Sanchari Vijay : ಸಾವಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ : ಅಂಗಾಂಗ ದಾನ, ಹುಟ್ಟೂರಲ್ಲಿಂದು ಅಂತ್ಯಕ್ರೀಯೆ

ಬೆಂಗಳೂರು : ಸ್ಯಾಂಡಲ್ ವುಡ್ ನಟ, ರಂಗಭೂಮಿ ಕಲಾವಿದ, ರಾಷ್ಟ್ರೀಯ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಎರಡು ಕಣ್ಣು, ಎರಡು ಕಿಡ್ನಿ ಲಿವರ್ ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಸಂಚಾರಿ ವಿಜಯ್. ಕನ್ನಡ ಚಿತ್ರರಂಗ ಕಂಡ ಅಪ್ರತಿಮ ಕಲಾವಿದ. ತನ್ನ 36ನೇ ವಯಸ್ಸಿನಲ್ಲಿ ರಾಷ್ಟ್ರವೇ ಮೆಚ್ಚುವಂತಹ ಸಾಧನೆಯನ್ನು ಮಾಡಿದವರು. ಕನ್ನಡ ಚಿತ್ರರಂಗಕ್ಕೆ ರಾಷ್ಟ್ರಪ್ರಶಸ್ತಿಯನ್ನು ಮುಡಿಗೇರಿಸಿದವರು. ಆದ್ರಿಂದು ಸಂಚಾರಿ ವಿಜಯ್ ನಮ್ಮೊಂದಿಗಿಲ್ಲ. ಸ್ನೇಹಿತನ ಮನೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಶಸ್ತ್ರ ಚಿಕಿತ್ಸೆಯ ನಡುವಲ್ಲೇ ಮೆದುಳು ನಿಷ್ಕ್ರೀಯವಾದ ಹಿನ್ನೆಲೆಯಲ್ಲಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಸಂಚಾರಿ ವಿಜಯ್ ಬದುಕಿ ಬರೋದಿಲ್ಲ ಅನ್ನೋದು ಖಚಿತವಾಗುತ್ತಿದ್ದಂತೆಯೇ ವಿಜಯ್ ಸಹೋದರರು ಅಂಗಾಂಗ ದಾನಕ್ಕೆ ಮುಂದಾಗಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾನೆ 3.45ರ ಸುಮಾರಿಗೆ ವಿಜಯ್ ಬಾರದ ಲೋಕಕ್ಕೆ ಪಯಣಿಸಿದ್ದರು. ಬದುಕಿನುದ್ದಕ್ಕೂ ಪರೋಪಕರ, ಪರರಿಗೆ ಸಹಕಾರವನ್ನೇ ಮಾಡುತ್ತ ಬಂದಿದ್ದ ವಿಜಯ್ ಕಿಡ್ನಿ, ಕಣ್ಣು, ಲಿವರ್ ಮೂಲಕ ಇತರರಿಗೆ ಜೀವ ನೀಡಿದ್ದಾರೆ. ವಿಜಯ್ ಸಾವಿನ ಕುರಿತು ಅಪೋಲೋ ಆಸ್ಪತ್ರೆಯ ವೈದ್ಯರು ಅಧಿಕೃತವಾಗಿ ತಿಳಿಸಿದ್ದಾರೆ.

ಅಪೋಲೋ ಆಸ್ಪತ್ರೆಯಿಂದ ವಿಜಯ್ ಅವರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯವರೆಗೂ ಚಿತ್ರರಂಗದ ಗಣ್ಯರು, ರಂಗಭೂಮಿ ಕಲಾವಿದರು ಸೇರಿದಂತೆ ಗಣ್ಯರು ಅಂತಿಮ ದರ್ಶನ ಪಡೆಯಲಿದ್ದಾರೆ. ನಂತರ 10 ಗಂಟೆಗೆ ಪಾರ್ಥಿವ ಶರೀರವನ್ನು ಸಂಚಾರಿ ವಿಜಯ್ ಅವರ ಹುಟ್ಟೂರಾಗಿರುವ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿಗೆ ಕೊಂಡೊಯ್ದು ಸರಕಾರಿ ಗೌರವದೊಂದಿಗೆ ಅಂತ್ಯಕ್ರೀಯೆಯನ್ನು ನೆರವೇರಿಸಲಾಗುತ್ತದೆ.

