SBI Hikes IMPS Limit: ಐಎಮ್‌ಪಿಎಸ್‌ ವ್ಯವಹಾರದ ಗರಿಷ್ಠಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಸಿದ ಭಾರತೀಯ ಸ್ಟೇಟ್‌ ಬ್ಯಾಂಕ್‌

ಬೆಂಗಳೂರು: ಭಾರತೀಯ ಸ್ಟೇಟ್‌ ಬ್ಯಾಂಕ್ (SBI) ತನ್ನ ಗ್ರಾಹಕರಿಗೆ ನೀಡುವ ಶೀಘ್ರ ಪಾವತಿ ಸೇವೆಯ (ಐಎಮ್‌ಪಿಎಸ್‌-IMPS) ಗರಿಷ್ಠ ವ್ಯವಹಾರದ ಮಿತಿಯನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿದೆ, ಹಾಗೂ ಡಿಜಿಟಲ್‌ ಚಾನಲ್‌ಗಳ (Digital Channels) ಮೂಲಕ ನಡೆಸಲಾಗುವ ವ್ಯವಹಾರಗಳಿಗೆ ಯಾವ ಶುಲ್ಕವೂ ಇರುವುದಿಲ್ಲ ಎಂದು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟರ್‌ ಖಾತೆಯ ಹ್ಯಾಂಡಲ್‌ ಮೂಲಕ ಭಾರತೀಯ ಸ್ಟೇಟ್‌ ಬ್ಯಾಂಕ್ ಹಂಚಿಕೊಂಡಿದೆ State Bank of India). ಇದುವರೆಗೂ ಈ ಸೇವೆಯ ಗರಿಷ್ಠ ಮಿತಿಯು 2 ಲಕ್ಷ ರೂಪಾಯಿಗಳಾಗಿದ್ದು ಇದನ್ನು ಬ್ಯಾಂಕ್‌ ಈಗ 5 ಲಕ್ಷ ರೂಪಾಯಿಗಳಿಗೆ ಏರಿಸಿರುವುದಲ್ಲದೇ ಇಂಟರ್‌ನೆಟ್‌ ಬ್ಯಾಂಕಿಂಗ್‌ ಹಾಗೂ ಯೋನೋ ಎಸ್‌ಬಿಐ ವಿಧಾನ ಸೇರಿದಂತೆ ಮೊಬೈಲ್‌ ಬ್ಯಾಂಕಿಂಗ್‌ ಮೂಲಕ ನಡೆಸಲಾಗುವ ವ್ಯವಹಾರಗಳಿಗೆ ಯಾವುದೇ ಶುಲ್ಕವಿರುವುದಿಲ್ಲ ಎಂದೂ ಎಸ್‌ಬಿಐ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ.

ಬ್ಯಾಂಕ್‌ನ ಶಾಖೆಯಲ್ಲಿ ನಡೆಸಲಾಗುವ ಐಎಮ್‌ಪಿಎಸ್‌ ವ್ಯವಹಾರಕ್ಕೆ ಎನ್‌ಇಎಫ್‌ಟಿ ಮತ್ತು ಆರ್‌ಟಿಜಿಎಸ್‌ ವಿಧಾನಗಳಿಗೆ ಇರುವಂತೆಯೇ ಶುಲ್ಕ ಇರಲಿದೆ ಎಂದೂ ಬ್ಯಾಂಕ್‌ನ ಪ್ರಕಟಣೆ ತಿಳಿಸಿದೆ. ಭಾರತೀಯ ರಿಸರ್ವ್‌ ಬ್ಯಾಂಕ್‌ ತನ್ನ ಅಕ್ಟೋಬರ್‌ 2021ರ ಪ್ರಕಟಣೆಯಲ್ಲಿ ಐಎಮ್‌ಪಿಎಸ್‌ (IMPS) ವ್ಯವಹಾರದ ಮಿತಿಯನ್ನು 2 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿಗಳಿಗೆ ಏರಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಬ್ಯಾಂಕ್‌ನ ಪ್ರಕಟಣೆ ತಿಳಿಸಿರುವಂತೆ 2 ಲಕ್ಷ ರೂಪಾಯಿಗಳವರೆಗಿನ ವ್ಯವಹಾರದವರೆಗೆ ಮೊದಲಿನಂತೆಯೇ ಯಾವುದೇ ಶುಲ್ಕವಿಲ್ಲದಿದ್ದರೂ ಬ್ಯಾಂಕ್‌ನ ಶಾಖೆಗಳ ಮೂಲಕ ನಡೆಸುವ 2 ಲಕ್ಷ ರೂಪಾಯಿಗೆ ಮೇಲ್ಪಟ್ಟು 5 ಲಕ್ಷ ರೂಪಾಯಿಗಳವರೆಗೆ ನಡೆಸಲಾಗುವ ವ್ಯವಹಾರಗಳಿಗೆ ಶುಲ್ಕ 20 ರೂಪಾಯಿಗಳು ಮತ್ತು ಜಿಎಸ್‌ಟಿ ಅನ್ವಯವಾಗಲಿವೆ.

