ಮಾಜಿ ಮೇಯರ್ ಸಂಪತ್ ರಾಜ್ ಅರೆಸ್ಟ್ : ಅಷ್ಟಕ್ಕೂ ಅಡಗಿಕುಳಿತಿದ್ದಾದ್ರೂ ಎಲ್ಲಿ ಗೊತ್ತಾ ?

ಬೆಂಗಳೂರು : ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ವೇಳೆಯಲ್ಲಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಮಾಜಿ ಮೇಯರ್ ಸಂಪತ್ ರಾಜ್ ಕೊನೆಗೂ ಬಂಧನವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ವಿಚಾರಣೆಯ ಬೆನ್ನಲ್ಲೇ ಕೊರೊನಾ ನೆಪವೊಡ್ಡಿ ಆಸ್ಪತ್ರೆಗೆ ದಾಖಲಾಗಿದ್ದ ಸಂಪತ್ ರಾಜ್, ಆಸ್ಪತ್ರೆಯಿಂದಲೇ ಎಸ್ಕೇಪ್ ಆಗಿದ್ದ. ಕಳೆದ ಮೂರು ತಿಂಗಳಿನಿಂದಲೂ ಪೊಲೀಸರು ಸಂಪತ್ ರಾಜ್ ಗಾಗಿ ಬಲೆ ಬೀಸಿದ್ದರು. ಆದರೆ ಸಂಪತ್ ರಾಜ್ ಸುಳಿವು ಸಿಕ್ಕಿರಲಿಲ್ಲ. ಇದೀಗ ಸಂಪತ್ ರಾಜ್ ಅಡಗಿ ಕುಳಿತಿದ್ದ ತಾಣವನ್ನು ಪತ್ತೆ ಹೆಚ್ಚುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಆಗಸ್ಟ್ ತಿಂಗಳಲ್ಲಿ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಮೇಲೆ ದಾಳಿ ನಡೆದಿತ್ತು. ಈ ಪ್ರಕರಣಕ್ಕೆ ಪ್ರಮುಖ ಆರೋಪಿಯಾಗಿರುವ ಸಂಪತ್ ರಾಜ್ ತಲೆ ಮರೆಸಿಕೊಂಡಿದ್ದ.

ಸಂಪತ್ ರಾಜ್ ಸೇರಿ ಹಲವು ಆರೋಪಿಗಳಿಗೆ ಆಶ್ರಯ ನೀಡಿದ್ದ ಆರೋಪದಡಿ ಸಂಪತ್ ರಾಜ್ ಸ್ನೇಹಿತ ರಿಯಾಜುದ್ದೀನ್ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ರಿಯಾಜುದ್ದೀನ್ ತನ್ನದೇ ಕಾರಿನಲ್ಲಿ ಆರೋಪಿಗಳನ್ನು ನಾಗರಹೊಳೆ ಬಳಿಯ ಫಾರ್ಮ್ ಹೌಸ್‍ಗೆ ಕರೆದೊಯ್ದಿದ್ದ ಎಂಬ ವಿಚಾರ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ.

ಆಸ್ಪತ್ರೆಯಿಂದಲೇ ರಿಯಾಜುದ್ದೀನ್ ತನ್ನ ಕಾರಿನಲ್ಲಿಯೇ ಸಂಪತ್ ರಾಜ್ ನನ್ನು ಕರೆದುಕೊಂಡು ತನ್ನ ಆಪ್ತರ ಬಳಿ ಬಿಟ್ಟಿದ್ದನು. ರಿಯಾಜುದ್ದೀನ್ ಶಿಷ್ಯರ ಚಲನವಲನ ಮೇಲೆಯೂ ಸಿಸಿಬಿ ತಂಡ ಕಣ್ಣಿಟ್ಟಿತ್ತು. ರಿಯಾಜುದ್ದೀನ್ ಶಿಷ್ಯರು ಸಂಪತ್ ರಾಜ್ ಜೊತೆ ನೇರ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

Comments are closed.