Kantara Song: ಸಕ್ಸಸ್ ಬೆನ್ನಲ್ಲೇ ಕಾಂತಾರ ಸಿನಿಮಾಕ್ಕೆ ಸಂಕಷ್ಟ; ‘ವರಾಹ ರೂಪಂ’ ಹಾಡು ಪ್ರಸಾರಕ್ಕೆ ಕೇರಳ ಕೋರ್ಟ್ ತಡೆಯಾಜ್ಞೆ

ಕೇರಳ: Kantara song: ಸಿನಿಮಾ ರಂಗದಲ್ಲಿ ಹೊಸ ದಾಖಲೆಯನ್ನೇ ಸೃಷ್ಟಿಸಿರುವ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾದ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ರಿಲೀಸ್ ಆಗಿರುವ ಈ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕೆಜಿಎಫ್ ರೆಕಾರ್ಡ್ ಕೂಡಾ ಈ ಸಿನಿಮಾ ಬ್ರೇಕ್ ಮಾಡಿದ್ದು ಹಳೆ ಸುದ್ದಿ. ಇಷ್ಟೆಲ್ಲಾ ಪಾಸಿಟಿವಿಟಿಗಳ ಮಧ್ಯೆ ಕಾಂತಾರ ಸಿನಿಮಾಗೆ ಕೇರಳ ಕೋರ್ಟ್ ಆಘಾತ ನೀಡಿದೆ.

ಕಾಂತಾರ ಸಿನಿಮಾದಲ್ಲಿರುವ ‘ವರಾಹ ರೂಪಂ’ ಹಾಡು ಸದ್ಯದ ಮಟ್ಟಿಗೆ ಎಲ್ಲರ ಫೇವರಿಟ್ ಆಗಿದೆ. ಎಲ್ಲರ ಬಾಯಲ್ಲೂ, ಟಿವಿ, ಮೊಬೈಲ್ ನಲ್ಲೂ ಇದೇ ಹಾಡು ಪ್ರತಿಧ್ವನಿಸುತ್ತಿರುತ್ತೆ. ಇಂಥ ಹಾಡಿನ ಪ್ರಸಾರಕ್ಕೆ ಕೇರಳದ ಕಲ್ಲಿಕೋಟೆಯ ಸೆಶನ್ಸ್ ಕೋರ್ಟ್ ತಡೆ ನೀಡಿದೆ. ಕಾಂತಾರದ ನಿರ್ಮಾಪಕರು, ನಿರ್ದೇಶಕರು, ಸಂಗೀತ ನಿರ್ದೇಶಕರು, ಹಾಡು ಪ್ರಸಾರ ಮಾಡುತ್ತಿರುವ ಅಮೆಜಾನ್ ಯೂಟ್ಯೂಬ್, ಸ್ಪೋಟಿಫೈ, ವಿಂಕ್, ಜಿಯೋ, ಸಾವನ್ ಸೇರಿದಂತೆ ಇನ್ನಿತರೆ ಆನ್ ಲೈನ್ ವೇದಿಕೆಗಳಿಗೆ ಆದೇಶ ಹೊರಡಿಸಿದೆ.

ಸೂಪರ್ ಹಿಟ್ ಸಿನಿಮಾ ಕಾಂತಾರದ ವರಾಹ ರೂಪಂ ಹಾಡು 5 ವರ್ಷದ ಹಿಂದೆ ನಾವು ರಚಿಸಿ ರಿಲೀಸ್ ಮಾಡಿದ್ದ ನವರಸಂ ಹಾಡಿನ ಕಾಪಿ ಎಂದು ಆರೋಪಿಸಿ ತೈಕುಡಂ ಬ್ರಿಡ್ಜ್ ಎಂಬ ಸಂಸ್ಥೆ ಕಲ್ಲಿಕೋಟೆಯ ಸೆಶನ್ಸ್ ಕೋರ್ಟ್ ಗೆ ನ್ಯಾಯಾಲಯದ ಮೊರೆ ಹೋಗಿತ್ತು. ಅಂತೆಯೇ ಇಂದು ವಿಚಾರಣೆ ನಡೆಸಿದ ಕೋರ್ಟ್ ವರಾಹ ರೂಪಂ ಹಾಡಿನ ಪ್ರಸರಣ ನಿಲ್ಲಿಸುವಂತೆ ಆದೇಶ ಹೊರಡಿಸಿದೆ.