ಐಎಮ್‌ಪಿಎಸ್‌ ಎಂದರೇನು?
ಭಾರತ ರಾಷ್ಟ್ರೀಯ ಪಾವತಿ ನಿಗಮವು (NPCI) ನೀಡಿರುವ ಮಾಹಿತಿಯಂತೆ ಐಎಮ್‌ಪಿಎಸ್‌ ಎನ್ನುವುದು ದಿನದ 24 ಗಂಟೆಯೂ ಲಭ್ಯವಿರುವ ಪಾವತಿ ಸೇವೆಯಾಗಿದ್ದು ಗ್ರಾಹಕರು ದಿನದ ಯಾವ ಸಮಯದಲ್ಲಾದರೂ ತಕ್ಷಣ ಹಣ ವರ್ಗಾಯಿಸಲು ಅನುವು ಮಾಡಿಕೊಡುತ್ತದೆ. ಈ ಸೇವೆಯ ಮೂಲಕ ಹಣವನ್ನು ಬೇರೊಬ್ಬರಿಗೆ ಕಳುಹಿಸಬಹುದು ಹಾಗೂ ಬೇರೊಬ್ಬರಿಂದ ಪಡೆಯಬಹುದು, ಖಾತೆಯನ್ನು ಪರಿಶೀಲಿಸಬಹುದು, ವ್ಯವಹಾರದ ಸ್ಥಿತಿಗತಿಗಳನ್ನು ತಿಳಿಯಬಹುದು, ಹಾಗೂ ವಿದೇಶದಿಂದಲೂ ಹಣವನ್ನು ಪಡೆಯಬಹುದು.

ಐಎಮ್‌ಪಿಎಸ್‌ನ ಪ್ರಯೋಜನಗಳೇನು?
ಇದು ತಕ್ಷಣದಲ್ಲಿ ಪೂರ್ಣಗೊಳಿಸಬಲ್ಲ ಸೇವೆ, ದಿನದ 24 ಗಂಟೆಗಳೂ ಲಭ್ಯವಿರುವ ಸುರಕ್ಷಿತವಾದ ಮತ್ತು ಸುಭದ್ರವಾದ ಸೇವೆಯಾಗಿದೆ. ಈ ಸೇವೆಯನ್ನು ಮೈಬೈಲ್‌, ಇಂಟರ್‌ನೆಟ್‌, ಎಟಿಎಮ್‌, ಹಾಗೂ ಬ್ಯಾಂಕ್‌ ಶಾಖೆಗಳ ಮೂಲಕವೂ ಪಡೆಯಬಹುದಾಗಿದ್ದು ಗ್ರಾಹಕರು ಎಸ್‌ಎಮ್‌ಎಸ್‌ ಮೂಲಕ ವ್ಯವಹಾರದ ದೃಢೀಕರಣದ ಸಂದೇಶ ಪಡೆಯುತ್ತಾರೆ.

ಐಎಮ್‌ಪಿಎಸ್‌ ಸೌಲಭ್ಯವನ್ನು ಚಾಲನೆಗೊಳಿಸಿಕೊಳ್ಳುವುದು ಹೇಗೆ?
ಹಣ ಕಳುಹಿಸುವವರು: ಮೊಬೈಲ್‌ ಮೂಲಕ ವ್ಯವಹಾರ ನಡೆಸಬಯಸುವವರು ಮೊದಲು ತಮ್ಮ ಬ್ಯಾಂಕ್‌ನ ಶಾಖೆಯಲ್ಲಿ ಮೊಬೈಲ್‌ ಬ್ಯಾಂಕಿಂಗ್‌ ಸೌಲಭ್ಯಕ್ಕಾಗಿ ನೋಂದಾಯಿಸಿಕೊಳ್ಳಬೇಕು. ಇಂಟರ್‌ನೆಟ್‌, ಎಟಿಎಮ್‌, ಹಾಗೂ ಬ್ಯಾಂಕ್‌ನ ಶಾಖೆಯ ಮೂಲಕ ಸೌಲಭ್ಯ ಪಡೆಯಲು ಮೊಬೈಲ್‌ ನೋಂದಣೆಯ ಅವಶ್ಯಕತೆ ಇರುವುದಿಲ್ಲ.

ಹಣ ಪಡೆಯುವವರು: ತಮ್ಮ ಬ್ಯಾಂಕ್‌ನ ಶಾಖೆಯಿಂದ ಅವರ ಎಮ್‌ಎಮ್‌ಐಡಿ (MMID) ಸಂಖ್ಯೆಯನ್ನು ಪಡೆದುಕೊಂಡು ಅದನ್ನು ತಮಗೆ ಹಣ ಕಳುಹಿಸುವವರೊಂದಿಗೆ ಹಂಚಿಕೊಳ್ಳಬೇಕು ಅಥವಾ ಅವರ ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಐಎಫ್‌ಎಸ್‌ಸಿ (IFSC code) ಕೋಡ್‌ ಅಥವಾ ಆಧಾರ್‌ ಕಾರ್ಡ್‌ ಸಂಖ್ಯೆಯನ್ನು ಹಣ ಪಡೆಯಲು ಹಂಚಿಕೊಳ್ಳಬೇಕಾಗುತ್ತದೆ. ಹಣ ಪಡೆಯುವವರು ತಮ್ಮ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿಕೊಂಡರೆ ವ್ಯವಹಾರದ ಬಗೆಗಿನ ವಿವರಗಳನ್ನು ಎಸ್‌ಎಮ್‌ಎಸ್‌ (SMS) ಸಂದೇಶಗಳ ಮೂಲಕ ಪಡೆದುಕೊಳ್ಳಬಹುದು.

SBI IMPS limit hiked from 2 lakh to 5 lakh

ಇದನ್ನೂ ಓದಿ: Bank KYC : ಕೆವೈಸಿ ಲಿಂಕ್ ಮಾಡದಿದ್ದರೆ ಬ್ಯಾಂಕ್ ಅಕೌಂಟ್ ಸ್ಥಗಿತವಾಗಬಹುದು ಎಚ್ಚರ

ಇದನ್ನೂ ಓದಿ: Bank Holidays January 2022 ರ ಜನವರಿ ತಿಂಗಳಲ್ಲಿ ಬ್ಯಾಂಕ್‌ಗಳಿಗೆ 16 ದಿನ ರಜೆ

Comments are closed.