ಕಷ್ಟಗಳನ್ನೇ ಎದುರಿಸಿ ಬೆಳೆದು ನಿಂತ ನಟ ಡಾ. ವಿಷ್ಣುವರ್ಧನ್‌ ಬಗ್ಗೆ ನಿಮಗೆಷ್ಟು ಗೊತ್ತು ?

ಸ್ಯಾಂಡಲ್‌ವುಡ್‌ನ ಸಾಹಸ ಸಿಂಹ ವಿಷ್ಣುವರ್ಧನ್ (Actor Dr. Vishnuvardhan) ಬದುಕಿದ್ದಾಗಲೂ ಅಷ್ಟೆ ನಿಧನರಾದ ಬಳಿಕವೂ ಅಷ್ಟೆ ಅವರಿಗೆ ಸಿಗಬೇಕಾದ ಪೂರ್ಣ ಪ್ರಮಾಣದ ಗೌರವ ಸಿಗಲಿಲ್ಲ. ಮೇರು ಪ್ರತಿಭೆ ಡಾ ರಾಜ್‌ಕುಮಾರ್ ನೆರಳಲ್ಲಿಯೇ ಸಿನಿರಂಗದಲ್ಲಿ ದಶಕಗಳನ್ನು ಸವೆಸಿದ ವಿಷ್ಣುವರ್ಧನ್ ಅವರಿಗೆ ನಿಜವಾಗಿಯೂ ಅವರಿಗೆ ಸಿಗಬೇಕಾದ ಗೌರವ, ಮಾನ್ಯತೆ ಕೊನೆಗೂ ಧಕ್ಕಲಿಲ್ಲ, ಮಾತ್ರವಲ್ಲ ಮೇರು ನಟನ ಅಭಿಮಾನಿಗಳ ವಿರೋಧವನ್ನು ಎದುರಿಸಿಕೊಂಡೇ ಬೆಳೆಯಬೇಕಾಯ್ತು ವಿಷ್ಣುವರ್ಧನ್. ಅವರ ನಿಧನದ ಬಳಿಕವೂ ಅವರ ಸ್ಮಾರಕ ಅಲ್ಲಾಗಬೇಕು, ಇಲ್ಲಾಗಬೇಕು, ಸರಕಾರ ಅಲ್ಲಿ ಭೂಮಿ ಕೊಡಬೇಕು, ಇಲ್ಲಿ ಕೊಡಬೇಕು ಎಂಬ ಹಲವು ನೂಕಾಟ-ತಳ್ಳಾಟಗಳು ನಡೆದು ಕೊನೆಗೂ ಇದೀಗ ಸ್ಮಾರಕ ನಿರ್ಮಾಣವಾಗಿದೆ.

ವಿಷ್ಣುವರ್ಧನ್ ನಿಧನವಾದ ಹದಿಮೂರು ವರ್ಷಗಳ ಬಳಿಕ ಸರಕಾರವು ಸ್ಮಾರಕ ನಿರ್ಮಾಣ ಮಾಡಿದೆ. ಮೈಸೂರಿನ ಎಚ್‌ಡಿ ಕೋಟೆ ರಸ್ತೆಯ ಹಾಲಾಳು ಬಳಿ ಸ್ಮಾರಕವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಇನ್ನಿತರರು ಉದ್ಘಾಟನೆ ಮಾಡಲಿದ್ದಾರೆ. ವಿಷ್ಣುವರ್ಧನ್ ಸಿನಿರಂಗ ಪ್ರವೇಶಿಸಿದಾಗಿನಿಂದಲೂ ಹೋರಾಟದ ಮೂಲಕವೇ ತಮ್ಮ ವೃತ್ತಿ ಜೀವನ ಕಟ್ಟಿಕೊಂಡವರು. ‘ನಾಗರಹಾವು’ ಸಿನಿಮಾ ಅತಿದೊಡ್ಡ ಹಿಟ್ ಆಯಿತಾದರೂ ಅದರ ನಂತರ ನಟಿಸಿದ ‘ಗಂಧದ ಗುಡಿ’ ಸಿನಿಮಾ ವಿಷ್ಣುವರ್ಧನ್ ಜೀವನದಲ್ಲಿ ಮರೆಯಲಾಗದ ಗಾಯ ಮಾಡಿಬಿಟ್ಟಿತು. ವಿಷ್ಣುವರ್ಧನ್ ಮಾಡದ ತಪ್ಪಿಗೆ ಅವರನ್ನು ದೂಷಿಸಲಾಯಿತು.

ಅದೂ ದಶಕಗಳ ವರೆಗೆ! ಮಾತನಾಡಿ ಸ್ಪಷ್ಟನೆ ಕೊಡಬೇಕಾದವರು ಕೊಡದ ಕಾರಣ ನಟ ವಿಷ್ಣುವರ್ಧನ್‌ ಮಾಡದ ತಪ್ಪಿಗೆ ವರ್ಷಗಳ ಗಟ್ಟಲೆ ನಿಂದನೆ, ಶಿಕ್ಷೆ ಅನುಭವಿಸುವಂತಾಯಿತು. ಆರಂಭದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ ವಿಷ್ಣುವರ್ಧನ್ ಆ ನಂತರ ಅದೇ ಯಶಸ್ಸು ಪುನರಾವರ್ತಿಸುವಲ್ಲಿ ವಿಫಲರಾದರು. ಅದಕ್ಕೆ ಸಿನಿಮಾ ರಂಗದ ರಾಜಕೀಯವೂ ಕಾರಣ ಎನ್ನಲಾಗುತ್ತದೆ. ಆದರೆ ವಿಷ್ಣುವರ್ಧನ್‌ಗೆ ತಮ್ಮ ಜೀವನದುದ್ದಕ್ಕೂ ಸಿಕ್ಕ ಗೆಳೆಯರು ಮಾಡಿದ ಸಹಾಯದಿಂದ ಪೂರ್ಣವಾಗಿ ಬೀಳದೆ ಹೋರಾಟದ ಮೂಲಕ ತಮ್ಮ ವೃತ್ತಿ ಬದುಕು ಕಟ್ಟಿಕೊಂಡರು. ವಿಷ್ಣುವರ್ಧನ್ ಜೀವನದಲ್ಲಿ ಅಂಬರೀಶ್, ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಅವರುಗಳು ಮಾಡಿದ ಸಹಾಯ ಮರೆಯುವಂತಿಲ್ಲ. ಆರಂಭದಲ್ಲಿ ದ್ವಾರಕೀಶ್ ಸಹ ವಿಷ್ಣು ಜೊತೆಗಿದ್ದರಾದರೂ ಬಳಿಕ ಇಬ್ಬರೂ ದೂರಾದರು.