ಮಲಯಾಳಂ ಸಿನಿಮಾದಿಂದ ಹಾಡು ಕಾಪಿ ಮಾಡಿದ್ದ ಆರೋಪ:
ಕಾಂತಾರ ರಿಲೀಸ್ ಆಗಿ ಸ್ವಲ್ಪ ದಿನಗಳಲ್ಲೇ ಹಾಡಿನ ಬಗ್ಗೆ ಹೊಸ ವಿವಾದ ಹುಟ್ಟಿಕೊಂಡಿತ್ತು. ವರಾಹ ರೂಪಂ ಹಾಡಿನ ಟ್ಯೂನ್ 5 ವರ್ಷ ಹಳೇ ಮಲಯಾಳಂ ಸಿನಿಮಾದಿಂದ ಕದಿಯಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಕಾಂತಾರಂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಈ ಹಾಡನ್ನು ಮಲಯಾಳದ ನವರಸಂ ಹಾಡಿನಿಂದ ಕಾಪಿ ಮಾಡಿದ್ದಾರೆ ಎಂದು ವಿವಾದ ಹುಟ್ಟಿಕೊಂಡಿತ್ತು. ಹೀಗಾಗಿ ಈ ಹಾಡನ್ನು ಒಳಗೊಂಡಿದ್ದ ಮಲಯಾಳಂನ ತೈಕುಡಂ ಬ್ರಿಡ್ಜ್ ತಂಡ ಕೋರ್ಟ್ ಮೆಟ್ಟಿಲೇರಿತ್ತು.

ಸಿನಿಮಾ ರಿಲೀಸ್ ಆದ ಆರಂಭದಲ್ಲೇ ವರಾಹ ರೂಪಂ ಮತ್ತು ನವರಸಂ ಹಾಡಿನ ನಡುವೆ ಸಾಮ್ಯತೆ ಇರುವ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಹಲವರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಅಜನೀಶ್ ಲೋಕನಾಥ್, ‘ನಾನು ಕಾಪಿ ಮಾಡಿಲ್ಲ. ಕೇವಲ ಸ್ಫೂರ್ತಿ ಪಡೆದು ರಚಿಸಿದ್ದೇನೆ. ರಾಗಗಳು ಒಂದೇ ಆಗಿರುವುದರಿಂದ ಸಾಮ್ಯತೆ ಸಹಜ’ ಎಂದಿದ್ದರು.

ಆದರೆ ಅದಕ್ಕೆ ಸುಮ್ಮನಾಗದ ತೈಕುಡಂ ಬ್ರಿಡ್ಜ್ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿತ್ತು. ‘ಯಾವ ರೀತಿಯಲ್ಲೂ ತೈಕುಡಂ ಬ್ರಿಡ್ಜ್ ತಂಡವು ಕಾಂತಾರ ತಂಡ ಜೊತೆಗೆ ಸಹಯೋಗ ಹೊಂದಿಲ್ಲ. ವರಾಹ ರೂಪಂ ಹಾಗೂ ನವರಸಂ ಹಾಡುಗಳಲ್ಲಿನ ಸಾಮ್ಯತೆಯು ಕಾಪಿರೈಟ್ ಕಾನೂನಿನ ಸ್ಪಷ್ಟ ಉಲ್ಲಂಘನೆಯನ್ನು ತೋರಿಸುತ್ತದೆ. ಇದರ ವಿರುದ್ಧ ಕಾನೂನು ಸಮರ ಮಾಡುವುದಾಗಿ ಹೇಳಿತ್ತು. ಇದೀಗ ಹಾಡಿನ ಪ್ರಸರಣಕ್ಕೆ ತಡೆ ತಂದಿರುವ ವಿಚಾರವನ್ನು ತೈಕುಡಂ ಬ್ರಿಡ್ಜ್ ಮ್ಯೂಸಿಕ್ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಬೆಂಬಲಿಗರಿಗೆ ಧನ್ಯವಾದ ತಿಳಿಸಿದೆ.

ಇದನ್ನೂ ಓದಿ: Dinesh Karthik: ದಿನೇಶ್ ಕಾರ್ತಿಕ್ ಪವರ್ ಹಿಟ್ಟಿಂಗ್ ಸಕ್ಸಸ್ ಹಿಂದೆ ಬೆಂಗಳೂರು ಕೋಚ್ RX

ಇದನ್ನೂ ಓದಿ: T20 World Cup 2022: ಭಾರತದ ಕೈಯಲ್ಲಿ ಪಾಕ್ ಭವಿಷ್ಯ, ಟೀಮ್ ಇಂಡಿಯಾ ಗೆಲುವಿಗೆ ಪಾಕಿಸ್ತಾನ ಪ್ರಾರ್ಥನೆ

kantara song: kantara-movies-varaha-rupam-song-banned-by-kallikote-court

Comments are closed.