ದೇಶಕ್ಕೆ ಬರಲಿವೆಯೇ ಪ್ಲಾಸ್ಟಿಕ್ ನೋಟುಗಳು? ಆರ್‌ಬಿಐ ಮಹತ್ವದ ಹೆಜ್ಜೆ

ಕರೆನ್ಸಿ ಮುದ್ರಣ ವೆಚ್ಚ ಕಡಿಮೆ ಮಾಡುವುದು ಹಾಗೂ ನೋಟುಗಳ ಬಾಳಿಕೆ ಹೆಚ್ಚಿಸುವ ಉದ್ದೇಶದಿಂದ ಪ್ಲಾಸ್ಟಿಕ್ ನೋಟುಗಳ ಪರಿಚಯಕ್ಕೆ ಆರ್‌ಬಿಐ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಪ್ರಾಯೋಗಿಕ ಯೋಜನೆ ಆರಂಭವಾಗುವ ಸಾಧ್ಯತೆ ಇದೆ.

ದೇಶದಲ್ಲಿ ಡಿಜಿಟಲ್ ಪಾವತಿಗಳು ಹೆಚ್ಚಾಗುತ್ತಿದ್ದರೂ, ನಗದು ಬಳಕೆ ಮಾತ್ರ ಕಡಿಮೆಯಾಗಿಲ್ಲ. ಮಾರುಕಟ್ಟೆಯಲ್ಲಿ ಕರೆನ್ಸಿ ಚಲಾವಣೆ ನಿರಂತರವಾಗಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಹೊಸ ಮಾದರಿಯ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸುವ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗಂಭೀರವಾಗಿ ಚಿಂತನೆ ನಡೆಸುತ್ತಿದೆ.

ಮಾಹಿತಿಯ ಪ್ರಕಾರ, ಇತ್ತೀಚಿನ ಆರ್‌ಬಿಐ ಮಂಡಳಿ ಸಭೆಗಳಲ್ಲಿ ಪ್ಲಾಸ್ಟಿಕ್ ಕರೆನ್ಸಿ ನೋಟುಗಳ ಜಾರಿಗೆ ಸಂಬಂಧಿಸಿದಂತೆ ಚರ್ಚೆಗಳು ನಡೆದಿವೆ. ಕಾಗದದ ನೋಟುಗಳ ಮುದ್ರಣ ಮತ್ತು ನಿರ್ವಹಣೆಗೆ ಹೆಚ್ಚಿನ ವೆಚ್ಚವಾಗುತ್ತಿರುವ ಕಾರಣ, ದೀರ್ಘಾವಧಿಯ ಪರ್ಯಾಯವಾಗಿ ಪ್ಲಾಸ್ಟಿಕ್ ನೋಟುಗಳತ್ತ ಗಮನ ಹರಿಸಲಾಗಿದೆ.

ಕಳೆದ ಹಣಕಾಸು ವರ್ಷದಲ್ಲಿ ಕರೆನ್ಸಿ ಮುದ್ರಣಕ್ಕೆ ಸಾವಿರಾರು ಕೋಟಿ ರೂಪಾಯಿ ವೆಚ್ಚವಾಗಿದ್ದು, ಹಾಳಾದ ಮತ್ತು ಹರಿದ ನೋಟುಗಳನ್ನು ಮರುಸಂಗ್ರಹಿಸಿ ವಿಲೇವಾರಿ ಮಾಡುವ ಕೆಲಸವೂ ದೊಡ್ಡ ಸವಾಲಾಗಿದೆ. ಕಳೆದ ವರ್ಷವೇ ಕೋಟ್ಯಂತರ ಹಳೆಯ ನೋಟುಗಳನ್ನು ಆರ್‌ಬಿಐ ವಾಪಸ್ ಪಡೆದುಕೊಂಡಿತ್ತು.

ಪ್ಲಾಸ್ಟಿಕ್ ನೋಟುಗಳ ಪ್ರಮುಖ ವಿಶೇಷತೆ ಎಂದರೆ ಅವು ಹೆಚ್ಚು ಬಾಳಿಕೆ ಬರುತ್ತವೆ. ನೀರು ತಗುಲಿದರೂ ಸುಲಭವಾಗಿ ಹಾಳಾಗುವುದಿಲ್ಲ. ಕಾಗದದ ನೋಟುಗಳಿಗೆ ಹೋಲಿಸಿದರೆ ದೀರ್ಘಕಾಲ ಬಳಕೆಗೆ ಅನುಕೂಲಕರವಾಗಿದ್ದು, ನಿರ್ವಹಣಾ ವೆಚ್ಚವನ್ನೂ ಕಡಿಮೆ ಮಾಡಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಇದು ಮೊದಲ ಪ್ರಯತ್ನವಲ್ಲ. 2012ರಲ್ಲಿಯೇ ಕೆಲವು ನಗರಗಳಲ್ಲಿ ₹10 ಮುಖಬೆಲೆಯ ಪ್ಲಾಸ್ಟಿಕ್ ನೋಟುಗಳನ್ನು ಪ್ರಾಯೋಗಿಕವಾಗಿ ಪರಿಚಯಿಸುವ ಯೋಜನೆ ರೂಪಿಸಲಾಗಿತ್ತು. ಆದರೆ ತಾಂತ್ರಿಕ ಅಡಚಣೆಗಳಿಂದ ಅದು ಮುಂದುವರಿಯಲಿಲ್ಲ.

ಈಗ ತಂತ್ರಜ್ಞಾನದಲ್ಲಿ ಸುಧಾರಣೆ ಕಂಡುಬಂದಿರುವ ಹಿನ್ನೆಲೆಯಲ್ಲಿ, ಎಟಿಎಂ ಯಂತ್ರಗಳು ಸೇರಿದಂತೆ ಅಗತ್ಯ ಮೂಲಸೌಕರ್ಯಗಳಲ್ಲಿ ಬದಲಾವಣೆ ಮಾಡಿ ಕೆಲವು ಪ್ರದೇಶಗಳಲ್ಲಿ ಪೈಲಟ್ ಯೋಜನೆಯಡಿ ಪ್ಲಾಸ್ಟಿಕ್ ನೋಟುಗಳನ್ನು ಬಿಡುಗಡೆ ಮಾಡುವ ಬಗ್ಗೆ ಆರ್‌ಬಿಐ ಯೋಜನೆ ರೂಪಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಯೋಜನೆ ಯಶಸ್ವಿಯಾದರೆ ಭವಿಷ್ಯದಲ್ಲಿ ದೇಶಾದ್ಯಂತ ಪ್ಲಾಸ್ಟಿಕ್ ಕರೆನ್ಸಿ ನೋಟುಗಳು ಚಲಾವಣೆಗೆ ಬರುವ ಸಾಧ್ಯತೆ ಇದೆ. ಆದರೆ ಈ ಕುರಿತು ಆರ್‌ಬಿಐಯಿಂದ ಇನ್ನೂ ಅಧಿಕೃತ ಘೋಷಣೆ ಹೊರಬಂದಿಲ್ಲ.

Arun Gundmi | ಅರುಣ್ ಗುಂಡ್ಮಿ

Arun Gundmi Editor In Chief News Next Kannada. Working in more than 20 Years in Kannada News Media (Print, Digital and News Channels) Kannada News Next Live brings latest news from Karnataka, India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021 More »

Related Stories