Whatsapp ಹೊಸ ಫೀಚರ್: ಯೂಸರ್‌ನೇಮ್ ಸೌಲಭ್ಯ, ಗೌಪ್ಯತೆಯ ಜೊತೆಗೆ ಹೊಸ ಸವಾಲು

ವಾಟ್ಸ್ಆಪ್ (WhatsApp) ಹೊಸ ಯೂಸರ್‌ನೇಮ್ (Username) ಫೀಚರ್ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಮೊಬೈಲ್ ಸಂಖ್ಯೆ ಹಂಚಿಕೊಳ್ಳದೆ ಚಾಟ್ ಸಾಧ್ಯವಾಗಲಿದ್ದು, ಸೈಬರ್ ಭದ್ರತೆ ಕುರಿತ ಆತಂಕವೂ ಹೆಚ್ಚಿಸಿದೆ.

ವಾಟ್ಸ್ಆಪ್ (WhatsApp) ಬಳಕೆದಾರರಿಗೆ ಹೊಸ ಅನುಭವ ನೀಡುವ ಉದ್ದೇಶದಿಂದ ಯೂಸರ್‌ನೇಮ್ (Username) ಆಧಾರಿತ ಚಾಟ್ ವ್ಯವಸ್ಥೆಯನ್ನು ಹಂತ ಹಂತವಾಗಿ ಪರಿಚಯಿಸಲು ಆರಂಭಿಸಿದೆ. ಈ ಸೌಲಭ್ಯದಿಂದ ಇನ್ನು ಮುಂದೆ ಯಾರೊಂದಿಗೂ ಸಂಭಾಷಣೆ ಆರಂಭಿಸಲು ವೈಯಕ್ತಿಕ ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳುವ ಅಗತ್ಯ ಇರುವುದಿಲ್ಲ.

ಹೊಸ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಬಳಕೆದಾರರು ತಮ್ಮ ಇಚ್ಛೆಯ ವಿಶಿಷ್ಟ ಯೂಸರ್‌ನೇಮ್ ಆಯ್ಕೆ ಮಾಡಿಕೊಳ್ಳಬಹುದು. ಇನ್‌ಸ್ಟಾಗ್ರಾಂ ಹಾಗೂ ಇತರ ಸಾಮಾಜಿಕ ಜಾಲತಾಣಗಳ ಮಾದರಿಯಲ್ಲಿ ಈ ಹೆಸರು ಮೂಲಕವೇ ಸಂಪರ್ಕ ಸಾಧಿಸಲು ಅವಕಾಶ ಸಿಗಲಿದೆ. ಖಾತೆ ನೋಂದಣಿ ಮತ್ತು ಪರಿಶೀಲನೆಗೆ ಮೊಬೈಲ್ ಸಂಖ್ಯೆ ಕಡ್ಡಾಯವಾಗಿದ್ದರೂ, ದೈನಂದಿನ ಚಾಟ್‌ಗೆ ಯೂಸರ್‌ನೇಮ್ ಸಾಕಾಗುತ್ತದೆ.

ಈ ಫೀಚರ್‌ನಲ್ಲಿ ಹೆಚ್ಚುವರಿ ಭದ್ರತೆಗಾಗಿ ಯೂಸರ್‌ನೇಮ್ ಪಿನ್ ಅಥವಾ ಕೀ ಆಯ್ಕೆಯನ್ನೂ ನೀಡಲಾಗುತ್ತಿದೆ. ಇದರಿಂದ ಕೇವಲ ಯೂಸರ್‌ನೇಮ್ ತಿಳಿದಿದ್ದರೆ ಮಾತ್ರ ಯಾರೂ ನೇರವಾಗಿ ಸಂಪರ್ಕಿಸಲು ಸಾಧ್ಯವಾಗುವುದಿಲ್ಲ. ಬಳಕೆದಾರರ ಗೌಪ್ಯತೆಯನ್ನು ಬಲಪಡಿಸುವ ಉದ್ದೇಶದಿಂದ ಈ ವ್ಯವಸ್ಥೆಯನ್ನು ರೂಪಿಸಲಾಗಿದೆ.

