Head Bush issue solved: ‘ಹೆಡ್ ಬುಶ್’ ವಿವಾದ ಅಂತ್ಯ; ಕ್ಷಮೆ ಕೋರಿ ಆಕ್ಷೇಪಾರ್ಹ ಪದ ತೆಗೆಯಲು ಒಪ್ಪಿದ ಚಿತ್ರತಂಡ

ಬೆಂಗಳೂರು: Head Bush issue solved: ರಾಜ್ಯಾದ್ಯಂತ ಕಿಡಿ ಹೊತ್ತಿಸಿದ್ದ ಹೆಡ್ ಬುಶ್ ಸಿನಿಮಾ ವಿವಾದಕ್ಕೆ ಇದೀಗ ಅಂತ್ಯ ಹಾಡಲಾಗಿದೆ. ಚಿತ್ರ ನಿರ್ಮಾಪಕ, ನಟ ಡಾಲಿ ಧನಂಜಯ್ ಅವರೇ ಖುದ್ದು ಕ್ಷಮೆ ಕೋರಿ ಸಿನಿಮಾದಲ್ಲಿ ಬಳಸಲಾಗಿದೆ ಎನ್ನಲಾದ ಆಕ್ಷೇಪಾರ್ಹ ಪದವನ್ನು ತೆಗೆದುಹಾಕುವುದಾಗಿ ಹೇಳಿ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ಹೆಡ್ ಬುಶ್ ಸಿನಿಮಾದಲ್ಲಿ ವೀರಗಾಸೆ ಹಾಗೂ ಕರಗಕ್ಕೆ ಅವಮಾನ ಮಾಡಲಾಗಿದೆ ಎಂಬ ಆರೋಪವು ಚಿತ್ರತಂಡದ ವಿರುದ್ಧ ಕೇಳಿಬಂದಿತ್ತು. ಸಿನಿಮಾದಲ್ಲಿ ಯಾರಿಗೂ ಯಾವುದೇ ರೀತಿಯಲ್ಲೂ ಅಪಮಾನ ಮಾಡಿಲ್ಲ ಅಂತ ಚಿತ್ರತಂಡ ಸ್ಪಷ್ಟನೆ ನೀಡಿದ್ದರೂ ಕೇಳದೆ ಅನೇಕ ಸಂಘಟನೆಗಳು ಚಿತ್ರತಂಡದ ವಿರುದ್ಧ ತಿರುಗಿಬಿದ್ದಿದ್ದವು. ಡಾಲಿ ಧನಂಜಯ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ ಚಿತ್ರ ಪ್ರದರ್ಶನ ತಡೆಯುವಂತೆ ಹಲವೆಡೆ ಪ್ರತಿಭಟನೆ ನಡೆಸಿದ್ದವು. ಈ ಬೆನ್ನಲ್ಲೇ ಅಭಿಮಾನಿಗಳು ಡಾಲಿ ಧನಂಜಯ್ ಅವರನ್ನು ಬೆಂಬಲಿಸಿ ಸೋಶಿಯಲ್ ಮೀಡಿಯಾದಲ್ಲಿ ಕ್ಯಾಂಪೇನ್ ಕೂಡಾ ಮಾಡಿದ್ದರು. ಆದರೆ ಈಗ ವಿವಾದಕ್ಕೆ ಸಂಬಂಧಿಸಿದಂತೆ ಚಿತ್ರತಂಡ ಸಭೆ ಸೇರಿ ದೃಶ್ಯದಲ್ಲಿ ಬಂದಿದೆ ಎನ್ನಲಾದ ಆಕ್ಷೇಪಾರ್ಹ ಪದವನ್ನು ಮ್ಯೂಟ್ ಮಾಡಲು ನಿರ್ಧರಿಸಿದೆ.

ಇಂದು ಮಧ್ಯಾಹ್ನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಚಿತ್ರತಂಡ ಹಾಗೂ ತಿಗಳರ ಸಮುದಾಯದವರು ಭಾಗವಹಿಸಿದ್ದರು. ಈ ವೇಳೆ ಎರಡೂ ಕಡೆಯವರು ಸಂಧಾನ ಮಾಡಿಕೊಳ್ಳುವುದರ ಮೂಲಕ ವಿವಾದ ಬಗೆಹರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಟ ಡಾಲಿ ಧನಂಜಯ್, ‘ಅಗ್ನಿ ಶ್ರೀಧರ್ ಸರ್ ಕರಗ ಎಪಿಸೋಡ್ ಬೇಡ ಅಂತ ಹೇಳಿದ್ದರು. ಆದರೆ ನಿರ್ದೇಶಕರು ಮತ್ತು ನಾನೇ ಆ ಸೀನ್ ಇರಲಿ ಅಂತ ಹಾಕಿಸಿದ್ದೆವು. ಆದರೆ ಆ ದೃಶ್ಯದಿಂದ ತಿಗಳರ ಸಮುದಾಯಕ್ಕೆ ನೋವಾಗಿದೆ ಅನ್ನೋದು ನಮ್ಮ ಗಮನಕ್ಕೆ ಬಂದಿದೆ. ತಪ್ಪಾಗಿದ್ದರೆ ಕ್ಷಮೆ ಕೇಳುತ್ತೇನೆ. ವೀರಗಾಸೆ ಕಲಾವಿದರಿಗೂ ನೋವಾಗಿದ್ದರೆ ಕ್ಷಮಿಸಬೇಕು. ಯಾರ ಭಾವನೆಗಳನ್ನು ನೋಯಿಸುವುದಕ್ಕೂ ನನಗೆ ಇಷ್ಟವಿಲ್ಲ. ಹೀಗಾಗಿ ಚಿತ್ರದಲ್ಲಿರುವ ಜುಜುಬಿ ಕರಗ ಎಂಬ ಪದವನ್ನು ಮ್ಯೂಟ್ ಮಾಡಲು ನಿರ್ಧರಿಸಿದ್ದೇವೆ. ಈ ವಿಚಾರವನ್ನು ಇಲ್ಲಿಗೆ ಬಿಟ್ಟು ಬೇರೆ ಕೆಲಸದತ್ತ ಗಮನಹರಿಸಬೇಕು. ಒಳ್ಳೆಯ ಸಿನಿಮಾಗಳನ್ನು ಮಾಡುವತ್ತ ಕೆಲಸ ಮಾಡಬೇಕು. ಚಿತ್ರ ವಿವಾದ ತಾರಕಕ್ಕೇರುತ್ತಿದ್ದಂತೆ ನನ್ನ ಮೇಲೆ ಅಪಾರ ಅಭಿಮಾನಿಗಳು ನನ್ನನ್ನು ಬೆಂಬಲಿಸಿ ಪ್ರೀತಿ ತೋರಿದ್ದಾರೆ.ಹೀಗಾಗಿ ನಾನು ಬಡವನಲ್ಲ, ಶ್ರೀಮಂತ’ ಎಂದು ಹೇಳಿದರು.

