ಸಾರಿಗೆ ಮುಷ್ಕರಕ್ಕೆ ಬುದ್ಧಿಮಾತಲ್ಲೇ ಸಾಂತ್ವನ ಹೇಳಿದ ರಾಕಿಂಗ್ ಸ್ಟಾರ್…! ಯಶ್ ಬರೆದ ಉತ್ತರದಲ್ಲೇನಿದೆ ಗೊತ್ತಾ?!

ಕಳೆದ 8 ದಿನಗಳಿಂದಲೂ ರಸ್ತೆಗೆ ಬಸ್ ಇಳಿಸದೇ ಮುಷ್ಕರಕ್ಕೆ ಮುಂದಾಗಿರೋ ಸಾರಿಗೆ ನೌಕರರು ಸರ್ಕಾರದ ಸ್ಪಂದನೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಮಧ್ಯೆ ಸಹಾಯ ಕೋರಿ ಯಶ್ ಗೆ ಪತ್ರಬರೆದ ನೌಕರರಿಗೆ ಬುದ್ಧಿಮಾತಿನ ಸಾಂತ್ವನ ಸಿಕ್ಕಿದ್ದು, ಸಮಸ್ಯೆಗೆ ಸಮಸ್ಯೆಯೇ ಪರಿಹಾರವಲ್ಲ ಎಂದ ಯಶ್ ಮುಷ್ಕರ ಸರಿಯಲ್ಲ ಎಂದಿದ್ದಾರೆ.

ಸಾರಿಗೆ ಇಲಾಖೆ ನೌಕರರ ಹೋರಾಟ ನಿಧಾನಕ್ಕೆ ಸೋಲುವಂತಿದ್ದು, ಹಲವು ನೌಕರರು ಈಗಾಗಲೇ ಡ್ಯೂಟಿಗೆ ಹಾಜರಾಗುತ್ತಿದ್ದಾರೆ. ಈ ಮಧ್ಯೆ ನಮ್ಮ ಕಷ್ಟ ನಿಮಗೂ ಗೊತ್ತು ಸಹಾಯಕ್ಕೆ ಬನ್ನಿ ಎಂದು  ಸಾರಿಗೆ ನೌಕರರ ಒಕ್ಕೂಟ ರಾಕಿಂಗ್ ಸ್ಟಾರ್ ಯಶ್ ಗೆ ಮನವಿ ಮಾಡಿತ್ತು.

ನೀವು ಸಾರಿಗೆ ನೌಕರರ ಮಗ. ಹೀಗಾಗಿ ನಿಮಗೆ ನಮ್ಮ ಕಷ್ಟದ ಅರಿವಿದೆ. ನಮ್ಮನ್ನು ಬೆಂಬಲಿಸಿ ಎಂದು ಪತ್ರದಲ್ಲಿ ಕೋರಲಾಗಿತ್ತು. ಈ ಪತ್ರಕ್ಕೆ ರಾಕಿಂಗ್ ಸ್ಟಾರ್ ಯಶ್ ಉತ್ತರ ನೀಡಿದ್ದು, ಸಾಂತ್ವನದ ನೆಪದಲ್ಲಿ ಕಿವಿಹಿಂಡಿ ಬುದ್ಧಿ ಮಾತು ಹೇಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ನಟ ಯಶ್.

ಬಹಿರಂಗವಾಗಿ ಸಾರಿಗೆ ನೌಕರರ ಒಕ್ಕೂಟಕ್ಕೆ ಪತ್ರ ಬರೆದಿರೋ ಯಶ್, ನಾನು ಇಂದು ಏನೇ ಆಗಿರಬಹುದು. ಆದರೆ ನಿಮ್ಮ ಸಂಸ್ಥೆಯ ಪ್ರಾಮಾಣಿಕ ಚಾಲಕನ ಪುತ್ರ ಎಂಬುದನ್ನು ಎಂದು ಮರೆಯೋದಿಲ್ಲ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮ ತಂದೆ ಹೇಗೆ ತನ್ನಿಂದ ಸಂಸ್ಥೆಯ ಕೆಲಸಕ್ಕೆ ತಡವಾಗಬಾರದು ಎಂದು ತಿಂಡಿ ತಿನ್ನದೇ ಡ್ಯೂಟಿಗೆ ಹೋಗುತ್ತಿದ್ದರು ಎಂಬುದನ್ನು ಉಲ್ಲೇಖಿಸಿದ್ದಾರೆ.

ನ್ಯಾಯಕ್ಕಾಗಿ ರಸ್ತೆಗಿಳಿದಿರುವ ಸಾರಿಗೆ ನೌಕರರ ಕೂಗು ಹಾಗೂ ಬಸ್ ಗಳ ಮುಷ್ಕರದಿಂದ ಸಮಸ್ಯೆಗಿಡಾಗಿರುವ ಮಧ್ಯಮವರ್ಗದ ಜನರ ಸಂಕಷ್ಟ ಎರಡೂ ನನ್ನನ್ನು ಬಹುವಾಗಿ ಕಾಡುತ್ತಿದೆ ಎಂದಿರುವ  ಯಶ್, ಈ ಬಗ್ಗೆ ಲಕ್ಷ್ಮಣ್ ಸವದಿಯವರ ಬಳಿ ಮಾತನಾಡಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಮುಖ್ಯ ಬೇಡಿಕೆಯಾದ ವೇತನದ ಬಗ್ಗೆಯೂ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ ಎಂದಿದ್ದಾರೆ.

ಅಷ್ಟೇ ಅಲ್ಲ ಒಂದು ಸಮಸ್ಯೆಗೆ ಇನ್ನೊಂದು ಸಮಸ್ಯೆ ಪರಿಹಾರವಲ್ಲ ಎಂದಿರುವ ಯಶ್, ಮುಕ್ತಮನಸ್ಸುಗಳ ಬಿಚ್ಚು ಮಾತು ಈ ಸಮಸ್ಯೆಗೆ ಉತ್ತರವಾಗಬಲ್ಲದು ಎಂಬ ನಂಬಿಕೆ ನನಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಸಾರಿಗೆ ನೌಕರರ ಸಮಸ್ಯೆಗೆ  ರಾಜಾಹುಲಿ ರಾಕಿಂಗ್ ಸ್ಟಾರ್ ಎಂಟ್ರಿಯಾಗಿದ್ದು, ಇದು ಹೋರಾಟದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತೆ. ಯಶ್ ಬುದ್ಧಿವಾದ ಸಾರಿಗೆ ನೌಕರರಿಗೆ ಅರ್ಥವಾಗುತ್ತಾ ಕಾದುನೋಡಬೇಕಿದೆ.  

Comments are closed.