ಇದರ ಜೊತೆಗೆ ವಾಟ್ಸ್ಆಪ್ ಸಾರ್ವಜನಿಕ ಯೂಸರ್‌ನೇಮ್ ಹುಡುಕಾಟ (Public Search Directory) ವ್ಯವಸ್ಥೆಯನ್ನು ನೀಡುವುದಿಲ್ಲ. ಅಂದರೆ, ನಿಮ್ಮ ನಿಖರವಾದ ಯೂಸರ್‌ನೇಮ್ ಗೊತ್ತಿದ್ದರೆ ಮಾತ್ರ ನಿಮ್ಮನ್ನು ಹುಡುಕಿ ಸಂಪರ್ಕಿಸಲು ಸಾಧ್ಯವಾಗುತ್ತದೆ. ಇದು ಅನಗತ್ಯ ಸಂಪರ್ಕಗಳನ್ನು ನಿಯಂತ್ರಿಸಲು ಸಹಾಯಕವಾಗಲಿದೆ.

ಆದರೆ ಈ ಹೊಸ ಫೀಚರ್ ಬಗ್ಗೆ ಸೈಬರ್ ಭದ್ರತಾ ತಜ್ಞರು ಕೆಲವು ಆತಂಕಗಳನ್ನು ವ್ಯಕ್ತಪಡಿಸಿದ್ದಾರೆ. ಬಳಕೆದಾರರು ತಮ್ಮ ಯೂಸರ್‌ನೇಮ್ ಅನ್ನು ಪದೇಪದೇ ಬದಲಾಯಿಸುವ ಅವಕಾಶ ಇದ್ದರೆ, ವಂಚಕರು ನಕಲಿ ಗುರುತಿನೊಂದಿಗೆ ಮೋಸ ಮಾಡುವ ಸಾಧ್ಯತೆ ಹೆಚ್ಚಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ.

ಒಮ್ಮೆ ವಂಚನೆ ನಡೆಸಿದ ಬಳಿಕ ಯೂಸರ್‌ನೇಮ್ ಬದಲಾಯಿಸಿದರೆ ಆರೋಪಿಗಳ ನಿಜವಾದ ಗುರುತು ಪತ್ತೆಹಚ್ಚುವುದು ಕಷ್ಟವಾಗಬಹುದು. ನಕಲಿ ಖಾತೆಗಳ ಬಳಕೆ ಹೆಚ್ಚುವ ಅಪಾಯವೂ ಇರುವುದರಿಂದ, ಈ ಫೀಚರ್‌ಗೆ ಮತ್ತಷ್ಟು ಭದ್ರತಾ ಕ್ರಮಗಳನ್ನು ಜೋಡಿಸುವ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸದ್ಯ ಈ ಹೊಸ ಯೂಸರ್‌ನೇಮ್ ಫೀಚರ್ ವಿಶ್ವದಾದ್ಯಂತ ಹಂತ ಹಂತವಾಗಿ ಬಿಡುಗಡೆಯಾಗುತ್ತಿದೆ. ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುವ ಮಹತ್ವದ ಹೆಜ್ಜೆಯಾದರೂ, ಅದರೊಂದಿಗೆ ಎದುರಾಗಬಹುದಾದ ಸೈಬರ್ ವಂಚನೆಗಳನ್ನು ತಡೆಯಲು ವಾಟ್ಸ್ಆಪ್ ಯಾವ ರೀತಿಯ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Sai Teja | ಸಾಯಿತೇಜ

Sai Teja | ಸಾಯಿತೇಜ ಕಳೆದ 7 ವರ್ಷಗಳ ಡಿಜಿಟಲ್ ಮೀಡಿಯಾ ಅನುಭವ ಹೊಂದಿದ್ದಾರೆ. ಸಾಯಿತೇಜಾ ಅವರು, ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಂತ್ರಜ್ಞಾನ ಹಾಗೂ ಬಿಸಿನೆಸ್, ಆಟೋಮೊಬೈಲ್‌ ಕ್ಷೇತ್ರದ ಪತ್ರಿಕೋದ್ಯಮದಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ಆನ್‌ಲೈನ್‌ ಸುದ್ದಿ ಲೋಕದಲ್ಲಿ ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ. ಕನ್ನಡ ನ್ಯೂಸ್‌ ನೆಕ್ಸ್ಟ್‌ನಲ್ಲಿ ಉಪ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. More »