ವಿಷ್ಣುವರ್ಧನ್‌ರ ಆತ್ಮೀಯ ಗೆಳೆಯ ಹಾಗೂ ಕನ್ನಡ ಸಿನಿರಂಗದ ಜನಪ್ರಿಯ ಸಿನಿಮಾ ನಿರ್ದೇಶಕ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ಅವರು ತಮ್ಮ ಪುಸ್ತಕ, ಅಂಕಣಗಳಲ್ಲಿ ವಿಷ್ಣುವರ್ಧನ್ ತಮ್ಮ ವೃತ್ತಿ ಬದುಕಿನ ಉದ್ದಕ್ಕೂ ಎದುರಿಸಿದ ಸಮಸ್ಯೆಗಳನ್ನು ಎಳೆ-ಎಳೆಯಾಗಿ ವಿವರಿಸಿದ್ದಾರೆ. ವಿಷ್ಣುವರ್ಧನ್ ಮದುವೆಯಾದ ದಿನವೂ ಸಹ ಕಲ್ಲೇಟು ತಿನ್ನಬೇಕಾದ ದುಸ್ಥಿತಿಯನ್ನು ಕಂಡವರು ಎಂದು ಬರೆದಿದ್ದಾರೆ. ವಿಷ್ಣುವರ್ಧನ್‌ರ ಕೆಲವು ಸಿನಿಮಾಗಳನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ಬಿಡುಗಡೆ ಮಾಡಿದ ಉದಾಹರಣೆಗಳೂ ಇವೆ.

ಇದನ್ನೂ ಓದಿ : Mandeep Roy death: ಕನ್ನಡ ಚಿತ್ರರಂಗದ ಹಿರಿಯ ನಟ ಮನ್‌ ದೀಪ್‌ ರಾಯ್‌ ನಿಧನ

ಇದನ್ನೂ ಓದಿ : ವಿಷ್ಣು ಸ್ಮಾರಕ ಉದ್ಘಾಟನೆ : ಕಟ್ಟಾ ಅಭಿಮಾನಿ ಕಿಚ್ಚ ಸುದೀಪ್‌ನಿಂದ ವಿಶೇಷ ಟ್ವೀಟ್‌

ಇದನ್ನೂ ಓದಿ : ಸ್ಯಾಂಡಲ್‌ವುಡ್‌ನ ಊರ್ಫಿಯಾದ ನಿವೇದಿತಾ : ಬಾರ್ಬಿ ಸುಂದರಿಯ ವೀಡಿಯೋ ವೈರಲ್

ವಿಷ್ಣು ಅಭಿಮಾನಿಗಳ ಮೇಲೆ ಹಲವು ಬಾರಿ ಹಲ್ಲೆಗಳಾಗಿದ್ದು ಇದೆ. ವಿಷ್ಣು ಸಿನಿಮಾಗಳಿಗೆ ಸಿನಿಮಂದಿರದ ಸಮಸ್ಯೆ, ಪ್ರಚಾರದ ಸಮಸ್ಯೆ, ನಿರ್ಮಾಪಕರ ಸಮಸ್ಯೆಗಳು ತೀರ ಸಾಮಾನ್ಯ ಎಂಬಂತಾಗಿತ್ತು. ಹಾಗಿದ್ದರೂ ಸಹ ಕುಗ್ಗದೆ ವಿಷ್ಣುವರ್ಧನ್ ಮುನ್ನಡೆ ಇಡುತ್ತಲೇ ಸಾಗಿ, ರಾಜ್‌ಕುಮಾರ್ ಬಳಿಕ ಕನ್ನಡ ಸಿನಿರಂಗದ ಮೇರು ನಟ ಎನಿಸಿಕೊಂಡರು. ವೃತ್ತಿ ಜೀವನದಲ್ಲಿ, ವೈಯಕ್ತಿಕ ಜೀವನದಲ್ಲಿ ಹಲವಾರು ಏರಿಳಿತಗಳನ್ನು ಕಂಡರೂ ಸಹ ವಿಷ್ಣುವರ್ಧನ್ ತಮ್ಮ ಸೌಮ್ಯ, ಶಾಂತ ಸ್ವಭಾವದಿಂದಲೇ ಎಲ್ಲವನ್ನೂ ಎದುರಿಸಿ ಗೆಲ್ಲುತ್ತಲೇ ಸಾಗಿ ಗೆದ್ದು ತೋರಿಸಿದರು.

Actor Dr. Vishnuvardhan grew up facing difficulties. How much do you know about Vishnuvardhan?

Comments are closed.