್ಳು ಮಾಹಿತಿಗೆ ನಂಬಿಕೆ ಇಡಬಾರದು ಎಂದು ತಿಳಿಸಿದೆ.

ಡಿಜಿಟಲ್ ಬ್ಯಾಂಕಿಂಗ್ ಹೆಚ್ಚಾದಂತೆ ಬ್ಯಾಂಕ್ ಖಾತೆಗಳ ಬಳಕೆ ಕೂಡ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉದ್ಯೋಗ, ಉಳಿತಾಯ, ಹೂಡಿಕೆ, ದಿನನಿತ್ಯದ ಖರ್ಚು ಸೇರಿದಂತೆ ಬೇರೆ ಬೇರೆ ಅಗತ್ಯಗಳಿಗೆ ಹಲವರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಬಳಸುತ್ತಾರೆ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ “ಹೆಚ್ಚು ಬ್ಯಾಂಕ್ ಖಾತೆ ಇದ್ದರೆ ಆರ್‌ಬಿಐ ₹10 ಸಾವಿರ ದಂಡ ವಿಧಿಸುತ್ತದೆ” ಎಂಬ ಸುದ್ದಿ ವೈರಲ್ ಆಗಿತ್ತು. ಇದರಿಂದ ಸಾಕಷ್ಟು ಜನರಲ್ಲಿ ಆತಂಕವೂ ಮೂಡಿತ್ತು.

ಈ ಬಗ್ಗೆ ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆ ನೀಡಿದೆ. ಒಬ್ಬ ವ್ಯಕ್ತಿ ಎಷ್ಟು ಬ್ಯಾಂಕ್ ಖಾತೆ ಬೇಕಾದರೂ ಹೊಂದಬಹುದು, ಅದಕ್ಕೆ ಯಾವುದೇ ದಂಡ ಇಲ್ಲ ಎಂದು ಆರ್‌ಬಿಐ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಸಂಪೂರ್ಣ ಸುಳ್ಳು ಎಂದು ಹೇಳಿದೆ.

ಇಂದಿನ ಕಾಲದಲ್ಲಿ ಉದ್ಯೋಗಿಗಳಿಗೆ ಸೇವಿಂಗ್ಸ್ ಖಾತೆಯ ಜೊತೆಗೆ ವೇತನ ಖಾತೆಯೂ ಇರುತ್ತದೆ. ಕೆಲವರು ಕುಟುಂಬ ಖರ್ಚಿಗೆ ಒಂದು ಖಾತೆ, ಉಳಿತಾಯಕ್ಕೆ ಮತ್ತೊಂದು ಖಾತೆ, ಆನ್‌ಲೈನ್ ವ್ಯವಹಾರಗಳಿಗೆ ಬೇರೆ ಖಾತೆ ಬಳಸುತ್ತಾರೆ. ಹೀಗಾಗಿ ಹಲವಾರು ಬ್ಯಾಂಕ್ ಖಾತೆ ಇರುವುದು ಸಾಮಾನ್ಯ ಸಂಗತಿಯಾಗಿದೆ.

ಆದರೆ ಸೈಬರ್ ಮೋಸ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಆರ್‌ಬಿಐ ಕೆಲವು ಹೊಸ ಸುರಕ್ಷತಾ ಕ್ರಮಗಳನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ. ಹೊಸ ಖಾತೆಗೆ ₹10 ಸಾವಿರಕ್ಕಿಂತ ಹೆಚ್ಚು ಹಣ ವರ್ಗಾವಣೆ ಮಾಡಿದರೆ, ಆ ಹಣವನ್ನು ಕೆಲಕಾಲ ‘ಹೋಲ್ಡ್’ ನಲ್ಲಿ ಇಡುವ ವ್ಯವಸ್ಥೆ ತರಲು ಯೋಜನೆ ಇದೆ ಎನ್ನಲಾಗಿದೆ. ಇದರಿಂದ ತಪ್ಪಾಗಿ ಅಥವಾ ಮೋಸದ ಮೂಲಕ ಹಣ ಕಳುಹಿಸಿದರೆ, ಕಳುಹಿಸಿದ ವ್ಯಕ್ತಿಗೆ ವ್ಯವಹಾರ ರದ್ದುಪಡಿಸಲು ಅವಕಾಶ ಸಿಗುತ್ತದೆ.

ಈ ಹೊಸ ಸುರಕ್ಷತಾ ಕ್ರಮದ ವಿಚಾರವನ್ನು ಕೆಲವರು ತಪ್ಪಾಗಿ ಅರ್ಥಮಾಡಿಕೊಂಡು “ಹೆಚ್ಚು ಬ್ಯಾಂಕ್ ಖಾತೆ ಇದ್ದರೆ ದಂಡ” ಎಂಬ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆದರೆ ಆರ್‌ಬಿಐ ಬಳಿ ಅಂತಹ ಯಾವುದೇ ನಿರ್ಧಾರ ಇಲ್ಲ ಎಂಬುದು ಸ್ಪಷ್ಟವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಪ್ರತಿಯೊಂದು ಮಾಹಿತಿಯನ್ನೂ ನಂಬುವುದಕ್ಕಿಂತ, ಅಧಿಕೃತ ಮೂಲಗಳಿಂದ ಮಾಹಿತಿ ಪರಿಶೀಲಿಸಿಕೊಳ್ಳುವುದು ಉತ್ತಮ ಎಂದು ಬ್ಯಾಂಕಿಂಗ್ ತಜ್ಞರು ಸಲಹೆ ನೀಡಿದ್ದಾರೆ. ಜನರು ಗಾಬರಿಯಾಗುವ ಅಗತ್ಯವಿಲ್ಲ ಎಂದು ಕೂಡ ತಿಳಿಸಿದ್ದಾರೆ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories