ಏಟಿಎಂ ಯಂತ್ರದಲ್ಲಿ ನಿಮ್ಮ ಏಟಿಎಂ ಕಾರ್ಡ್ ಸಿಲುಕಿದರೆ ಏನು ಮಾಡಬೇಕು ಗೊತ್ತಾ?
ಏಟಿಎಂ ಯಂತ್ರದಲ್ಲಿ ಡೆಬಿಟ್ ಕಾರ್ಡ್ ಸಿಲುಕಿದರೆ ಗಾಬರಿಯಾಗದೆ ತಕ್ಷಣ ಬ್ಯಾಂಕ್ಗೆ ಮಾಹಿತಿ ನೀಡಿ, ಕಾರ್ಡ್ ಬ್ಲಾಕ್ ಮಾಡುವ ಮೂಲಕ ಹಣದ ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರು ಹಣ ತೆಗೆಯಲು ಏಟಿಎಂ ಸೇವೆಯನ್ನೇ ಹೆಚ್ಚು ಬಳಸುತ್ತಿದ್ದಾರೆ. ಆದರೆ ಕೆಲವೊಮ್ಮೆ ವ್ಯವಹಾರ ಪೂರ್ಣಗೊಂಡ ಬಳಿಕವೂ ಡೆಬಿಟ್ ಕಾರ್ಡ್ ಯಂತ್ರದೊಳಗೆ ಸಿಲುಕಿಕೊಳ್ಳುವ ಘಟನೆಗಳು ನಡೆಯುತ್ತವೆ. ಇಂತಹ ಸಂದರ್ಭ ಎದುರಾದಾಗ ಹಲವರು ಆತಂಕಕ್ಕೆ ಒಳಗಾಗುತ್ತಾರೆ. ಆದರೆ ಸಮಯಕ್ಕೆ ಸರಿಯಾದ ಕ್ರಮ ಕೈಗೊಂಡರೆ ಯಾವುದೇ ತೊಂದರೆ ಆಗುವುದಿಲ್ಲ.
ತಾಂತ್ರಿಕ ದೋಷ, ನೆಟ್ವರ್ಕ್ ಸಮಸ್ಯೆ ಅಥವಾ ಭದ್ರತಾ ಕಾರಣಗಳಿಂದ ಕಾರ್ಡ್ ಯಂತ್ರದೊಳಗೆ ಉಳಿಯುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ತಪ್ಪು ಪಿನ್ ಸಂಖ್ಯೆಯನ್ನು ಮೂರಕ್ಕಿಂತ ಹೆಚ್ಚು ಬಾರಿ ನಮೂದಿಸಿದರೆ, ಸುರಕ್ಷತಾ ಕ್ರಮವಾಗಿ ಏಟಿಎಂ ಕಾರ್ಡ್ ಅನ್ನು ಯಂತ್ರವೇ ಹಿಡಿದುಕೊಳ್ಳುತ್ತದೆ.
ಇಂತಹ ಸಂದರ್ಭದಲ್ಲಿ ಮೊದಲಿಗೆ ಶಾಂತವಾಗಿರುವುದು ಮುಖ್ಯ. ಕಾರ್ಡ್ ಹೊರತೆಗೆದಲು ಕೈಯಿಂದ ಎಳೆಯುವುದು, ಸೂಜಿ ಅಥವಾ ಬೇರೆ ವಸ್ತು ಬಳಸಿ ಒತ್ತುವುದು ದೊಡ್ಡ ತಪ್ಪಾಗಬಹುದು. ಇದರಿಂದ ಕಾರ್ಡ್ ಇನ್ನಷ್ಟು ಒಳಗೆ ಹೋಗುವ ಅಥವಾ ಹಾನಿಯಾಗುವ ಸಾಧ್ಯತೆ ಇರುತ್ತದೆ.
ಕಾರ್ಡ್ ಸಿಲುಕಿದ ತಕ್ಷಣವೇ ಬ್ಯಾಂಕ್ನ ಗ್ರಾಹಕ ಸೇವಾ ಸಂಖ್ಯೆಗೆ ಕರೆ ಮಾಡಬೇಕು. ಏಟಿಎಂ ಇರುವ ಸ್ಥಳ, ಸಮಯ ಮತ್ತು ಯಂತ್ರದ ATM ID ವಿವರಗಳನ್ನು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರೆ ಸಮಸ್ಯೆ ಬೇಗ ಪರಿಹಾರವಾಗಬಹುದು. ಸಾಮಾನ್ಯವಾಗಿ ATM ID ಯಂತ್ರದ ಮೇಲ್ಭಾಗದಲ್ಲಿ ಕಾಣಿಸುತ್ತದೆ.
ಹಣದ ಸುರಕ್ಷತೆ ದೃಷ್ಟಿಯಿಂದ ಕಾರ್ಡ್ ಅನ್ನು ತಕ್ಷಣ ಬ್ಲಾಕ್ ಮಾಡಿಸುವುದು ಅತ್ಯಂತ ಮುಖ್ಯ. ಮೊಬೈಲ್ ಬ್ಯಾಂಕಿಂಗ್ ಆಪ್ ಅಥವಾ ಕಸ್ಟಮರ್ ಕೇರ್ ಮೂಲಕ ಇದನ್ನು ಸುಲಭವಾಗಿ ಮಾಡಬಹುದು. ಕಾರ್ಡ್ ಬ್ಲಾಕ್ ಆದ ಬಳಿಕ ಯಾರೂ ನಿಮ್ಮ ಖಾತೆಯಿಂದ ಹಣ ತೆಗೆಯಲು ಸಾಧ್ಯವಾಗುವುದಿಲ್ಲ.
ಅತ್ಯಂತ ಸುರಕ್ಷಿತ ವಿಧಾನವೆಂದರೆ ಹೊಸ ಡೆಬಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು. ಬ್ಯಾಂಕ್ ಸಾಮಾನ್ಯವಾಗಿ 7 ರಿಂದ 10 ಕೆಲಸದ ದಿನಗಳಲ್ಲಿ ಹೊಸ ಕಾರ್ಡ್ ಅನ್ನು ಮನೆ ವಿಳಾಸಕ್ಕೆ ಕಳುಹಿಸುತ್ತದೆ. ನಿಮ್ಮದೇ ಬ್ಯಾಂಕ್ನ ಏಟಿಎಂನಲ್ಲಿ ಕಾರ್ಡ್ ಸಿಲುಕಿದ್ದರೆ ಪ್ರಕ್ರಿಯೆ ಬೇಗ ಮುಗಿಯುವ ಸಾಧ್ಯತೆ ಹೆಚ್ಚು ಇರುತ್ತದೆ.
ಬೇರೆ ಬ್ಯಾಂಕ್ನ ಏಟಿಎಂನಲ್ಲಿ ಕಾರ್ಡ್ ಸಿಲುಕಿದ್ದರೆ, ಪರಿಶೀಲನೆ ಪ್ರಕ್ರಿಯೆಗೆ ಸ್ವಲ್ಪ ಹೆಚ್ಚು ಸಮಯ ಬೇಕಾಗಬಹುದು. ನಂತರ ಬ್ಯಾಂಕ್ ಸೂಚನೆಯಂತೆ ಆಧಾರ್ ಅಥವಾ ಪ್ಯಾನ್ ಕಾರ್ಡ್ನಂತಹ ಗುರುತಿನ ಚೀಟಿ ತೆಗೆದುಕೊಂಡು ಶಾಖೆಗೆ ಭೇಟಿ ನೀಡಬೇಕು.



