Karnataka Voter List : 84 ಲಕ್ಷ ಮತದಾರರಿಗೆ ಗೇಟ್​ಪಾಸ್ : ಕರ್ನಾಟಕದಲ್ಲಿ ಎಸ್‌ಐಆರ್‌ ಎಫೆಕ್ಸ್‌

ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರ ಪ್ರಕಾರ, ತಾಂತ್ರಿಕ ಪರಿಶೀಲನೆ ವೇಳೆ 14.99 ಲಕ್ಷ ಮಂದಿ ಮೃತಪಟ್ಟಿರುವುದು ಹಾಗೂ 51.74 ಲಕ್ಷ ಜನ ಬೇರೆಡೆಗೆ ವಲಸೆ ಹೋಗಿರುವುದು ಪತ್ತೆಯಾಗಿದೆ. ಉಳಿದಂತೆ 5.62 ಲಕ್ಷ ಮತದಾರರು ಎರಡು ಕಡೆ ಹೆಸರು ಹೊಂದಿದ್ದು, 11.61 ಲಕ್ಷ ಜನರು ಪರಿಷ್ಕರಣೆ ವೇಳೆ ಸಿಕ್ಕಿಲ್ಲ.

ಬೆಂಗಳೂರೂ : ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆಯು ಮಹತ್ವದ ತಿರುವು ಪಡೆದುಕೊಂಡಿದೆ. ಅರ್ಹವಲ್ಲದ ಸುಮಾರು 84 ಲಕ್ಷ ಮತದಾರರನ್ನು ಕರಡು ಪಟ್ಟಿಯಿಂದ ಕೈಬಿಡಲು ಚುನಾವಣಾ ಆಯೋಗ ಮುಂದಾಗಿದೆ. ಗೈರುಹಾಜರಿ, ಮರಣ, ಶಾಶ್ವತ ಸ್ಥಳಾಂತರ ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ನೋಂದಾಯಿಸಿಕೊಂಡಿರುವ ಒಟ್ಟು 84.31 ಲಕ್ಷ ಮತದಾರರನ್ನು ಆಯೋಗವು ಸದ್ಯ ಎಎಸ್‌ಡಿಡಿಒ ವರ್ಗದ ಅಡಿಯಲ್ಲಿ ಪ್ರತ್ಯೇಕಿಸಿದೆ.

ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್‌ ಅವರ ಪ್ರಕಾರ, ತಾಂತ್ರಿಕ ಪರಿಶೀಲನೆ ವೇಳೆ 14.99 ಲಕ್ಷ ಮಂದಿ ಮೃತಪಟ್ಟಿರುವುದು ಹಾಗೂ 51.74 ಲಕ್ಷ ಜನ ಬೇರೆಡೆಗೆ ವಲಸೆ ಹೋಗಿರುವುದು ಪತ್ತೆಯಾಗಿದೆ. ಉಳಿದಂತೆ 5.62 ಲಕ್ಷ ಮತದಾರರು ಎರಡು ಕಡೆ ಹೆಸರು ಹೊಂದಿದ್ದು, 11.61 ಲಕ್ಷ ಜನರು ಪರಿಷ್ಕರಣೆ ವೇಳೆ ಸಿಕ್ಕಿಲ್ಲ. ನಿಯಮಗಳ ಪ್ರಕಾರ, ಯಾವುದೇ ಮತದಾರರನ್ನು ಈ ಪಟ್ಟಿಗೆ ಸೇರಿಸುವ ಮುನ್ನ ಬೂತ್ ಮಟ್ಟದ ಅಧಿಕಾರಿಗಳು ಸ್ಥಳ ಮಹಜರು ಮಾಡುವುದು ಕಡ್ಡಾಯವಾಗಿದೆ.

ಒಂದೊಮ್ಮೆ ಜೀವಂತವಿರುವ ಮತದಾರರ ಹೆಸರುಗಳು ಈ ಪಟ್ಟಿಯಲ್ಲಿ ತಪ್ಪಾಗಿ ದಾಖಲಾಗಿದ್ದರೆ, ತಿದ್ದುಪಡಿ ಮಾಡಿಕೊಳ್ಳಲು ಆಯೋಗವು ಸಾರ್ವಜನಿಕರಿಗೆ ಕೊನೆಯ ಅವಕಾಶ ನೀಡಿದೆ. ಬಾಧಿತ ನಾಗರಿಕರು ತಕ್ಷಣವೇ ತಮ್ಮ ಭಾಗದ ಬಿಎಲ್‌ಒಗಳನ್ನು ಭೇಟಿ ಮಾಡಿ, ಸೂಕ್ತ ದಾಖಲೆಗಳೊಂದಿಗೆ ಆಗಸ್ಟ್ 8ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಈ ಗಡುವಿನೊಳಗೆ ರೋಲ್‌ಬ್ಯಾಕ್ ಪ್ರಕ್ರಿಯೆ ಪೂರ್ಣಗೊಳಿಸಿದರೆ ಮಾತ್ರ ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಉಳಿಯಲು ಸಾಧ್ಯವಾಗುತ್ತದೆ.

ಆಗಸ್ಟ್ 17ರಂದು ಅಧಿಕೃತ ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ. ನಿಗದಿತ ದಿನಾಂಕದೊಳಗೆ ತಿದ್ದುಪಡಿ ಮಾಡದವರು, ಆ ನಂತರ ಹೊಸದಾಗಿ ಹೆಸರು ಸೇರಿಸಲು ಫಾರ್ಮ್-6 ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದರೊಂದಿಗೆ 2002ರ ಮೂಲ ಪಟ್ಟಿಯಲ್ಲಿ ಪೋಷಕರ ಹೆಸರಿಲ್ಲದಿದ್ದರೂ ಆತಂಕಪಡದೆ, ಅರ್ಜಿಗೆ ಸಹಿ ಮಾಡಿ ಬಿಎಲ್‌ಒಗಳಿಗೆ ನೀಡುವಂತೆ ಕೋರಲಾಗಿದೆ.

ರಾಜ್ಯದಲ್ಲಿ ಇನ್ನು 43.24 ಲಕ್ಷ ಮತದಾರರ ಗಣತಿ ನಮೂನೆಗಳ ಡಿಜಿಟಲೀಕರಣ ಬಾಕಿ ಉಳಿದಿದ್ದು, ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ. ಸಾರ್ವಜನಿಕರು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ತಮ್ಮ ಮತದಾನದ ಹಕ್ಕನ್ನು ಭದ್ರಪಡಿಸಿಕೊಳ್ಳಬಹುದಾಗಿದೆ.

karnataka voter list 84 lakh voters deleted sir effect

ರಶ್ಮಿ ಎಸ್. | Rashmi S.

ರಶ್ಮಿ ಎಸ್. ನ್ಯೂಸ್‌ ನೆಕ್ಸ್ಟ್‌ ಕನ್ನಡ ( News Next Kannada) ದಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಹತ್ತು ವರ್ಷಗಳ ಕಾಲ ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡಿದ್ದಾರೆ. ರಾಜಕೀಯ, ಕ್ರೀಡೆ, ವಾಣಿಜ್ಯ, ಸಿನಿಮಾ, ಸ್ಥಳೀಯ ಸುದ್ದಿಗಳನ್ನು ಪ್ರಕಟಿಸುತ್ತಿದ್ದಾರೆ. More »