ಜನರೆಲ್ಲಾ ನಿದ್ದೆಯಲ್ಲಿದ್ದಾಗ ‘ರಾಮಾಯಣ’ ಟ್ರೈಲರ್ ರಿಲೀಸ್; ಚಿತ್ರತಂಡದ ಈ ನಿರ್ಧಾರಕ್ಕೆ ಕಾರಣವೇನು ಗೊತ್ತಾ
ಮೊತ್ತಮೊದಲ ಬಾರಿಗೆ ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರವೊಂದರ ಟ್ರೈಲರ್ ಅನ್ನು ಬೆಳಗಿನ ಜಾವ 4:15ಕ್ಕೆ ಬಿಡುಗಡೆ ಮಾಡುವ ಮೂಲಕ 'ರಾಮಾಯಣ' (Ramayana) ಚಿತ್ರತಂಡ ಇತಿಹಾಸ ಸೃಷ್ಟಿಸಿದೆ.

ಮೊತ್ತಮೊದಲ ಬಾರಿಗೆ ಭಾರತೀಯ ಸಿನಿಮಾರಂಗದಲ್ಲಿ ಅತ್ಯಂತ ನಿರೀಕ್ಷಿತ ಚಿತ್ರವೊಂದರ ಟ್ರೈಲರ್ ಅನ್ನು ಬೆಳಗಿನ ಜಾವ 4:15ಕ್ಕೆ ಬಿಡುಗಡೆ ಮಾಡುವ ಮೂಲಕ ‘ರಾಮಾಯಣ’ (Ramayana) ಚಿತ್ರತಂಡ ಇತಿಹಾಸ ಸೃಷ್ಟಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಭೂಮಿಕೆಯಲ್ಲಿರುವ ಈ ಮಹಾಕಾವ್ಯ ಆಧಾರಿತ ಸಿನಿಮಾದ ಟ್ರೈಲರ್ ಅನ್ನು ಜನ ಸಾಮಾನ್ಯರು ನಿದ್ದೆ ಮಾಡುತ್ತಿರುವ ಸಮಯದಲ್ಲಿ ರಿಲೀಸ್ ಮಾಡಿದ್ದೇಕೆ? ಆ ಸಮಯಕ್ಕಿರುವ ವಿಶೇಷತೆ ಏನು? ಎಂಬ ಕುತೂಹಲ ಎಲ್ಲರಲ್ಲಿದೆ.
ಬ್ರಹ್ಮ ಮುಹೂರ್ತದ ಪವಿತ್ರ ಸಮಯ:
ಸಾಮಾನ್ಯವಾಗಿ ಯಾವುದೇ ಸಿನಿಮಾದ ಟ್ರೈಲರ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೀಕ್ಷಣೆ ಪಡೆಯಲು ಸಂಜೆ ಅಥವಾ ಮಧ್ಯಾಹ್ನದ ವೇಳೆ ಬಿಡುಗಡೆಯಾಗುತ್ತವೆ. ಆದರೆ, ರಾಮಾಯಣ ಚಿತ್ರತಂಡ ಮುಂಜಾನೆ 4:15 ಅನ್ನು ಆಯ್ಕೆ ಮಾಡಲು ಮುಖ್ಯ ಕಾರಣ ‘ಬ್ರಹ್ಮ ಮುಹೂರ್ತ’ (Brahma Muhurat).
ಸನಾತನ ಧರ್ಮ ಮತ್ತು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೂರ್ಯೋದಯಕ್ಕಿಂತ 1 ಗಂಟೆ 36 ನಿಮಿಷಗಳ ಮೊದಲು ಪ್ರಾರಂಭವಾಗುವ ಈ ಸಮಯವನ್ನು ಅತ್ಯಂತ ಪವಿತ್ರ, ಮಂಗಳಕರ ಮತ್ತು ದೈವಿಕ ಶಕ್ತಿ ಹೊಂದಿರುವ ಸಮಯ ಎಂದು ಪರಿಗಣಿಸಲಾಗುತ್ತದೆ.
4:15 AM ಸಮಯದ ಆ ವಿಶೇಷತೆಗಳೇನು?
ಜ್ಯೋತಿಷ್ಯದ ಪ್ರಕಾರ ಬ್ರಹ್ಮ ಮುಹೂರ್ತದಲ್ಲಿ ಸೃಷ್ಟಿಕರ್ತನಾದ ಬ್ರಹ್ಮದೇವ ಮತ್ತು ದೇವ-ದೇವತೆಗಳ ಧನಾತ್ಮಕ ಶಕ್ತಿಯು ವಾತಾವರಣದಲ್ಲಿ ಹೆಚ್ಚಿರುತ್ತದೆ. ಯಾವುದೇ ನೂತನ ಮತ್ತು ಸಾತ್ವಿಕ ಕಾರ್ಯಗಳನ್ನು ಪ್ರಾರಂಭಿಸಲು ಇದು ಅತ್ಯುತ್ತಮ ಮುಹೂರ್ತವಾಗಿದೆ.
“ಪವಿತ್ರ ಬ್ರಹ್ಮ ಮುಹೂರ್ತದ ಶುಭ ವೇಳೆಯಲ್ಲಿ ರಾಮಾಯಣದ ಉದಯವನ್ನು (Dawn of Ramayana) ನಾವು ಸ್ವಾಗತಿಸುತ್ತಿದ್ದೇವೆ” ಎಂದು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ತಿಳಿಸಿದ್ದಾರೆ.
ಶ್ರೀರಾಮನ ಚರಿತ್ರೆಯು ಮರ್ಯಾದೆ, ಧರ್ಮ ಮತ್ತು ಸತ್ಯದ ಸಂಕೇತವಾಗಿದೆ. ಅಂತಹ ಪವಿತ್ರ ಕಥೆಯ ಜಲಕ್ ಅನ್ನು ಬೆಳಗಿನ ಶುದ್ಧ ಮತ್ತು ಪ್ರಶಾಂತ ವಾತಾವರಣದಲ್ಲೇ ಜನರಿಗೆ ತಲುಪಿಸಬೇಕು ಎಂಬುದು ಚಿತ್ರತಂಡದ ಉದ್ದೇಶವಾಗಿತ್ತು.
ಬೆಳಗ್ಗೆಯಿಂದಲೇ ಟ್ರೆಂಡಿಂಗ್ನಲ್ಲಿ ಟ್ರೈಲರ್!
ಯಾರೂ ಇಂಟರ್ನೆಟ್ನಲ್ಲಿ ಸಕ್ರಿಯವಾಗಿರದ ಬೆಳಗಿನ ಜಾವದಲ್ಲಿ ಟ್ರೈಲರ್ ರಿಲೀಸ್ ಮಾಡಿದರೂ ಸಹ, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಕೋಟ್ಯಂತರ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ಬರೆದಿದೆ. ರಣಬೀರ್ ಕಪೂರ್ ಅವರ ಶ್ರೀರಾಮನ ಅವತಾರ ಹಾಗೂ ಯಶ್ ಅವರ ರಾವಣನ ಖಡಕ್ ಲುಕ್ ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

