ಬಿಗ್ ಬಾಸ್ ಖ್ಯಾತಿಯ ನಟ ಧ್ರುವಂತ್‌ ಪೊಲೀಸ್ ಮೆಟ್ಟಿಲು: ಅಶ್ಲೀಲ ಟ್ರೋಲ್ ವಿರುದ್ಧ ದೂರು ದಾಖಲು!

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಶ್ಲೀಲವಾಗಿ ಟ್ರೋಲ್ ಮಾಡುತ್ತಿರುವವರ ವಿರುದ್ಧ 'ಬಿಗ್ ಬಾಸ್ ಕನ್ನಡ ಸೀಸನ್ 12' ಖ್ಯಾತಿಯ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅಶ್ಲೀಲವಾಗಿ ಟ್ರೋಲ್ ಮಾಡುತ್ತಿರುವವರ ವಿರುದ್ಧ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಖ್ಯಾತಿಯ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದ ತುಣುಕುಗಳನ್ನು ಬಳಸಿ ಕೆಲವರು ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ನಟ, ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ಹಾಗೂ ಬಸವೇಶ್ವರ ನಗರ ಸೈಬರ್ ಕ್ರೈಮ್ ವಿಭಾಗದಲ್ಲಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಧ್ರುವಂತ್ ಉಲ್ಲೇಖಿಸಿರುವ ಪ್ರಮುಖ ಅಂಶಗಳು:

“ನಾನು ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ನಟನಾಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋನ ಫೈನಲಿಸ್ಟ್ ಆಗಿ ಸಮಾಜದಲ್ಲಿ ಗೌರವ ಸಂಪಾದಿಸಿದ್ದೇನೆ. ಆದರೆ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಮೂಲಕ ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅವಾಚ್ಯ, ಅಶ್ಲೀಲ ಹಾಗೂ ಮಾನಹಾನಿಕಾರಕ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ” ಎಂದು ಧ್ರುವಂತ್ ದೂರಿನಲ್ಲಿ ತಿಳಿಸಿದ್ದಾರೆ.

“ಈ ರೀತಿಯ ಕೃತ್ಯಗಳು ನನ್ನ ಮಾನಸಿಕ ನೆಮ್ಮದಿಗೆ ಭಂಗ ತರುವುದರ ಜೊತೆಗೆ, ನನ್ನ ವೃತ್ತಿಜೀವನ ಮತ್ತು ಭವಿಷ್ಯದ ಉದ್ಯೋಗಾವಕಾಶಗಳ ಮೇಲೆ ದುಷ್ಪರಿಣಾಮ ಬೀರುತ್ತಿವೆ. ನಿರ್ಮಾಪಕರು, ನಿರ್ದೇಶಕರು ಹಾಗೂ ಬ್ರ್ಯಾಂಡ್‌ಗಳು ನನ್ನ ಬಗ್ಗೆ ತಪ್ಪು ಅಭಿಪ್ರಾಯ ಬೆಳೆಸಿಕೊಳ್ಳುವಂತಹ ವಾತಾವರಣವನ್ನು ಸೃಷ್ಟಿಸಲಾಗುತ್ತಿದೆ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುಳ್ಳು ಮತ್ತು ಮಾನಹಾನಿಕಾರಕ ಆರೋಪಗಳನ್ನು ಹರಡಿ, ಸಾರ್ವಜನಿಕವಾಗಿ ಅವಮಾನಿಸುವ ದುರುದ್ದೇಶದಿಂದ ಈ ಟ್ರೋಲ್ ಪೇಜ್‌ಗಳು ವರ್ತಿಸುತ್ತಿವೆ. ಇದರಿಂದ ತೀವ್ರ ಮಾನಸಿಕ ಯಾತನೆಯಾಗಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ನಟ ಆಗ್ರಹಿಸಿದ್ದಾರೆ.

ಸೋಷಿಯಲ್ ಮೀಡಿಯಾದ ದುರ್ಬಳಕೆ ಹಾಗೂ ಸೆಲೆಬ್ರಿಟಿಗಳ ಮೇಲಿನ ಆನ್‌ಲೈನ್ ಕಿರುಕುಳದ ವಿರುದ್ಧ ನಟ ಧ್ರುವಂತ್ ದಿಟ್ಟ ಹೆಜ್ಜೆ ಇಟ್ಟಿದ್ದು, ಪೊಲೀಸರು ಈ ಕುರಿತು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ.

Meghana Pranuth | ಮೇಘನಾ ಪ್ರಣೂತ್‌

ಮೇಘನಾ ಪ್ರಣೂತ್‌ ಮೂಲತಃ ಉಡುಪಿ ಜಿಲ್ಲೆಯವರು. ಪತ್ರಿಕೋದ್ಯಮದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಿನಿಮಾ, ಕ್ರೀಡೆ, ವಾಣಿಜ್ಯ, ಫ್ಯಾಷನ್‌ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದಾರೆ. ಇದೀಗ ನ್ಯೂಸ್‌ ನೆಕ್ಸ್ಟ್‌ನಲ್ಲಿ ನಿರೂಪಕರಾಗಿ, ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ.