ಅಮ್ಮ ಐ ಲವ್ ಯು ಸಿನಿಮಾ ನೋಡಿ ಭಿಕ್ಷೆ ಬೇಡಲು ಮುಂದಾದ ಯುವಕ

ಉಡುಪಿ: ಸಿನಿಮಾ, ಸಿನಿಮಾ ನಟರನ್ನು ಅಭಿಮಾನಿ ಫಾಲೋ ಮಾಡೋದು ಮಾಮುಲು. ಸಿನಿಮಾ ಹೀರೋ ತರ ಕಟ್ಟಿಂಗ್ ಮಾಡಿಸೋದು, ಹಚ್ಚೆ ಹಾಕೋದು ಹಳೆಯ ಟ್ರೆಂಡ್. ಆದ್ರೀಗ ಇಲ್ಲೊಬ್ಬ ಯುವಕ ಸಿನಿಮಾದಿಂದ ಪ್ರಭಾವಿತನಾಗಿ ಭಿಕ್ಷೆ ಬೇಡೋದಕ್ಕೆ ಹೊರಟಿದ್ದಾರೆ.

ಸ್ಯಾಂಡಲ್ ವುಡ್ ಹೀರೋ ಚಿರಂಜೀವಿ ಸರ್ಜಾ ಅಭಿನಯದ ‘ಅಮ್ಮ ಐ ಲವ್ ಯು’ ಸಿನಿಮಾ ನೋಡಿ, 48 ದಿನಗಳ ಕಾಲ ಭಿಕ್ಷೆ ಬೇಡಲು ಹೊರಟ 22 ವರ್ಷದ ಯುವಕನೊಬ್ಬನನ್ನು ಸ್ಥಳೀಯರು ರಕ್ಷಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.

ಶ್ರೀಕೃಷ್ಣ ಮಠದ ಸುತ್ತುಮುತ್ತ ಭಿಕ್ಷೆ ಬೇಡುತ್ತಿದ್ದ ಯುವಕನನ್ನು, ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಮತ್ತು ತಾರಾನಾಥ್ ಮೇಸ್ತ ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದು ನಂತರ ಆತನ ಪೋಷಕರಿಗೆ ಹಸ್ತಾಂತರಿಸಿದ್ದಾರೆ. ಈ ಹಿಂದೆ ಧರ್ಮಸ್ಥಳ ಕ್ಷೇತ್ರದ ಬಳಿಯೂ ಭಿಕ್ಷಾಟನೆಗೆ ಇಳಿದಿದ್ದ ಯುವಕ, ಊರೂರು ತಿರುಗುತ್ತಾ ಬೇಡಿ ತಿನ್ನುತ್ತಿದ್ದ ಎಂದು ತಿಳಿದುಬಂದಿದೆ.

ಯುವಕನ ಬಳಿ ವಿಚಾರಿಸಿದಾಗ ತಾನು ಸಿನಿಮಾದಿಂದ ಪ್ರಭಾವಿತನಾಗಿ ಈ ಕಾರ್ಯ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಸಿನಿಮಾದಲ್ಲಿ ತೋರಿಸಿದ್ದೇ ಸತ್ಯ ಎಂದು ತಿಳಿದ ಯುವಕ, ತನ್ನ ಕಷ್ಟಗಳ ಪರಿಹಾರಕ್ಕಾಗಿ ಭಿಕ್ಷಾಟನೆಗೆ ಇಳಿದಿದ್ದ. ಚಿತ್ರದುರ್ಗ ಮೂಲದವನಾದ ಯುವಕ ನಿರುದ್ಯೋಗ ಸಮಸ್ಯೆ ಎದುರಿಸಲಾಗದೆ ಹೀಗೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.

ಜನರು ಸಿನಿಮಾ ನೋಡಿ ಹೆಚ್ಚು ಪ್ರಭಾವಿತರಾಗುತ್ತಾರೆ. ಸಿನಿಮಾದಲ್ಲಿ ಸೈನಿಕನಿಗೆ ಸಿಗುವ ಬೆಂಬಲ ನಿಜವಾದ ಸೈನಿಕನಿಗೆ ಸಿಗುವುದಿಲ್ಲ. ಸಿನಿಮಾದ ರೈತನಿಗೆ ಸಿಗುವ ಪ್ರೋತ್ಸಾಹ ನಿಜವಾದ ರೈತನಿಗೆ ಲಭಿಸುವುದಿಲ್ಲ. ಯುವಜನರು ಕಷ್ಟಗಳನ್ನು ಎದುರಿಸಲು ಕಲಿಯುತ್ತಿಲ್ಲ.

ತಕ್ಷಣವೇ ಶ್ರೀಮಂತ ಬದುಕನ್ನು ಬಯಸುತ್ತಾರೆ. ಬದುಕಿನಲ್ಲಿ ಕಷ್ಟಪಟ್ಟು, ಸೋಲನ್ನು ಎದುರಿಸಿ ನಂತರ ಯಶಸ್ವಿಯಾದ ಹಿರಿಯರನ್ನು ನಾವು ಮಾದರಿಯಾಗಿ ಸ್ವೀಕರಿಸಬೇಕು ಎಂದು ಸಮಾಜ ಸೇವಕ ವಿಶು ಶೆಟ್ಟಿ ಹೇಳಿದ್ದಾರೆ.

Comments are closed.