ಇದೇ ವೇಳೆ ಮಾತನಾಡಿದ ನಿರ್ದೇಶಕ ಅಗ್ನಿ ಶ್ರೀಧರ್, ‘ನಿನ್ನೆ ಕೋಪ ಮಾಡಿಕೊಂಡು ನಾನು ಮಾತನಾಡಿದ್ದು ಕಿಡಿಗೇಡಿಗಳ ವಿರುದ್ಧವೇ ಹೊರತು ತಿಗಳರ ಸಮುದಾಯದವರ ಮೇಲಲ್ಲ. ಅವರ ಕಷ್ಟ ನನಗೂ ಗೊತ್ತಿದೆ. ಸಿನಿಮಾದಲ್ಲಿ ಎಲ್ಲಿಯೂ ಅವರನ್ನು ಕೆಟ್ಟದಾಗಿ ತೋರಿಸಿಲ್ಲ’ ಎಂದರು.

ತಿಗಳರ ಸಮುದಾಯದ ರಾಜ್ಯಾಧ್ಯಕ್ಷ ಸುಬ್ಬಣ್ಣ ಮಾತನಾಡಿ, ‘ಹೆಡ್ ಬುಶ್ ಸಿನಿಮಾವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ. ದಸರಾ ಹಬ್ಬದಂತೆ ಬೆಂಗಳೂರಿನಲ್ಲಿ ಕರಗ ಉತ್ಸವವೂ ವಿಜೃಂಭಣೆಯಿಂದ ನಡೆಯುತ್ತದೆ. ಚಿತ್ರತಂಡ ಕರಗ ಉತ್ಸವ ತೋರಿಸಿದ ರೀತಿ ಸರಿಯಿಲ್ಲ ಅನ್ನೋದು ನಮ್ಮ ಆಕ್ಷೇಪಣೆ ಆಗಿತ್ತು. ಇದೇ ವಿಚಾರವಾಗಿ ಭಿನ್ನಾಭಿಪ್ರಾಯ ಎದುರಾಗಿತ್ತು. ಚಿತ್ರತಂಡ 2 ದಿನಗಳ ಕಾಲಾವಕಾಶ ಪಡೆದಿದ್ದು, ಜುಜುಬಿ ಕರಗ ಪದವನ್ನು ಮ್ಯೂಟ್ ಮಾಡುವುದಾಗಿ ಒಪ್ಪಿಕೊಂಡಿದೆ. ಅವರ ಈ ತೀರ್ಮಾನಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಸಮುದಾಯದ 65 ಲಕ್ಷ ಜನರೂ ಚಿತ್ರಮಂದಿರಕ್ಕೆ ತೆರಳಿ ಹೆಡ್ ಬುಶ್ ಸಿನಿಮಾ ವೀಕ್ಷಿಸುವಂತೆ ಮನವಿ ಮಾಡುತ್ತೇನೆ’ ಎಂದರು.

ಇದನ್ನೂ ಓದಿ: Surrogacy controversy: ಬಾಡಿಗೆ ತಾಯ್ತನ ವಿವಾದ: ಶಿವನ್ -ನಯನತಾರಾ ದಂಪತಿಗೆ ಕ್ಲೀನ್ ಚಿಟ್

ಇದನ್ನೂ ಓದಿ : Anand Mahindra:ಒಂದೇ ಬಾರಿಗೆ 15 ಚಿತ್ರಗಳನ್ನು ಒಟ್ಟಿಗೆ ಬಿಡಿಸಿದ ಯುವತಿ : ಭೇಷ್​ ಎಂದ ಆನಂದ್​ ಮಹೀಂದ್ರಾ,ಅನುಮಾನ ವ್ಯಕ್ತಪಡಿಸಿದ ನೆಟ್ಟಿಗರು

Head Bush issue solved dolly and team decided to mute dialogue about karaga

Comments are closed.