Dinesh Mangalore: ನಟ ದಿನೇಶ್ ಮಂಗಳೂರು ಇನ್ನಿಲ್ಲ : ಕೆಜಿಎಫ್ ಖ್ಯಾತ ನಟನಿಗೆ ಆಗಿದ್ದೇನು?

Dinesh Mangalore: ಕನ್ನಡ ಚಿತ್ರರಂಗದ ಪ್ರಮುಖ ಪೋಷಕ ನಟರಾಗಿ ಗುರುತಿಸಿಕೊಂಡಿದ್ದ ದಿನೇಶ ಮಂಗಳೂರು ಇಂದು ಬೆಳಗಿನ ಜಾವ ಉಡುಪಿ ಜಿಲ್ಲೆಯ, ಕುಂದಾಪುರದ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸಿನಿಮಾವೊಂದರ ಚಿತ್ರೀಕರಣದ ವೇಳೆ ಪಾರ್ಶವಾಯುಗೆ ತುತ್ತಾಗಿ ಚೇತರಿಸಿಕೊಂಡಿದ್ದರೂ ಕೂಡಾ, ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದಿನೇಶ್‌ ಅವರು ಚಿಕಿತ್ಸೆ, ಫಲಿಸದೇ ಇಂದು ಮುಂಜಾನೆ ನಿಧನ ಹೊಂದಿದರು.

ಕಲಾ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿ ಪ್ರಮುಖ ಪೋಷಕ ನಟರಾಗಿ ಖ್ಯಾತಿಯನ್ನು ಅವರು ಪಡೆದಿದ್ದರು. ‘ಕೆಜಿಎಫ್’‌ ಚಿತ್ರದ ಬಾಂಬೆ ಡಾನ್‌ ಪಾತ್ರದಿಂದ ಭಾರತದೆಲ್ಲಡೆ ಇವರು ಜನಪ್ರಿಯಯಾಗಿದ್ದರು.

ಮೂಲತಃ ರಂಗಭೂಮಿಯ ಹಿನ್ನೆಲೆಯಿಂದ ಬಂದಿದ್ದ ದಿನೇಶ್‌ ಮಂಗಳೂರು ಅವರು ಆರಂಭದಲ್ಲಿ ಕಲಾ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದರು.

‘ಚಿನ್ನಾರಿ ಮುತ್ತ’ ಸೇರಿ ಕೆಲವು ಚಿತ್ರಗಳಿಗೆ ಸಹಾಯಕರಾಗಿ ಕೆಲಸ ಮಾಡಿದ್ದ ದಿನೇಶ್‌, ಟಿ.ಎಸ್‌ ನಾಗಾಭರಣ ನಿರ್ದೇಶದ ‘ಜನುಮದ ಜೋಡಿ ಚಿತ್ರದ ಮೂಲಕ ಸ್ವತಂತ್ರ ಕಲಾ ನಿರ್ದೇಶಕರಾದರು.

ಇವರಿಗೆ ಶಿವರಾಜ್‌ ಕುಮಾರ್‌ ಅಭಿನಯದ ‘ರಾಕ್ಷಸ’ ಚಿತ್ರದ ಆರ್ಟ್‌ ವರ್ಕ್‌ಗೆ 2004–2005ನೇ ಸಾಲಿನ ಅತ್ಯುತ್ತಮ ಕಲಾ ನಿರ್ದೇಶಕ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇದನ್ನೂ ಓದಿ: ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ನಟಿ ರಕ್ಷಿತಾ ಪ್ರೇಮ್ ಭೇಟಿ

ದಿನೇಶ ಮಂಗಳೂರು ನಟಿಸಿದ ಸಿನಿಮಾಗಳೆಷ್ಟು?

ಮೂಲತಃ ಮಂಗಳೂರಿನವರಾಗಿದ್ದ ದಿನೇಶ ಮಂಗಳೂರು ಅವರು ಕನ್ನಡ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಗುರುತಿಸಿಕೊಳ್ಳುವುದರ ಜೊತೆಜೊತೆಗೆ ಪ್ರಮುಖ ಪೋಷಕ ಪಾತ್ರಗಳಲ್ಲಿಯೂ ನಟಿಸಿ ಖ್ಯಾತರಾಗಿದ್ದರು. ಅವರು ‘ಚಿನ್ನಾರಿ ಮುತ್ತ’, ‘ಜನುಮದ ಜೋಡಿ’, ‘ವೀರ ಮದಕರಿ’, ‘ಚಂದ್ರಮುಖ ಪ್ರಾಣಸಖಿ’, ‘ನಂ 73 ಶಾಂತಿನಿವಾಸ’, ‘ರಾಕ್ಷಸ’ ಚಿತ್ರಗಳಿಗೆ ಕಲಾ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.

ಇವರಿಗೆ, ಮೊದಲಬಾರಿಗೆ ಒಬ್ಬ ಕಲಾವಿದನಾಗಿ ಹೆಸರು ತಂದುಕೊಟ್ಟ ಚಿತ್ರ ‘ಆ ದಿನಗಳು’. ಅದರಲ್ಲಿ ದಿನೇಶ್‌, ಸೀತಾರಾಮ್‌ ಶೆಟ್ಟಿ ಪಾತ್ರಕ್ಕೆ ಜೀವತುಂಬಿದ್ದರು. ಇದಾದ ನಂತರ ಅವರು ‘ಉಳಿದವರು ಕಂಡಂತೆ’, ‘ರಿಕ್ಕಿ’, ‘ಕಿರಿಕ್‌ ಪಾರ್ಟಿ’, ‘ರಣ ವಿಕ್ರಮ’, ‘ಹರಿಕಥೆ ಅಲ್ಲ ಗಿರಿಕಥೆ’, ‘ಭುವನಂ ಗಗನಂ’, ‘ಎಲ್ಲೋ ಜೋಗಪ್ಪ ನಿನ್ನ ಅರಮನೆ’ ಮುಂತಾದ ಹಲವು ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಹೃದಯ ಗೆದ್ದಿದ್ದರು. ಆದರೆ ‘ಕೆಜಿಎಫ್‌’ ಚಿತ್ರದ ‘ಬಾಂಬೆ ಡಾನ್’ ಪಾತ್ರವು ಇವರನ್ನು ಅದೇ ಹೆಸರಿನಿಂದ ಕರೆಯುಷ್ಟು ಜನಪ್ರಿಯತೆ ತಂದುಕೊಟ್ಟಿತು.

ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಗುರುತಿಸಿಕೊಂಡು ಜನಪ್ರಿಯರಾಗಿದ್ದ ದಿನೇಶ್‌ ಮಂಗಳೂರು ಅವರ ನಿಧನದಿಂದ ಕನ್ನಡ ಚಿತ್ರರಂಗ ಒಬ್ಬ ಉತ್ತಮ ಕಲಾ ನಿರ್ದೇಶಕ ಹಾಗೂ ಕಲಾವಿದನನ್ನು ಕಳೆದುಕೊಂಡ ದುಃಖ ಅನುಭವಿಸುತ್ತಿದೆ.

(KGF fame Dinesh Mangalore passes away loss of a supporting actor for Sandalwood)

Kannada News Next Desk

Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021

Related Stories