ತನ್ನ 16ನೇ ವಯಸ್ಸಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ ವಿಜಯ್ ತನ್ನ ಅಣ್ಣನ ಆಶ್ರಯದಲ್ಲಿ ಬೆಳೆದರು. ಕಡೂರಿನಲ್ಲಿ ಹೈಸ್ಕೂಲು ಶಿಕ್ಷಣವನ್ನು ಪಡೆದ ನಂತರದಲ್ಲಿ ಬೆಂಗಳೂರಿನ ಪ್ರತಿಷ್ಠಿತ ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಶಿಕ್ಷಣವನ್ನು ಪೂರೈಸಿದ್ದಾರೆ. ನಂತರದಲ್ಲಿ ಕೆಇಐಟಿ ಶಿಕ್ಷಣ ಸಂಸ್ಥೆಯಲ್ಲಿ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಆದರೆ ರಂಗಭೂಮಿಯ ಕಡೆಗೆ ಒಲವು ಹೊಂದಿದ್ದ ವಿಜಯ್ ಸಂಚಾರಿ ನಾಟಕ ತಂಡದ ಮೂಲಕ ನಾಟಕ ರಂಗಕ್ಕೆ ಎಂಟ್ರಿಕೊಟ್ಟಿದ್ದರು. ಸುಮಾರು 20 ನಾಟಕಗಳಲ್ಲಿ ನಟಿಸಿದ್ದ ವಿಜಯ್ 2 ನಾಟಕಗಳನ್ನು ರಚಿಸಿದ್ದಾರೆ.

ನಾಟಕದ ಜೊತೆಗೆ ಸಿನಿಮಾ ರಂಗಕ್ಕೂ ಎಂಟ್ರಿಕೊಟ್ಟಿದ್ದ ಸಂಚಾರಿ ವಿಜಯ್ ಹಲವು ಏಳುಬೀಳುಗಳನ್ನು ಕಂಡಿದ್ದಾರೆ. ರಂಗಪ್ಪ ಹೋಗಿ ಬಿಟ್ನಾ ಅನ್ನೋ ಸಿನಿಮಾದ ಮೂಲಕ 2011ರಲ್ಲಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟ ಸಂಚಾರಿ ವಿಜಯ್ ನಾನು ಅವನಲ್ಲ ಅವಳು ಸಿನಿಮಾ ಚಿತ್ರರಂಗದಲ್ಲಿಯೇ ಹೊಸ ಇತಿಹಾಸವನ್ನು ಸೃಷ್ಟಿಸಿತ್ತು. ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ, ಫಿಲ್ಮಫೇರ್ ಪ್ರಶಸ್ತಿ, SIMMA ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ತನ್ನ 36ನೇ ವಯಸ್ಸಿನಲ್ಲಿಯೇ ಅಪ್ರತಿಮ ಸಾಧನೆಯನ್ನು ಮಾಡಿದ್ದ ಸಂಚಾರಿ ವಿಜಯ್ ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ಯೂ ನಟಿಸಿದ್ದಾರೆ. ಸಂಚಾರಿ ವಿಜಯ್ ನಿಧನ ಚಿತ್ರಂಗ, ಅಭಿಮಾನಿಗಳು ಮಾತ್ರವಲ್ಲ ಹುಟ್ಟೂರು ಪಂಚನಹಳ್ಳಿಯೀಗ ಮನೆ ಮಗನನ್ನು ಕಳೆದುಕೊಂಡು ಸೂತಕದಲ್ಲಿ ಮುಳುಗಿದೆ.

Comments are closed.